ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಖ್ಯಾತ ಪತ್ರಕರ್ತ ಹಾಗೂ ಸಮಾಜ ಸೇವಕ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ (89 ) ಶುಕ್ರವಾರ ನಿಧನರಾದರು.
ಕಳೆದ ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಮಸ್ವಾಮಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ರಾಮಸ್ವಾಮಿ ಅವರು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಪರಿಸರ ಹೋರಾಟಗಳಲ್ಲಿ ದಶಕಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಚಾಮರಾಜಪೇಟೆಯ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪಾದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಇಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ಜರುಗಲಿವೆ ಎಂದು ಕುಟುಂಬಸ್ಥರು ಹಾಗೂ ಪರಿಷತ್ತಿನ ಮೂಲಗಳು ತಿಳಿಸಿವೆ.
ಬಹುಮುಖ ವ್ಯಕ್ತಿತ್ವದ ಸಾಕ್ಷಿಪ್ರಜ್ಞೆ:
1937ರಲ್ಲಿ ಜನಿಸಿದ ಎಸ್.ಆರ್. ರಾಮಸ್ವಾಮಿ ಕೇವಲ ಸಾಹಿತಿಯಷ್ಟೇ ಅಲ್ಲದೆ, ಕಲಾ ವಿಮರ್ಶಕರು, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 50ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 2,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ (1972-79) ಮತ್ತು ದೀರ್ಘಕಾಲದವರೆಗೆ ಉತ್ಥಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ದಶಕಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದರು.
ಪರಿಸರ ಮತ್ತು ಸಾಮಾಜಿಕ ಹೋರಾಟ:
ಸ್ವದೇಶಿ ಚಳವಳಿಯ ಪ್ರಬಲ ಪ್ರತಿಪಾದಕರಾಗಿದ್ದ ಇವರು, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶನ ನೀಡಿದ್ದರು. ವಿಶೇಷವಾಗಿ ಸಮುದಾಯ ಭೂಮಿಯ ಮೇಲಿನ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಜಯ ತಂದ ಘಟನೆಗಳು ಇಂದಿಗೂ ಸ್ಮರಣೀಯ. ಡಿ.ವಿ. ಗುಂಡಪ್ಪ, ವಿ. ಸೀತಾರಾಮಯ್ಯ ಅವರಂತಹ ದಿಗ್ಗಜರ ಒಡನಾಡಿಯಾಗಿದ್ದ ಇವರು ಸಾಂಸ್ಕೃತಿಕ ಲೋಕದ ಕೊಂಡಿಯಾಗಿದ್ದರು.ಇದನ್ನು ಓದಿ –ರಸ್ತೆ ಅಪಘಾತ ಸಂತ್ರಸ್ತರಿಗೆ ₹1.5 ಲಕ್ಷ ಉಚಿತ ಚಿಕಿತ್ಸೆ ಶಿಫಾರಸು
ಗೌರವ ಮತ್ತು ಪ್ರಶಸ್ತಿಗಳು:
ಇವರ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಹಾಗೂ ಕೆ.ಎಸ್.ಒ.ಯು ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿವೆ. ಇವರ ನಿಧನಕ್ಕೆ ಸಾಂಸ್ಕೃತಿಕ ಮತ್ತು ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.








