ಶಿವಮೊಗ್ಗ: ಮನೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡುವ ನಿಟ್ಟಿನಲ್ಲಿ 10,000 ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ, ಇಂದು (ಆಗಸ್ಟ್ 29) ಸಂಜೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕ ಲೋಕಾಯುಕ್ತದಿಂದ ಬಂದ ಮಾಹಿತಿಯ ಪ್ರಕಾರ, ದೂರುದಾರರಾದ ಮೊಹಮ್ಮದ್ ಆಸೀಫ್ ಉಲ್ಲಾ (ಬೊಮ್ಮನಕಟ್ಟೆ, ಶಿವಮೊಗ್ಗ) ಅವರು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯನ್ನು ಖರೀದಿಸಿ, ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅಧಿಕಾರಿ ಶಶಿಧರ್ ಅವರನ್ನು ಸಂಪರ್ಕಿಸಿದಾಗ, ಅವರು ಸ್ಥಳ ಪರಿಶೀಲನೆ ನಡೆಸುವ ನೆಪದಲ್ಲಿ ಮನೆ ಖಾತೆ ಮಾಡಿಕೊಡಲು ₹10,000 ಲಂಚ ಬೇಡಿಕೆ ಇಟ್ಟಿದ್ದಾರೆ.
ದೂರುದಾರರು ಈ ಸಂಭಾಷಣೆಯನ್ನು ಧ್ವನಿಮುದ್ರಣೆ ಮಾಡಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ್ದು , ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988 (ತಿದ್ದುಪಡಿ ಕಾಯಿದೆ-2018) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಲೆ ಬೀಸಿದರು.
ಇಂದು ಸಂಜೆ 4.15ಕ್ಕೆ ಶಿವಮೊಗ್ಗ ನಗರದ ನೆಹರೂ ರಸ್ತೆಯ ನೇತಾಜಿ ಸುಭಾಷಚಂದ್ರ ಭೋಸ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯ ಆಶ್ರಯ ಕಛೇರಿಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಶಶಿಧರ್ ಅವರನ್ನು ಸಿಕ್ಕಿಬೀಳಿಸಲಾಯಿತು. ಅವರಿಂದ ಲಂಚದ ಹಣವನ್ನು ಜಪ್ತಿ ಮಾಡಲಾಗಿದೆ.
ಅಪಾದಿತ ಶಶಿಧರ್ (57 ವರ್ಷ, ಸಮುದಾಯ ಸಂಘಟನಾ ಅಧಿಕಾರಿ, ಮಹಾನಗರ ಪಾಲಿಕೆ, ಶಿವಮೊಗ್ಗ) ಅವರನ್ನು ವಶಕ್ಕೆ ತೆಗೆದುಕೊಂಡು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನು ಓದಿ –BCCI ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೋಜರ್ ಬಿನ್ನಿ – ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷ
ಈ ಕಾರ್ಯಾಚರಣೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌಧರಿ ಅವರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ರುದ್ರೇಶ್ ಕೆ.ಪಿ. ಹಾಗೂ ಸಿಬ್ಬಂದಿಗಳ ತಂಡದ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿದೆ.