ಮೈಸೂರು: ಆರ್ ಟಿ ನಗರ ಬಳಿಕ ಇನ್ನೂ ಯಾವುದೇ ನಿವೇಶನ ಹಂಚಿಕೆ ಕೆಲಸ ಆಗಿಲ್ಲ. ಸಾವಿರಾರು ಮಂದಿ ಅರ್ಜಿ ಹಾಕಿದ್ದು ಇದಕ್ಕೆ ದನಿಯಾಗಿ ನೂತನ ಬಡಾವಣೆ ನಿರ್ಮಾಣವೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿಯೂ ಆಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಪ್ರಭಾರ ಆಯುಕ್ತ ಕೆ.ಆರ್.ರಕ್ಷಿತ್ ತಿಳಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಹಿನ್ನೆಲೆಯಲ್ಲಿ ಇದರ ಮೊದಲ ಆಯುಕ್ತರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನು ಮೈಸೂರಿನಲ್ಲಿ ಬೆಳೆದಿದ್ದು, ಎಲ್ಲಾ ರೀತಿಯಲ್ಲಿಯೂ ಮೈಸೂರು ಕಂಡ ಒಡನಾಟ ನನಗಿದೆ. ಉಪವಿಭಾಗಾಧಿಕಾರಿಯಾಗಿ ಕೆಲಸ ನಿರ್ವಹಿಸಿರುವುದರಿಂದ ರೈತರೊಟ್ಟಿಗೆ ಹೆಚ್ಚಿನ ಒಡನಾಟವಿದೆ. ಸೂರಿಲ್ಲದವರ ಕಷ್ಟದ ಅರಿವಿದೆ. ಹೀಗಾಗಿ ಎಲ್ಲರ ಸಹಕಾರದೊಂದಿಗೆ ಬಡಾವಣೆ ನಿರ್ಮಿಸಲು ಕ್ರಮವಹಿಸುವೆ ಎಂದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಜನರಿಗೆ ವಿಶ್ವಾಸ ಬರುವ ರೀತಿಯ ಬದಲಾವಣೆಯನ್ನು ಮೊದಲಿಗೆ ತರುತ್ತೇನೆ. ಸಾಕಷ್ಟು ಜನಸ್ನೇಹಿ ಯೋಜನೆ ಮಾಡಬೇಕೆಂಬ ಕನಸಿದೆ. ಬಡಾವಣೆಗಳ ನಿರ್ಮಾಣ, ನಿವೇಶನ, ಗುಂಪು ಮನೆ ನೀಡುವ ಕೆಲಸಗಳ ನಿರಂತರವಾಗಿರಲಿವೆ. ಪ್ರಮುಖವಾಗಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸುಧಾರಣೆ ಆಗಬೇಕಾದಂತಹ ತುಂಬಾ ಕೆಲಸ ಇದೆ.
ಜನರಿಗೆ ಮತ್ತೆ ನಂಬಿಕೆ ತರುವ ಆಡಳಿತ ನೀಡುವೆ ಎಂದು ತಿಳಿಸಿದರು.ಕೆಲವರ ಅಪಾದನೆ ಕುರಿತು ಪ್ರತಿಕ್ರಯಿಸಿ, ಕೆಲವರು ವೈಯಕ್ತಿಕ ಹೇಳಿಕೆ ನೀಡುತ್ತಾರೆ ಅದಕ್ಕೆಲ್ಲಾ ಪ್ರತಿಕ್ರಯಿಸುತ್ತಾ ಇರುವುದಿಲ್ಲ. ನಾನು ಹುಟ್ಟಿ ಬೆಳೆದಿರುವ ಊರಿನ ಬಗ್ಗೆ ನನಗೂ ಕಾಳಜಿಯಿದೆ. ಸಾವಿರಾರು ಮಂದಿಯೂ ಪ್ರಾಧಿಕಾರದ ಮೇಲೆ ನಿರೀಕ್ಷೆಯಿಟ್ಟಿದ್ದಾರೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರೆಲ್ಲರ ಸಲಹೆ ಮೇರೆಗೆ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆಂದರು.ಇದನ್ನು ಓದಿ –ಮಳೆನಾಡದ ಮೈಸೂರು!
೨೦೧೪ರ ಬ್ಯಾಚ್ ನ ಅಧಿಕಾರಿಯಾದ ರಕ್ಷಿತ್ ಅವರು ಸಕಲೇಶಪುರ, ಹರಿಹರ ಹಾಗೂ ಮೈಸೂರು ತಹಶೀಲ್ದಾರ್ ಆಗಿ ಹಾಗೂ ಬಿಬಿಎಂಪಿ ಸಹಾಯಕ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.