ಹೆಚ್ಚುತ್ತಿರುವ ದೇಹದ ತೂಕವನ್ನು ಕಡಿಮೆ ಮಾಡಲು ಜನ ನಿತ್ಯ ಒಂದಿಲ್ಲೊಂದು ಹರಸಾಹಸ ಪಡುತ್ತಲೇ ಇರುತ್ತಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರುವುದರ ಜೊತೆಗೆ ದೀರ್ಘ ನಡಿಗೆ ಮತ್ತು ಡಯಟ್‌ಗಳನ್ನು ಅನುಸರಿಸುತ್ತಾರೆ. ನೀವೂ ಕೂಡ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ಎಲ್ಲಾ ಕೆಲಸಗಳನ್ನು ಮಾಡಿ ಸುಸ್ತಾಗಿದ್ದರೆ ಮತ್ತು ಯಾವುದೇ ಪ್ರಯೋಜನವನ್ನು ಪಡೆಯದಿದ್ದರೆ, ಇಂದಿನಿಂದಲೇ ನಿಮ್ಮ ಉಪಹಾರದಲ್ಲಿ ಓಟ್ಸ್ ಬಳಕೆ ಶುರು ಮಾಡಿ. ಕೇವಲ ತೂಕ ಇಳಿಕೆ ಮಾತ್ರವಲ್ಲ, ಮುಖದ ಸೌಂದರ್ಯಕ್ಕೂ ಈ ಆಹಾರ ತುಂಬ ಒಳ್ಳೆಯದು.
ಏನಿದು ಒಟ್ಸ್ ?
ಓಟ್ಸ್ ಎಂಬುದು ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ರಚಲಿತವಾಗುತ್ತಿರುವ ಆಹಾರವಾಗಿದ್ದು ಬಹುತೇಕ ನೋಡಲಿಕ್ಕೆ ಗೋಧಿಯ ಕಾಳನ್ನು ಬಲವಂತವಾಗಿ ಕಿರಿದಾಗಿಸಿ ಅಕ್ಕಿಕಾಳಿನ ರೂಪಕ್ಕೆ ತಂದಂತೆ ಇರುತ್ತದೆ. ಗೋಧಿ ಕಾಳಿಗಿಂತಲೂ ಕೊಂಚ ಹೆಚ್ಚೇ ದೃಢವಾಗಿರುವ ಕಾರಣ ಇದನ್ನು ರವೆಯಾಗಿಸಿ ಅಥವಾ ಚಪ್ಪಟೆ ಅವಲಕ್ಕಿ ಯಾಗಿಸಿಯೇ ಸೇವನೆಗೆ ಬಳಸಲಾಗುತ್ತಿದೆ
ಓಟ್ಸ್ ನಲ್ಲಿ ಇರುವಂತಹ ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಗಳು ಹೃದಯಕ್ಕೆ ಲಾಭಕಾರಿ ಮತ್ತು ಇದರಲ್ಲಿನ ಆಹಾರದ ನಾರಿನಾಂಶವು ಕೆಟ್ಟ ಕೊಲೆಸ್ಟ್ರಾಲ್ ನ್ನು ದೂರವಿಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ನ್ನು ಪರಿಣಾಮಕಾರಿ ಆಗಿ ನಿರ್ವಹಿಸುವುದು.
ಓಟ್ಸ್ ನಲ್ಲಿ ಇರುವಂತಹ ಎಂಟರೊಲ್ಯಾಕ್ಟೋನ್ ಎನ್ನುವ ಅಂಶವು ಹೃದಯದ ಕಾಯಿಲೆಯಿಂದ ರಕ್ಷಣೆ ನೀಡುವುದು. ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಂಡು ಹೃದಯವು ಆರೋಗ್ಯವಾಗಿಡಲು ಸಹಕಾರಿ.
ಓಟ್ಸ್ ನಲ್ಲಿ ಕರಗಬಲ್ಲ ಮತ್ತು ಕರಗದ ನಾರಿನಾಂಶವಿದ್ದು, ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು.
ಓಟ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು.
ಓಟ್ಸ್ ನ್ನು ನಿಯಮಿತವಾಗಿ ಸೇವನೆ ಮಾಡಿದರೆ, ಅದರಲ್ಲಿನ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ಸ್ ಮತ್ತು ನಾರಿನಾಂಶವು ಸಂಪೂರ್ಣ ಆಹಾರವನ್ನು ಸಣ್ಣ ಸಕ್ಕರೆ ಆಗಿ ಮಾಡುವುದು. ಇದರಿಂದ ಸಕ್ಕರೆ ಅಂಶವು ರಕ್ತವನ್ನು ಸೇರುವುದು ತಡವಾಗುವುದು.
ಕಡಿಮೆ ಕ್ಯಾಲರಿ ಹೊಂದಿರುವಂತಹ ಓಟ್ ಮೀಲ್ ಜೀರ್ಣಕ್ರಿಯೆ ನಿಧಾನವಾಗಿಸುವುದು ಮತ್ತು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುವುದು. ಇದರಿಂದ ತಿನ್ನುವ ಬಯಕೆಯು ಕಡಿಮೆ ಆಗುವುದು ಮತ್ತು ತೂಕ ಇಳಿಸಲು ಇದು ಸಹಕಾರಿ.
ನೆನೆಸಿಟ್ಟ ಓಟ್ಸ್ ನ ಪ್ರಯೋಜನಗಳು

ನೆನೆಸಿಟ್ಟ ಓಟ್ಸ್ ಸೇವನೆಯಿಂದ ತೂಕ ಇಳಿಕೆಯ ಪ್ರಕ್ರಿಯೆಗೆ ಹೆಚ್ಚಿನ ಬಲ ದೊರಕುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದರಲ್ಲಿರುವ ಗಣನೀಯ ಪ್ರಮಾಣದ ಕರಗುದ ನಾರು! ಈ ನಾರು ನಮ್ಮ ಜೀರ್ಣಾಂಗಗಳಲ್ಲಿ ಕರಗಿದರೂ ಕರುಳುಗಳಲ್ಲಿ ಹೀರಲ್ಪಡದೇ ವಿಸರ್ಜನೆಯಾಗುತ್ತದೆ. ಇದೇ ತೂಕ ಇಳಿಕೆಯ ಗುಟ್ಟು ಈ ನಾರಿನಂಶ ಹೊಟ್ಟೆ ಮತ್ತು ಕರುಳಿನಲ್ಲಿದ್ದಷ್ಟೂ ಹೊತ್ತು ಹೊಟ್ಟೆ ತುಂಬಿದ ಅನುಭವ ಇರುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಕರುಳುಗಳಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಗಮವಾಗುತ್ತದೆ. ಇದನ್ನು ಜೀರ್ಣಿಸುವ ಪ್ರಯತ್ನಕ್ಕೆ ದೇಹ ಅನಿವಾರ್ಯವಾಗಿ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗುತ್ತದೆ. ತನ್ಮೂಲಕ ಸಂಗ್ರಹಗೊಂಡಿದ್ದ ಕೊಬ್ಬು ಕರಗುತ್ತಾ ಬರುತ್ತದೆ. ನೆನೆಸಿಟ್ಟ ಓಟ್ಸ್ ನಲ್ಲಿ ಪಿಷ್ಟ ಕಡಿಮೆಯಾಗಿರುವ ಕಾರಣ ದೇಹ ಹೆಚ್ಚು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುತ್ತದೆ.
ಓಟ್ಸ್ ಅನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಡಬಹುದು. ಮೊಸರೂ ಆಗಬಹುದು, ಆದರೆ ಇದನ್ನು ಹೆಚ್ಚು ಕಾಲ ನೆನೆಸಿಡಬೇಕಾಗುತ್ತದೆ. (ಸುಮಾರು ಹನ್ನೆರಡು ಗಂಟೆ) ಓಟ್ಸ್ ಧಾನ್ಯ ಗೋಧಿಗಿಂತಲೂ ನಾಲ್ಕಾರು ಪಟ್ಟು ಗಟ್ಟಿ ಇರುತ್ತದೆ. ಅಲ್ಲದೇ ಇದರ ಹೊರಪದರವೂ ಗೋಧಿಗಿಂತಲೂ ಕೊಂಚ ದಪ್ಪನಾಗಿರುತ್ತದೆ. (ಗೋಧಿಯ ಹೊರಕವಚ ನಿವಾರಿಸಿದ ಬಳಿಕ ಸಿಗುವ ಹಿಟ್ಟೇ ಮೈದಾ!) ಹಾಗಾಗಿ ಓಟ್ಸ್ ಧಾನ್ಯದ ರೂಪದಲ್ಲಿ ಬೇಯಬೇಕಾದರೆ ಗೋಧಿ ಬೇಯಿಸುವ ಎರಡು ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಇದರ ಪದರ ಬೇಯಿಸಿದ ಬಳಿಕ ಬಿರಿಯುವುದರಿಂದ ಒಳಗಿನ ಹಿಟ್ಟು ಹೊರಗಿನ ನೀರಿಗೆ ಬೆರೆತುಕೊಳ್ಳುತ್ತದೆ. ಹಾಗಾಗಿ ನೆನೆಸಿಟ್ಟಾಗ ಈ ದೃಢ ಪದರ ನೆನೆದು ಮೃದುವಾಗುತ್ತದೆ ಹಾಗೂ ಇದನ್ನು ಜೀರ್ಣಿಸಿಕೊಳ್ಳುವುದು ನಮ್ಮ ಜೀರ್ಣಾಂಗಗಳಿಗೆ ಸುಲಭವಾಗುತ್ತದೆ.
ಈ ಸರಳ ಓಟ್ಸ್ ರೆಸಿಪಿ ಮಾಡಿಕೊಳ್ಳಿ..
ಓಟ್ಸ್ ಮಾಡಲು ಹೆಚ್ಚು ಸಮಯವೇನು ಬೇಕಿಲ್ಲ. ಹಾಲು, ನೀರು, ಬಾದಾಮಿ ಹಾಲು, ತೆಂಗಿನ ಹಾಲು, ಮೊಸರು ಮುಂತಾದ ಯಾವುದಾದರೂ ಒಂದು ವಸ್ತುವಿನಲ್ಲಿ ಓಟ್ಸ್ ಅನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ಬೆಳಗಿನ ಹೊತ್ತಿಗೆ ಓಟ್ಸ್ ಹೂವಿನಂತೆ ಅರಳಿರುತ್ತದೆ. ಇದರ ನಂತರ, ಈ ಓಟ್ಸ್‌ಗೆ ಕತ್ತರಿಸಿದ ಹಣ್ಣುಗಳು ಮತ್ತು ನಿಮ್ಮ ಆಯ್ಕೆಯ ಡ್ರೈಫ್ರೂಟ್ಸ್ ಸೇರಿಸಿ ನಿತ್ಯ ಸೇವಿಸಿ.
ನೆನೆಸಿಟ್ಟ ಒಟ್ಸ್ ನ ಇತರ ರುಚಿಗಳು
ಒಂದು ವೇಳೆ ನಿಮಗೆ ಸಿಹಿ ಇಷ್ಟವಾಗದೇ ಹೋದರೆ ಇತರ ರುಚಿಗಳನ್ನೂ ಪ್ರಯತ್ನಿಸಬಹುದು. ನಿಮ್ಮ ರುಚಿಯ ಅಗತ್ಯಕ್ಕೆ ತಕ್ಕಷ್ಟು ಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಬಹುದು. ಮೊಸರವಲಕ್ಕಿ ಮಾಡಿದಂತೆ ಕೊಂಚ ಒಗ್ಗರಣೆಯನ್ನೂ ನೀಡಬಹುದು ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಜೀರಿಗೆ, ಸಾಸಿವೆ, ಬೇವಿನ ಎಲೆ, ಕೊಂಚ ಈರುಳ್ಳಿ ಹಾಕಿ ನೆನೆಸಿಟ್ಟ ರವೆಯ ನೀರನ್ನು ಬಸಿದು ಉಪ್ಪಿಟ್ಟಿನ ರೂಪದಲ್ಲಿಯೂ ಸೇವಿಸಬಹುದು. ಆದರೆ ಇದಕ್ಕೆ ಕೊಂಚ ಹೆಚ್ಚಿನ ಸಮಯ ಬೇಕಾಗುತ್ತದೆ. ಸಮಯ ಇಲ್ಲದಿದ್ದರೆ ಸಿದ್ಧ ರೂಪದಲ್ಲಿ ಸಿಗುವ ಕಾರ್ನ್ ಫ್ಲೇಕ್ಸ್ ಅಥವಾ ಮೆಕ್ಕೆಜೋಳದ ಅರಳು ಇದರಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ದೊರಕುತ್ತವೆ. ಮಧ್ಯಾಹ್ನದ ಊಟದಲ್ಲಿಯೂ ಓಟ್ಸ್ ರವೆಯನ್ನು ಆಯ್ದುಕೊಳ್ಳಬಹುದು.
ಕಿಚಡಿಯೂ ತಯಾರಿಸಬಹುದು!

ನೀರಿನಲ್ಲಿ ನೆನೆಸಿಟ್ಟ ಓಟ್ಸ್ ರವೆಯಿಂದ ಕಚಡಿ ತಯಾರಿಸ ಬಹುದು. ಅಕ್ಕಿ, ಬೇಳೆ ನೆನೆಸಿಟ್ಟ ಓಟ್ಸ್ ಮತ್ತು ಕೆಲವು ತರಕಾರಿಗಳನ್ನು ನೀರಿನಲ್ಲಿ ಬೇಯಿಸಿ ನಿಮ್ಮ ಆಯ್ಕೆಯ ಮಸಾಲೆ ಪುಡಿಗಳನ್ನು ಬೆರೆಸಿ ಖಿಚಡಿ ತಯಾರಿಸಬಹುದು. ಒಮ್ಮೆ ಇದರ ವಿಧಾನ ತಿಳಿದುಬಂದರೆ ಉಳಿದಂತೆ ಯಾವ ಹೊಸರುಚಿಗಳನ್ನು ಮಾಡಬಹುದು ಎಂಬ ಉಪಾಯಗಳು ತನ್ನಿಂತಾನೇ ಹೊಳೆಯತೊಡಗುತ್ತವೆ.
ಸುಲಭವಾಗಿ ಮಾಡಬಹುದಾದ, ರುಚಿಯಾದ ಓಟ್ಸ್ ದೋಸೆ ರೆಸಿಪಿ.

ಬಾಯಿಗೂ ರುಚಿ, ದೇಹಕ್ಕೂ ಹಿತವಾದ ಓಟ್ಸ್ ದೋಸೆ
ಬೇಕಾಗುವ ಸಾಮಾಗ್ರಿಗಳು : ಮುಕ್ಕಾಲು ಕಪ್ ಓಟ್ಸ್, ಅರ್ಧ ಕಪ್ ಅಕ್ಕಿ ಇಟ್ಟು ಕಾಲು ಕಪ್ ರವೆ,ಅರ್ಧ ಕಪ್ ಮೊಸರು 1 ಚಮಚ ಸಣ್ಣದಾಗಿ ತುರಿದ ಶುಂಠಿ, ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು
, ಅರ್ಧ ಚಮಚ ಮೆಣಸಿನ ಪುಡಿ, ಸಣ್ಣಗೆ ಹೆಚ್ಚಿರುವ ಮೆಣಸಿನ ಕಾಯಿ , ಅರ್ಧ ಈರುಳ್ಳಿ,1 ಚಮಚ ಉಪ್ಪು
3 ಕಪ್ ನೀರು.
ಮುಖದ ಕಾಂತಿ ಕಳೆಗುಂದಿದೆಯೇ ಇಲ್ಲಿದೆ ಪರಿಣಾಮಕಾರಿ ಟಿಪ್ಸ್
ಮುಖದ ಕಾಂತಿ ಹೆಚ್ಚಳಕ್ಕೆ ಓಟ್ಸ್ ಬಳಕೆಯನ್ನೂ ಮಾಡಬಹುದು. ಮುಖ ಕಂದು ಬಣ್ಣಕ್ಕೆ ತಿರುಗಿದ್ದರೆ, ಓಟ್ಸ್ ಜತೆ ಬಾದಾಮಿ ಸೇರಿಸಿಕೊಂಡು ಫೇಸ್ ಪ್ಯಾಕ್ ಸಹ ಮಾಡಿಕೊಳ್ಳಬಹುದು. ಬಾದಾಮಿಯು ತ್ವಚೆಯನ್ನು ಸದಾ ಹೈಡ್ರೇಟ್ ಆಗಿ ಇಡುತ್ತದೆ. ಇದು ಚರ್ಮವನ್ನು ಒಣಗಿಸುವುದಿಲ್ಲ ಮತ್ತು ಚರ್ಮವು ಯಾವಾಗಲೂ ಹೊಳೆಯುತ್ತಿರುತ್ತದೆ.
ಡಿ-ಟ್ಯಾನ್ ಮಾಡುವುದು ಹೇಗೆ?

ರಾತ್ರಿ ನೆನೆಸಿದ ಬಾದಾಮಿಯನ್ನು ರುಬ್ಬಿ ಪೇಸ್ಟ್ ಮಾಡಬೇಕು. ಬಳಿಕ ಓಟ್ಸ್ ಅನ್ನು ಪುಡಿಮಾಡಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಹಾಗೆ ತಯಾರಿಸಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಅರ್ಧಗಂಟೆ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.
ಓಟ್ಸ್‌ಗೆ ನೀರು ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಫೇಸ್ ಮಾಸ್ಕ್‌ನಂತೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
ಓಟ್ಸ್‌ನಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಮಾಯಿಶ್ಚರೈಸ್ ನೀಡುತ್ತದೆ. ಎರಡೂ ಚಮಚ ಓಟ್ಸ್ ಪುಡಿಗೆ ಒಂದು ಚಮಚ ಜೇನುತುಪ್ಪ, ಎರಡು ಚಮಚ ಹಾಲು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಸ್ಕಿನ್ ಸಾಫ್ಟ್ ಆಗುತ್ತದೆ.
ಓಟ್ಸ್‌ಗೆ ಸ್ವಲ್ಪ ಟೊಮ್ಯಾಟೋ ಹಣ್ಣಿನ ತಿರುಳನ್ನು ಬೆರಸಿ. ಮೆತ್ತಗಾದ ಬಳಿಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಲ್ಲಿರುವ ಟೊಮ್ಯಾಟೋ ಮುಖದ ಬಣ್ಣವನ್ನು ತಿಳಿಯಾಗಿಸುತ್ತದೆ.
ಡ್ರೈ ಸ್ಕಿನ್ ಸಮಸ್ಯೆ ಇದ್ದವರು ಸ್ನಾನ ಮಾಡುವ ನೀರಿಗೆ ಓಟ್ಸ್ ಮತ್ತು ಬೇಕಿಂಗ್ ಸೋಡಾ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ನಿಯಮಿತವಾಗಿ ಮಾಡಿದರೆ ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತೆ.
ಎರಡು ಚಮಚ ಓಟ್ಸ್‌ಗೆ ಅರ್ಧ ಹೋಳು ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆಯಿರಿ. ಇದು ಆಯ್ಲಿ ಸ್ಕಿನ್ ಸಮಸ್ಯೆಗೆ ಮದ್ದು.
ಓಟ್ಸ್ ಜೊತೆಗೆ ಯೋಗರ್ಟ್ ಮಿಕ್ಸ್ ಮಾಡಿ ಅದಕ್ಕೆ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆದರೆ ಬ್ಲಾಕ್ ಹೆಡ್ಸ್ ನಿವಾರಣೆಯಾಗಿ ಮುಖ ಸಾಫ್ಟ್ ಆಗುತ್ತೆ.
ತುರಿಕೆ ಸಮಸ್ಯೆ ಇದ್ದರೆ ಹಾಲಿನ ಜೊತೆ ಓಟ್ಸ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣಗೆ ನೀರಿನಲ್ಲಿ ತೊಳೆಯಿರಿ. ಇದರಿಂದ ತುರಿಕೆ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ.

ಶ್ರೀಮತಿ ಸೌಮ್ಯ ಸನತ್.