ಬೆಳಗಾವಿ: IPLನಲ್ಲಿ ಅವಕಾಶ ಸಿಗುತ್ತದೆ ಎಂಬ ಭರವಸೆ ನೀಡಿ ಯುವ ಕ್ರಿಕೇಟಿಗನೊಬ್ಬನು ಭಾರೀ ಮೊತ್ತದ ವಂಚನೆಗೆ ಬಲಿಯಾದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ 19 ವರ್ಷದ ರಾಕೇಶ್ ಯಡುರೆ ಎಂಬ ಯುವ ಕ್ರಿಕೇಟಿಗ, ಐಪಿಎಲ್‌ನಲ್ಲಿ ಆಡಬೇಕೆಂಬ ಮಹತ್ತರ ಕನಸನ್ನು ಸಾಕಿ ಕ್ರಿಕೆಟ್‌ನಲ್ಲಿ ಹೆಜ್ಜೆಹಾಕಿದ್ದ. 2024ರ ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ, ಅವನು ‘ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್’ ಎಂಬ ಟೂರ್ನಿಯ ಟ್ರಯಲ್‌ನಲ್ಲಿ ಭಾಗವಹಿಸಿದ್ದ.
ಅಲ್ಲಿದ್ದೇ ಕ್ರಿಕೆಟ್ ಆಯ್ಕೆ ಸಮಿತಿಯ ಕೆಲವು ಸದಸ್ಯರು ಪರಿಚಿತರಾದರು. ಕೆಲ ತಿಂಗಳುಗಳ ನಂತರ, ಇನ್‌ಸ್ಟಾಗ್ರಾಮ್ ಮೂಲಕ ‘ಸುಶಾಂತ್ ಶ್ರೀವಾಸ್ತವ್’ ಎಂಬ ಹೆಸರಿನಿಂದ ಸಂದೇಶವೊಂದು ಬಂದಿತು. ಆ ಸಂದೇಶದಲ್ಲಿ ರಾಕೇಶ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿ, ಮೊದಲಿಗೆ ಅರ್ಜಿಯ ಹೆಸರಿನಲ್ಲಿ ₹2000 ಕಳುಹಿಸಲು ಸೂಚಿಸಲಾಯಿತು.ಇದನ್ನು ಓದಿ -180 ಸರ್ಕಾರಿ ಆಸ್ಪತ್ರೆಗಳಿಂದ ಜನೌಷಧಿ ತೆಗೆದುಹಾಕಲು ಸರ್ಕಾರ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
ಆದರೆ ಇದೊಂದು ವಂಚನೆಯ ಆಟವಾಗಿತ್ತು. ಈ ಮೂಲಕ, ಹಂತ ಹಂತವಾಗಿ ಆನ್‌ಲೈನ್ ಮೂಲಕ ರಾಕೇಶ್ ಬಳಿ ₹23,53,550 ಹಣವನ್ನು ವಂಚಕರು ದೋಚಿದ್ದಾರೆ. ಹಣ ಕಳೆದುಕೊಂಡರೂ ತಂಡದ ಆಯ್ಕೆ ಬಗ್ಗೆ ಯಾವುದೇ ಖಚಿತತೆ ಇಲ್ಲದ ಕಾರಣ ಅನುಮಾನಗೊಂಡ ರಾಕೇಶ್, ಬೆಳಗಾವಿಯ ಸಿಐಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.