ಕಲಿಯುಗದ ಕಾಮಧೇನು ಕಲಿಯುಗದ ಕಲ್ಪತರು, ಎಂದು ಭಕ್ತಸಮೂಹದಿಂದ ಕರೆಸಿಕೊಳ್ಳುವ ಮಂತ್ರಾಲಯದ ಗುರುವರ್ಯರು ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ಶತಮಾನಗಳಿಂದ ಭಕ್ತರ ದೃಷ್ಟಿ ಪಥಕ್ಕೆ ಅಗೋಚರವಾಗಿ ಬೃಂದಾವನದಲ್ಲಿ ನಿಂತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಧರ್ಮತೀತವಾಗಿ ಭವ ಭಯವನ್ನು ನೀಗಿಸುತ್ತಿದ್ದಾರೆ.
ಧಾರ್ಮಿಕ ಆಚರಣೆ, ನಂಬಿಕೆ, ಶ್ರದ್ಧೆ, ಭಕ್ತಿ, ಪವಾಡಗಳನ್ನು ಅಚಲವಾಗಿ ನಂಬುವ ಅಥವಾ ನಂಬದೇ ಇರುವ ವಾಡಿಕೆ ಬಹು ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿದೆ. ಕೆಲವರು ವೈಚಾರಿಕತೆಯ ನಿಲುವನ್ನು ಹೊಂದಿದ ನಾಸ್ತಿಕರು ಹಾಗೂ ಕೆಲವರು ಧಾರ್ಮಿಕತೆಯ ತಾತ್ತ್ವಿಕ ಸಿದ್ಧಾಂತವನ್ನು ನಂಬುವ ಆಸ್ತಿಕರೂ ಇದ್ದಾರೆ. ಇವರಲ್ಲಿ ಯಾರಿಗೆ ಯಾವುದರಿಂದ ಸಂತೃಪ್ತಿ ಸಿಗುತ್ತೋ ಆ ಮಾರ್ಗವನ್ನು ಅನುಸರಿಸುತ್ತಾರೆ. ತಮ್ಮೂಲಕ ಜನರ ಮನೋಗತದಲ್ಲಿ ಸಂಚಲನ ಮೂಡಿಸುತ್ತಾ ಬದುಕಿನ ಮೌಲ್ಯಗಳನ್ನು ಬಿತ್ತುತ್ತಾರೆ.
ಮನುಷ್ಯನ ಮಾನಸಿಕತೆ ದಿನದಿಂದ ದಿನಕ್ಕೆ ದೌರ್ಬಲ್ಯವನ್ನು ಹೊಂದುತ್ತಿದೆ. ಅನೇಕ ಸಮಸ್ಯೆಗಳನ್ನು ಹೊತ್ತು ಜೀವನವನ್ನು ನಡೆಸುತ್ತಾನೆ. ಆ ಸಮಸ್ಯೆಯ ಹೊರೆಯನ್ನು ಇಳಿಸಿಕೊಳ್ಳಲು ದೇವರ, ಗುರುಗಳ ಸಾನ್ನಿಧ್ಯಕ್ಕೆ ಶರಣಾಗುತ್ತಾನೆ. ಅಂತಹವರ ಬದುಕಿಗೆ ಆಶಾಕಿರಣವಾಗಿ ಬದುಕಿನಲ್ಲಿ ದಿವ್ಯತೆಯ ಪ್ರಕಾಶವನ್ನು ಬೆಳಗಿಸಿ ಚಕಿತವನ್ನು ಮಾಡುತ್ತಿರುವವರೇ ಶ್ರೀ ಗುರುರಾಘವೇಂದ್ರರು.ಅಂತಹ ರಾಯರು ಮಾಡಿದ ಪವಾಡಗಳು ಒಂದಲ್ಲ ಎರೆಡಲ್ಲ, ನೂರಾರು ನಿದರ್ಶನ ಸಿಗುತ್ತವೆ. ಅದರಲ್ಲೂ ವಿಶೇಷವಾಗಿ ಮಾಡಿದ ಪವಾಡವೆಂದರೆ-
ದನ ಕಾಯುವವನು ದಿವಾನನಾದ ಕಥೆ:
ಸಾವಿರದ 1662ರಲ್ಲಿ ಬಿಜಾಪುರವನ್ನು ಆದಿಲ್ ಶಾ ಆಳುತ್ತಿದ್ದ ಸಂದರ್ಭದಲ್ಲಿ ಆದಿಲ್ ಶಾನ ನವಾಬನಾದ ಸಿದ್ಧಿ ಮಸೂದ ಎಂಬ ಕಂದಾಯ ಸಂಗ್ರಹಿಸುವುದಕ್ಕೆ ರಾಯಚೂರು ಸಮೀಪದ ಕಂಡಾಹಾರ ಗ್ರಾಮಕ್ಕೆ ಹೋಗಿದ್ದ , ಆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಇಬ್ಬರೂ ಕುದುರೆ ಸವಾರರು ಇವನ ಬಳಿ ಧಾವಿಸಿ ಬಂದು ಒಂದು ಖಾಸಗಿ ಪತ್ರವನ್ನು ನೀಡಿದರು . ಆದರೆ ಮಸೂದ್ ಖಾನ್ ಗೆ ಕನ್ನಡ ಓದುವುದಕ್ಕೆ ಬರುತ್ತಿರಲಿಲ್ಲ. ಸಮೀಪದಲ್ಲಿದ್ದ ವೆಂಕಣ್ಣನನ್ನು ಕರೆದು ಓದುವಂತೆ ಹೇಳಿದ್ದ. ವೆಂಕಣ್ಣ ಅನಕ್ಷರಸ್ಥ ನನಗೆ ಓದುವುದು ಸಾಧ್ಯವಿಲ್ಲ ಎಂದು ಹೇಳಿದ. ಕೋಪಗೊಂಡ ಆದಿಲ್ ಶಾ ಓದದೇ ಇದ್ದರೆ ಶಿಕ್ಷೆಯನ್ನು ಕೊಡುತ್ತೇನೆ ಎಂದ ಇದಕ್ಕೆ ಹೆದರಿದ ವೆಂಕಣ್ಣ ರಾಘವೇಂದ್ರ, ರಾಘವೇಂದ್ರ ಎಂದು ರಾಯರನ್ನು ಸ್ಮರಿಸಿದ ರಾಯರ ಕೃಪೆಯಿಂದ ಪತ್ರವನ್ನು ವೆಂಕಣ್ಣ ಸರಾಗವಾಗಿ ಓದಿ ಮುಗಿಸಿದ.
ಆನಂತರ ಉತ್ತಮ ವಿದ್ವಾಂಸನಿಂದ ಹೆಸರು ಪಡೆದ ವೆಂಕಣ್ಣ ಮುಂದೆ ದಿವಾನರಾಗಿ ಹೆಸರು ಪಡೆಯುತ್ತಾನೆ.ಈ ಹಿಂದೆ ದನಕಾಯುವ ವೆಂಕಣ್ಣನ ಜೀವನದಲ್ಲಿ ಒಂದು ಘಟನೆ ಕಾರಣ ಅದು ರಾಯರ ದರ್ಶನದಿಂದ ಮುಂದೆ ದಿವಾನರಾಗುತ್ತಾರೆ. ಒಮ್ಮೆ ಗುರು ರಾಘವೇಂದ್ರ ಸ್ವಾಮಿಗಳನ್ನು ಭೇಟಿ ಮಾಡುವ ಅವಕಾಶ ವೆಂಕಣ್ಣನಿಗೆ ಸಿಕ್ಕಿರುತ್ತದೆ. ವೆಂಕಣ್ಣ ರಾಯರ ಮುಂದೆ ತನ್ನ ಬಡತನ ಮತ್ತು ಓದು-ಬರಹ ಗೊತ್ತಿಲ್ಲದ ಬಗ್ಗೆ ಅಳಲನ್ನು ತೋಡಿಕೊಂಡಿದ್ದ, ಬೇಡಿಕೊಂಡಿದ್ದರು ವೆಂಕಣ್ಣನಿಗೆ ಮಂತ್ರಾಕ್ಷತೆಯನ್ನು ನೀಡಿ ನಿನಗೆ ಕಷ್ಟ ಬಂದಾಗ ನನ್ನನ್ನು ಸ್ಮರಿಸು ಎಂದು ಹೇಳಿರುತ್ತಾರೆ. ದನಕಾಯುವ ವೆಂಕಣ್ಣ ಪತ್ರವನ್ನು ಓದುವ ಮುಂಚೆ ರಾಘವೇಂದ್ರ ಸ್ವಾಮಿಗಳನ್ನು ಸ್ಮರಿಸಿದ್ದು, ನವಾಬನ ಮೆಚ್ಚುಗೆ ಪಾತ್ರವಾಗಿ ದಿವಾನಾದ.
ತನ್ನ ಜೀವನ ಪರ್ಯಂತ ದಿವಾನನಾದ ವೆಂಕಣ್ಣ ಗುರುರಾಯರ ಆಗದ ಸೇವೆಯನ್ನು ಮಾಡುತ್ತಾನೆ. ಈಗ ಮಂತ್ರಾಲಯವಾಗಿರುವ ಸ್ಥಳ ಹಿಂದೆ ಬರಡು ಭೂಮಿಯಾಗಿರುತ್ತದೆ. ಅಂತಹ ಬರಡು ಭೂಮಿಗೆ ಪ್ರೀತಿಯ ಸ್ಥಳವಾಗಿರುತ್ತದೆ. ಈ ಸ್ಥಳವನ್ನು ಉಡುಗರೆಯಾಗಿ ಕೊಡಿಸಿದ್ದ ಇದಿಷ್ಟೇ ಅಲ್ಲದೆ ವೆಂಕಣ್ಣ ಜೀವನದುದ್ದಕ್ಕೂ, ರಾಯರ ಸೇವೆ ಮಾಡುತ್ತಾ ಅವರ ಆತ್ಮೀಯ ಶಿಷ್ಯನಾಗಿದ್ದ.
ದಿವಾನರಾಗಿದ್ದ ವೆಂಕಣ್ಣ ಒಮ್ಮೆ ಅಸತ್ ಉಲ್ಲಾಖಾನ್ ಎನ್ನುವ ನವಾಬನಿಗೆ ಮಹಾಮಹಿಮರು ರಾಯರು ಬರುತ್ತಿದ್ದಾರೆ, ಅವರನ್ನು ಭೇಟಿ ಮಾಡಿ ಎಂದು ಹೇಳುತ್ತಾನೆ ನವಾಬನಿಗೆ ಯಾವ ಗುರುಗಳ ಬಗ್ಗೆ ನಂಬಿಕೆ ಇರುವುದಿಲ್ಲ . ಈ ಕಾರಣಕ್ಕಾಗಿಯೇ ಗುರುಗಳ ಪರೀಕ್ಷೆ ಮಾಡುವುದಕ್ಕಾಗಿ ಮುಂದಾಗುತ್ತಾನೆ. ಅಲ್ಲೇ ಇದ್ದ ಸೇವೆಗೆ ಒಂದು ತಟ್ಟೆ ತುಂಬಾ ಮಾಂಸವನ್ನು ತಂದು ಮುಂದಿಡುವಂತೆ ಹೇಳುತ್ತಾನೆ . ರಾಯರು ರಾಘವೇಂದ್ರ ಸ್ವಾಮಿಗಳ ಬಳಿ ಬಂದು ಗುರುಗಳಿಗೆ ನಮಸ್ಕರಿಸುತ್ತಾನೆ. ತಾನು ತಂದಿದ್ದ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಬೇಕು ಎಂದು ಹೇಳುತ್ತಾನೆ. ಮಾಂಸವಿರುವ ದೊಡ್ಡ ಹರಿವಾಣವನ್ನು ಗುರುರಾಯರಿಗೆ ಅರ್ಪಿಸುತ್ತಾನೆ. ಗುರುಗಳು ನಸುನಗುತ್ತ ತನ್ನ ಮಂತ್ರಶಕ್ತಿಯಿಂದ ಮಾಂಸವನ್ನು ಹಣ್ಣುಗಳನ್ನಾಗಿ ಪರಿವರ್ತನೆ ಮಾಡುತ್ತಾರೆ. ಈ ಪವಾಡವನ್ನು ಮಾಡಿದ ನಂತರ ನವಾಬನು ಗುರುಗಳಿಗೆ ಶರಣಾಗುತ್ತಾನೆ. ಇದು ರಾಯರ ಧರ್ಮ ಸಮನ್ವಯತೆಗೆ ಸಾಕ್ಷಿ ಯಾಗಿದೆ.
ರಾಯರಲ್ಲಿದ್ದು ದಯೆ, ಶಾಂತಿ, ಔದಾರ್ಯ, ವಿದ್ವತ್ತು, ಜ್ಞಾನ, ವಿಜ್ಞಾನ, ಗಾಂಭೀರ್ಯತೆಯ ನುಡಿ,ಸರ್ವೋತ್ಕೃಷ್ಟವಾದ ಪ್ರೇಮ ಜನರನ್ನು ಮಂತ್ರ ಮಗ್ನರನ್ನಾಗಿಸುವ ಶಕ್ತಿ ಸದಾ ರಾರಾಜಿಸುತ್ತದೆ. ಅವರು ಕೇವಲ ಪವಾಡಗಳನ್ನು ಮಾಡಲಿಲ್ಲ ಮಾನವೀಯ ಮೌಲ್ಯಗಳ ಸಾತ್ವಿಕ, ತಾತ್ತ್ವಿಕ ಸಿದ್ಧಾಂತದೊಂದಿಗೆ ಜನಮಾಸದಲ್ಲಿ ರಾರಾಜಿಸುವ ಹಾಗೆ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಹೃನ್ಮನಗಳಲ್ಲಿ ಪರಂಜ್ಯೋತಿ ಪ್ರಕಾಶಮಾನರಾಗಿ ರಾಯರು ದೀಪ್ಯಮಾನರಾಗಿದ್ದಾರೆ.
ರಾಯರ ಬೃಂದಾವನದ ಸ್ಥಳ ಶಿಲೆಯ ಮಹಿಮೆ
ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಇವರು ಶ್ರೀಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.
ಮಂಚಾಲೆಗ್ರಾಮವು ಈ ಹಿಂದೆ ಶ್ರೀ ಪ್ರಹ್ಲಾದರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರಸ್ಥಳ. ಆದುದರಿಂದಲೆ ಶ್ರೀ ರಾಘವೇಂದ್ರ ತೀರ್ಥರು ಮಂಚಾಲೆ ಗ್ರಾಮವನ್ನು ಆಯ್ಕೆ ಮಾಡಿಕೊಂಡರು.
ಕೊನೆಗೆ ಶ್ರೀ ರಾಘವೇಂದ್ರ ಗುರುಗಳು ವೃಂದಾವನವನ್ನು ಪ್ರವೇಶಿಸುವ ಸಮಯವು ಸಮೀಪಿಸಿತು. ವೆಂಕಣ್ಣ ವೃಂದಾವನವನ್ನು ಸಿದ್ಧಪಡಿಸಿದ ಮೇಲೆ ಆ ವಿಷಯವನ್ನು ಶ್ರೀಗಳವರಿಗೆ ತಿಳಿಸಿದನು. ಕೂಡಲೇ ಅವರು, ‘ವೆಂಕಣ್ಣಾ ಈ ವೃಂದಾವನವು ಭವಿಷ್ಯದಲ್ಲಿ ಮತ್ತೊಬ್ಬ ಯತಿಪುಂಗವನಿಗೆ ಉಪಯೋಗವಾಗುವುದು. ಆದುದರಿಂದ ನೀನು ಈಗ ಮಾಧವರ ಎಂಬ ಹಳ್ಳಿಯ ಸಮೀಪದಲ್ಲಿ ಒಂದು ದೊಡ್ಡ ಬಂಡೆಯಿದೆ, ಅದನ್ನು ತರಿಸಿ ವೃಂದಾವನ ಕಟ್ಟಿಸು’ ಎಂದರು. ವೆಂಕಣ್ಣನಿಗೆ ತಿಳಿಸಿದರು ವೆಂಕಣ್ಣನವರು ಗುರುಗಳಿಗೆ, ‘ಸ್ವಾಮಿ, ತಾವು ಮಾಧವರದ ಸಮೀಪದಲ್ಲಿ ಇರುವ ಕಲ್ಲಿನಿಂದ ವೃಂದಾವನ ನಿರ್ಮಿಸ ಬೇಕೆಂದು ಹೇಳಿದಿರಿ. ಅದಕ್ಕೆ ಕಾರಣ ಏನಾದರೂ ಇದ್ದರೆ ದಯವಿಟ್ಟು ಹೇಳಿ’ ಎಂದರು. ಆಗ ಶ್ರೀಗಳವರು, ‘ವೆಂಕಣ್ಣಾ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಅರಣ್ಯ ಸಂಚಾರ ಮಾಡುತ್ತಾ ಏಳು ಘಳಿಗೆಗಳ ಕಾಲ ನಾನೀಗ ಹೇಳಿದ ಶಿಲೆಯ ಮೇಲೆ ಕುಳಿತಿದ್ದರು. ಶ್ರೀರಾಮನ ಪಾದಸ್ಪರ್ಷದಿಂದ ಆ ಶಿಲೆ ಬಹಳ ಪ್ರಭಾವವುಳ್ಳದ್ದಾಗಿದೆ. ಆ ಕಲ್ಲನ್ನು 700 ವರ್ಷ ಪೂಜೆ ಮಾಡಿಸಿಕೊಳ್ಳ ಬೇಕಾಗಿದೆ. ಆದುದರಿಂದಲೇ ನಾನು ಆ ಶಿಲೆಯಿಂದ ವೃಂದಾವನವನ್ನು ನಿರ್ಮಿಸಲು ಹೇಳಿದೆನು’ ಎಂದು ವೆಂಕಣ್ಣನವರ ಸಂದೇಹವನ್ನು ನಿವಾರಿಸಿದರು.
ದೇವಾಲಯವು ಭಕ್ತವೃಂದದಲ್ಲಿ ಅತ್ಯಂತ ಜನಪ್ರೀಯವಾಗಿದ್ದು ಪ್ರತಿ ವರ್ಷ ರಾಯರ ಜಯಂತಿ ಸಮಯದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುವರು. ಎರಡು ದಿನಗಳ ಕಾಲ ಮುಂದುವರಿಯುವ ಈ ಸಂಭ್ರಮಾಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದು, ದೇವಸ್ಥಾನವು ಸಂಭ್ರಮ, ಸಡಗರಗಳಿಂದ ಕೂಡಿರುತ್ತದೆ. ಈ ಸಂಭ್ರಮಕ್ಕೆ ಕಾರಣ ಗುರುಗಳು ಇನ್ನೂ ವೃಂದಾವನದಲ್ಲಿದ್ದರೆಂಬ ಗಾಢವಾದ ನಂಬಿಕೆ. ವೃಂದಾವನ ಪ್ರವೇಶದ ವೇಳೆ ಗುರುಗಳು ಸ್ವತಃ ತಾವು ಮುಂದಿನ 361 ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸುವದಾಗಿ ಹೇಳಿದ್ದರೆಂಬುದು ಈ ನಂಬಿಕೆಗೆ ಪುಷ್ಠಿಕೊಡುತ್ತದೆ.
ಪ್ರತಿವರ್ಷ ಜಗತ್ತಿನಾದ್ಯಂತ ಶ್ರೀ ರಾಘವೇಂದ್ರ ಸ್ವಾಮಿಗಳ ಪುಣ್ಯಾರಾಧನೆ ನಡೆಯುತ್ತದೆ . ರಾಘವೇಂದ್ರ ಸ್ವಾಮಿಗಳು ಸಜೀವ ಬೃಂದಾವನಸ್ಥರಾಗಿ ಇಂದಿಗೆ 354 ವರ್ಷಗಳು ಸಂದಿವೆ. ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನವಿರುವುದು ತುಂಗಭದ್ರಾ ನದಿಯ ತಟದ ಪುಣ್ಯ ಪರಿಸರದ ಮಂತ್ರಾಲಯದಲ್ಲಿ. ಗುರುಗಳ ಪುಣ್ಯಾರಾಧನೆಯ ಮಹೋತ್ಸವ ಮಂತ್ರಾಲಯದಲ್ಲಿ ನಡೆಯುವ ಬಹುದೊಡ್ಡ ವಾರ್ಷಿಕ ಮಹೋತ್ಸವ .
ಧರ್ಮ , ಸಮುದಾಯಗಳ ಭೇದಭಾವವಿಲ್ಲದೆ ದೇಶ ವಿದೇಶಗಳಿಂದ ರಾಯರ ಭಕ್ತರು ಆರಾಧನಾ ಮಹೋತ್ಸವಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ .

ಡಾ.ಗುರುಪ್ರಸಾದ ರಾವ್ ಹವಲ್ದಾರ್ಮರಿಯಮ್ಮನ ಹಳ್ಳಿ