ಬೆಂಗಳೂರು: ಮೊಂತಾ ಚಂಡಮಾರುತದ ಪರಿಣಾಮದಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಿರಲಿದೆ. ಬೆಂಗಳೂರಿನಲ್ಲಿ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಯಾವ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ?
ಉತ್ತರ ಕನ್ನಡ, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದಲ್ಲದೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗುಡುಗು ಸಹಿತ ಮಳೆ ಸಾಧ್ಯತೆ ಇರುವ ಜಿಲ್ಲೆಗಳು:
ಬೀದರ್, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ.
ಸಾಧಾರಣ ಮಳೆಯ ಸಾಧ್ಯತೆ:
ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.
ಒಣಹವೆಯಿರುವ ಜಿಲ್ಲೆಗಳು:
ಬೆಂಗಳೂರು ನಗರ ಮತ್ತು ಗ್ರಾಮೀಣ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಣ ವಾತಾವರಣ ಮುಂದುವರಿಯಲಿದೆ.ಇದನ್ನು ಓದಿ –ಅಪ್ಪು 4ನೇ ಪುಣ್ಯಸ್ಮರಣೆ
ಬೆಂಗಳೂರು ಹವಾಮಾನ:
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಕಡಿಮೆ ಇದೆ. ಗರಿಷ್ಠ ತಾಪಮಾನ 28°C, ಕನಿಷ್ಠ ತಾಪಮಾನ 19°C ಇರಲಿದ್ದು, ಗಾಳಿಯ ವೇಗ ಗಂಟೆಗೆ 15-25 ಕಿಮೀ ಆಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








