ನವದೆಹಲಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ನೀಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಸರ್ವೋಚ್ಛ ನ್ಯಾಯಾಲಯವು ಈ ಮೇಲ್ಮನವಿಯನ್ನು ಶುಕ್ರವಾರ (ಸೆಪ್ಟೆಂಬರ್ 19) ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಸೆಪ್ಟೆಂಬರ್ 22 ರಂದು ನಡೆಯಲಿರುವ ದಸರಾ ಕಾರ್ಯಕ್ರಮದ ಹಿನ್ನೆಲೆ, ತುರ್ತು ವಿಚಾರಣೆಗಾಗಿ ಅರ್ಜಿದಾರರ ಪರ ವಕೀಲ ಎಚ್.ಎಸ್. ಗೌರವ್ ಅವರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಪೀಠದ ಮುಂದೆ ಮನವಿ ಸಲ್ಲಿಸಿದರು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ನಾಳೆ ಮೇಲ್ಮನವಿಯನ್ನು ಆಲಿಸಲು ಒಪ್ಪಿದೆ.
ಕರ್ನಾಟಕ ಸರ್ಕಾರವು ಮೈಸೂರಿನ ಚಾಮುಂಡೇಶ್ವರಿ ದೇವಿ ಪೂಜೆಯೊಂದಿಗೆ ಸಂಬಂಧಿಸಿದ ದಸರಾ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಿರುವುದಾಗಿ ವಕೀಲರು ಕೋರ್ಟ್ ಗಮನಕ್ಕೆ ತಂದರು.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ, ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ನೀಡಿದ ತೀರ್ಪು ತಪ್ಪಾಗಿದೆ ಎಂದು ವಾದಿಸಲಾಗಿದೆ.
ಇದಲ್ಲದೆ, ಮುಷ್ತಾಕ್ ಅವರು ಈ ಹಿಂದೆ “ಹಿಂದೂ ವಿರೋಧಿ” ಹೇಳಿಕೆಗಳನ್ನು ನೀಡಿದ್ದರಿಂದ, ಅವರ ಭಾಗವಹಿಸುವಿಕೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.