ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 2025-26ನೇ ಸಾಲಿನಲ್ಲಿ ಫೆಬ್ರವರಿ 18ರವರೆಗೆ ಶೇ.71.39ರಷ್ಟು ತೆರಿಗೆ ಸಂಗ್ರಹಣೆ ಆಗಿದ್ದು, ವರ್ಷಾಂತ್ಯಕ್ಕೆ ಗುರಿ ತಲುಪುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದೆ.
ಹಿಂದಿನ ಸಾಲುಗಳ 3352.4 ಕೋಟಿ ರೂ. ತೆರಿಗೆ ಬಾಕಿಯನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಕಿ ತೆರಿಗೆಯನ್ನು ಆಸ್ತಿ ವರ್ಗೀಕರಣದ ಆಧಾರದ ಮೇಲೆ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತೆರಿಗೆ ಬೇಡಿಕೆ ದ್ವಿಗುಣವಾಗಿದ್ದು, ವಸೂಲಾತಿ ಮೊತ್ತವೂ ಹೆಚ್ಚಾಗಿದೆ. 2024-25ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿಗಳ ಮೂಲಕ ವಿಶೇಷ ತೆರಿಗೆ ವಸೂಲಾತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಜಯನಗರ ಜಿಲ್ಲೆಯ 137 ಗ್ರಾಮ ಪಂಚಾಯತಿಗಳಲ್ಲಿ 3.07 ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲೆಯ 122 ಪಂಚಾಯತಿಗಳಲ್ಲಿ ಒಂದು ದಿನದ ಅಭಿಯಾನದಲ್ಲಿ 3.12 ಕೋಟಿ ರೂ. ಸಂಗ್ರಹಿಸಲಾಗಿದೆ.
ಸಾರ್ವಜನಿಕರಿಗೆ ಫೋನ್‌ಪೇ, ಗೂಗಲ್ ಪೇ ಹಾಗೂ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪಂಚಮಿತ್ರ ತಂತ್ರಾಂಶದ ಮೂಲಕ ಆಸ್ತಿ ತೆರಿಗೆ ವಿವರ ವೀಕ್ಷಿಸುವ ವ್ಯವಸ್ಥೆಯೂ ಒದಗಿಸಲಾಗಿದೆ.ಇದನ್ನು ಓದಿ –ಬೆಂಗಳೂರು ವಿಮಾನ ನಿಲ್ದಾಣ- 23.8 ಕೋಟಿ ಮೌಲ್ಯದ ಕೊಕೇನ್ ಜಪ್ತಿ
ಗ್ರಾಮಠಾಣದ ಹೊರಗೆ ಭೂಪರಿವರ್ತನೆ ಮಾಡದೆ ಮನೆ ನಿರ್ಮಿಸಿಕೊಂಡವರಿಗೆ ಮೂಲಭೂತ ಸೌಕರ್ಯ ಒದಗಿಸುವ ಹಿನ್ನೆಲೆಯಲ್ಲಿ ಕಾನೂನು ತಿದ್ದುಪಡಿ ಮಾಡಿ, ಹೊಸ ತೆರಿಗೆ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಳವಾಗಲಿದ್ದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದೆ.








