ಮೈಸೂರು: ೧೧೯ ವರ್ಷಗಳ ಸುದೀರ್ಘ ಇತಿಹಾಸವಿರುವ ಮೈಸೂರಿನ ಹೆಸರಾಂತ ಮಿಷನ್ ಆಸ್ಪತ್ರೆ (ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆ)ಯ ಕಾರ್ಯಕಲಾಪಕ್ಕೆ ಅಮಾನತ್ತಿನಲ್ಲಿರುವ ಕೆಲವು ಕಾರ್ಮಿಕರು ಅಡ್ಡಿಪಡಿಸುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಆಡಳಿತಾಧಿಕಾರಿ ರೆವರೆಂಡ್ ಎಲಿಶ್ ಕುಮಾರ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು.
ದಯಾಪ್ರಕಾಶ್, ವಿಲ್ಸನ್ ಪ್ರಭಾಕರ್, ಮಂಜುನಾಥ್, ಪಾಲ್ ಡೇವಿಡ್, ಪ್ರಕಾಶ್ ಬಾಬು, ಮ್ಯಾಥ್ಯೂ, ಶಂಕರ್ ಎಂಬವರೇ ಆಸ್ಪತ್ರೆ ಆಡಳಿತ ಮತ್ತು ಕಾರ್ಯ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವುದಲ್ಲದೇ, ಕಾರ್ಮಿಕರನ್ನು ಆಡಳಿತ ಮಂಡಳಿ ವಿರುದ್ಧ ಎತ್ತಿ ಕಟ್ಟಿ ಸುಖಾ ಸುಮ್ಮನೆ ಪ್ರತಿಭಟನೆ ನಡೆಸುವುದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಪಪ್ರಚಾರ ಮಾಡುವುದು ಮತ್ತು ವೈದ್ಯರು, ದಾದಿಯರು ಮತ್ತಿತರ ಕೆಲಸಗಾರರಿಗೂ ಅನಗತ್ಯ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದನ್ನು ಕಳೆದ ಹಲವಾರು ತಿಂಗಳಿನಿಂದ ಮಾಡುತ್ತಿದ್ದಾರೆ.
ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ವೈದ್ಯರು ಮತ್ತು ದಾದಿಯರಿಗೂ ಕಿರುಕುಳ ನೀಡಿ ಕೆಲಸಕ್ಕೆ ಬಾರದಂತೆ ತಡೆ ಒಡ್ಡುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಎಲಿಷ್ ಕುಮಾರ್ ತಮ್ಮ ದೂರಿನಲ್ಲಿ ಒತ್ತಾಯಿಸಿದರು.
ಅಲ್ಲದೇ, ಕೆಲವು ಕಾರ್ಮಿಕರು ಕಳೆದ ಹಲವಾರು ತಿಂಗಳಿನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ, ಆಸ್ಪತ್ರೆ ಆವರಣದಲ್ಲಿ ಬೀಡುಬಿಟ್ಟು ನಿತ್ಯವೂ ಪ್ರತಿಭಟನೆ ನಡೆಸುತ್ತಾ ವೈದ್ಯರಿಗೆ, ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದಿಲ್ಲ ಮತ್ತು ಕೆಲಸಕ್ಕೂ ಹಾಜರಾಗುವುದಿಲ್ಲ, ನಂತರ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಸಂಬಳ ಕೊಡಿ ಎನ್ನುತ್ತಾರೆ. ಕೆಲಸವನ್ನೇ ಮಾಡದೆ ಸಂಬಳ ಕೊಡಲು ಹೇಗೆ ಸಾಧ್ಯ ಇದಕ್ಕೆ ಆಸ್ಪತ್ರೆ ಆಡಳಿತ ಒಪ್ಪುವುದಿಲ್ಲ ಎಂದು ಹೇಳಿದರೆ ನಮ್ಮ ಮೇಲೆ ಗಲಾಟೆ ಮಾಡುತ್ತಾರೆ. ಇದನ್ನು ಓದಿ –ಉದ್ಯೋಗ ಮಾರುಕಟ್ಟೆಯಲ್ಲೀಗ ಹೆಚ್ಚಿದ ಸ್ಪರ್ಧೆ: ಡಾ.ಎಂ.ಬಿ.ಬೋರಲಿಂಗಯ್ಯ
ಇದು ದಿನ ನಿತ್ಯವೂ ನಡೆಯುತ್ತಿದೆ. ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆಯು ಒಂದು ಚಾರಿಟಿ ಆಸ್ಪತ್ರೆಯಾಗಿದ್ದು, ಕರ್ತವ್ಯ ನಿರ್ವಹಿಸದೆ ಕೇವಲ ಗಲಾಟೆ ಮಾಡುತ್ತಿರುವ ಕೆಲವು ಕಾರ್ಮಿಕರನ್ನು ಆಡಳಿತ ಮಂಡಳಿ ಅಮಾನತ್ತಿನಲ್ಲಿ ಇಟ್ಟಿದೆ. ಆಸ್ಪತ್ರೆ ಆದಾಯ ಕಡಿಮೆಯಾದರೂ ನಾವು ನೌಕರರಿಗೆ ಸಂಬಳ ನೀಡಿದ್ದೇವೆ. ಕೆಲವು ತಿಂಗಳ ಸಂಬಳ ಬಾಕಿ ಇದ್ದು, ಆಸ್ಪತ್ರೆಯು ಆರ್ಥಿಕ ಮುಗ್ಗಟ್ಟಿನಲ್ಲಿ ಇರುವ ಕಾರಣ ಕೆಲವು ದಿನಗಳ ನಂತರ ಬಾಕಿ ವೇತನವನ್ನೂ ಪಾವತಿಸುವುದಾಗಿ ಹೇಳಿದ್ದೇವೆ. ಆದಾಗ್ಯೂ ನಮಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದರು.