ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿರುವ ಕುರಿತಂತೆ ಕಳವಳ ವ್ಯಕ್ತಪಡಿಸಿ ಹಾಗೆ ಬೊಜ್ಜು ಕಡಿಮೆ ಮಾಡಲು ಕರೆ ನೀಡಿದ್ದರು. ಇದಕ್ಕಾಗಿ ಕಡಿಮೆ ಅಡುಗೆ ಎಣ್ಣೆ ಬಳಸುವಂತೆಯೂ ಹಾಗೂ ಪ್ರೋಟಿನ್ ಆಹಾರ ಸೇವಿಸುವಂತೆ ಅವರು ಕಿವಿ ಮಾತು ಹೇಳಿದ್ದನ್ನು ನಾವು ನೀವೆಲ್ಲರೂ ಕೇಳಿದ್ದೇವೆ .
‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಆಹಾರದಲ್ಲಿ ಕಡಿಮೆ ಎಣ್ಣೆ ಬಳಸುವುದು ಮತ್ತು ಸ್ಥೂಲಕಾಯತೆ ನಿಭಾಯಿಸುವುದರ ಜೊತೆಗೆ ದೇಹಕ್ಕೆ ಉತ್ತಮ ಆಹಾರ ಸೇವನೆ ನಮ್ಮ ನಿತ್ಯದ ಚಟುವಟಿಕೆ ಯಾಗಬೇಕೆಂಬುನ್ನು ತಿಳಿಸುತ್ತಾ, ನಾನು 365 ದಿನದಲ್ಲಿ ಕನಿಷ್ಠ 300 ದಿನವಾದರು ಕಮಲದ ಬೀಜ ಅಥವಾ ತಾವರೆಯ ಬೀಜ ಸೇವಿಸುತ್ತೇನೆ ಎಂದಿದ್ದರು. ಫಾಕ್ಸ್‌ನಟ್ ಎಂದು ಕರೆಯಲ್ಪಡುವ ಈ ಬೀಜಗಳ ಸೇವನೆ ನಮ್ಮ ದೇಹಕ್ಕೆ ಯಾವ ರೀತಿಯ ಉಪಯೋಗಕ್ಕೆ ಕಾರಣವಾಗಿವೆ. ಇದರಲ್ಲಿ ಯಾವ ಅಂಶವಿದೆ ಅನ್ನೋದನ್ನು ನಾವಿಂದು ತಿಳಿಯೋಣ.
ಹುರಿದಾಗ ಮೆಕ್ಕೆಜೋಳದಂತೆಯೇ ಹೂವಿನಂತೆ ಅರಳುವ ಮಖನಾ ನಮ್ಮ ಹಿರಿಯರ ಪಾಲಿನ ಪಾಪ್ ಕಾರ್ನ್ ಆಗಿತ್ತು ಎಂದರೆ ತಪ್ಪಾಗಲಾರದು. ಡ್ರೈ ಫ್ರೂಟ್ಸ್ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳಂತಹ ಬೀಜಗಳ ಸೇವನೆ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅದೇ ರೀತಿ ಕಮಲದ ಹೂವಿನ ಬೀಜಗಳನ್ನು ತಿನ್ನುವುದು ನಮಗೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಈ ಬೀಜದ ಕರಿ, ಸಿಹಿತಿಂಡಿ ಸೇರಿ ಹಲವು ಖಾದ್ಯಗಳ ತಯಾರಿಕೆಗೆ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಕಮಲದ ಬೇರನ್ನು ಔಷಧಿಗಾಗಿ ಬಳಸಲಾಗುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ತಾವರೆ ಗಿಡದ ಬೇರು ಫೈಬರ್ ಮತ್ತು ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಗಳಿಂದ ಕೂಡಿದೆ. ಇದು ರಕ್ತಹೀನತೆಯಿಂದ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಮಾತ್ರವಲ್ಲ, ಲೋಟಸ್ ರೂಟ್ ನಿಂದ ಚಿಪ್ಸ್, ಸೂಪ್, ಟೀ ಕೂಡಾ ತಯಾರಿಸಬಹುದು.
ಮಖನಾ ಅಥವಾ Fox Nuts ಅಥವಾ ಕಮಲದ ಬೀಜ ಎಂದೂ ಕರೆಯುವ ಈ ಬೀಜಗಳು ಪಾಪ್ ಕಾರ್ನ್ ನಂತೆಯೇ ಹುರಿದಾಗ ಅರಳಿನಂತೆ ಅರಳುವ ಕಾಳುಗಳಾಗಿವೆ. ಆದರೆ ಪಾಪ್ ಕಾರ್ನ್ ನಂತೆ ಬಿರಿಯದೇ ಪುಟ್ಟ ಟೆನ್ನಿಸ್ ಬಾಲ್ ಗಳಂತೆ ಉಬ್ಬುತ್ತವೆ. ಇದೇ ಕಾರಣಕ್ಕೆ ಈ ಕಾಳುಗಳಿಗೆ ಹಿಂದಿಯಲ್ಲಿ ಫೂಲ್ ಮಖನಾ ಎಂದೂ ಕರೆಯುತ್ತಾರೆ. ಲೋಟಸ್ ಬೀಜಗಳನ್ನು ನೇರವಾಗಿ ತಿನ್ನಬಹುದು ಅಥವಾ ಹುರಿದು ಮತ್ತು ಸಿಹಿ ಖಾದ್ಯ ತಯಾರಿಸಿ ಸಹ ತಿನ್ನಬಹುದು.

ಕಮಲದ ಬೀಜವನ್ನು ಬಿಹಾರದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿ ಇದೊಂದು ಸಾಂಪ್ರದಾಯಿಕ ಬೆಳೆಯಾಗಿದೆ.ಇದು ನಾವು ಈಗ ಜಾಗತಿಕ ಮಾರುಕಟ್ಟೆಗಳಿಗೆ ತೆಗೆದುಕೊಳ್ಳಬೇಕಾದ ಸೂಪರ್‌ಫುಡ್ ಆಗಿದೆ. ಅದಕ್ಕಾಗಿಯೇ ಈ ವರ್ಷದ ಬಜೆಟ್‌ನಲ್ಲಿ ಈ ಕಮಲದ ಬೀಜ ಬೆಳೆಯುವ ರೈತರ ಪ್ರಯೋಜನಕ್ಕಾಗಿ ಮಖಾನಾ ಮಂಡಳಿಯನ್ನು ರಚಿಸುವುದಾಗಿ ಸರ್ಕಾರ ಘೋಷಿಸಿದೆ ಎಂದು ಭಾಗಲ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
ಕಮಲದ ಬೀಜಗಳಲ್ಲಿ ಎಷ್ಟೆಲ್ಲಾ ಆರೋಗ್ಯ ಅಡಗಿದೆ ಗೊತ್ತೇ!

ಲೋಟಸ್ ಬೀಜಗಳು ಪೌಷ್ಟಿಕಾಂಶದ ಅಂಶಗಳಿಂದ ತುಂಬಿದ್ದು, ಇದು ಆರೋಗ್ಯಕರ ಆಹಾರಕ್ಕಾಗಿ ಅತ್ಯುತ್ತಮ ಆಯ್ಕೆಯಾಗಿದೆ. ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಇ ಮತ್ತು ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಅಗತ್ಯ ಖನಿಜಗಳೊಂದಿಗೆ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳನ್ನು ಹೊಂದಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಆಹಾರದಲ್ಲಿ ಈ ಬೀಜದ ಸೇವನೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
- ಸಾಮಾನ್ಯವಾಗಿ ನಾವು ಕ್ಯಾಲ್ಸಿಯಂ ಪಡೆಯಲು ಹಾಲು, ಮೊಸರು, ಬೆಣ್ಣೆ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಇದರ ಬದಲಿಗೆ ಕ್ಯಾಲ್ಸಿಯಂ ಪೋಷಕಾಂಶವು ಕಮಲದ ಬೀಜಗಳಲ್ಲಿಯೂ ಲಭ್ಯವಿದೆ. ಈ ಕ್ಯಾಲ್ಸಿಯಂ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.
- ಕಮಲದ ಬೀಜಗಳನ್ನು ದಿನಕ್ಕೆ 2 ಅಥವಾ 4 ಬಾರಿ ಸೇವಿಸುವುದರಿಂದ ವ್ಯಕ್ತಿಯು ಕುದುರೆಯಷ್ಟು ಬಲ ಬರುತ್ತದೆ ಎಂಬುದು ತಜ್ಞರ ಅಭಿಪ್ರಾಯ.
- ಕಮಲದ ಬೀಜಗಳು ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತವೆ
- ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಅತಿಯಾದ ಒತ್ತಡದಿಂದ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕಮಲದ ಬೀಜಗಳ ಸೇವನೆಯಿಂದ ನಿದ್ರೆ ಸಮಸ್ಯೆಯಿಂದ ಪಾರಾಗಬಹುದು.
- ತಾವರೆ ಬೇರು ಫೈಬರ್ ಅಂಶದಿಂದ ಸಮೃದ್ಧವಾಗಿದೆ. ಇದು ಮಲ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಕಾರಿಯಾಗಿದೆ. ಇದರ ಕಾಂಡಗಳಲ್ಲಿರುವ ಪೋಷಕಾಂಶಗಳು ಮಲಬದ್ಧತೆ, ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
- ಕಮಲದ ಬೀಜಗಳಲ್ಲಿರುವ ಒಂದು ನಿರ್ದಿಷ್ಟ ಕಿಣ್ವವು ದೇಹದಲ್ಲಿ ಕಂಡುಬರುವ ಪ್ರೋಟೀನ್‌ಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಇದಲ್ಲದೆ, ದೇಹದ ಹಾನಿಗೊಳಗಾದ ಪ್ರೋಟೀನ್‌ಗಳನ್ನು ಸರಿಪಡಿಸಲು ಅವು ತುಂಬಾ ಪರಿಣಾಮಕಾರಿಯಾಗಿರುತ್ತವೆ.
- ಸ್ನಾಯು ಸೆಳೆತ ಅಥವಾ ಸ್ನಾಯು ನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕಮಲದ ಬೀಜಗಳನ್ನು ಸೇವಿಸಬಹುದು. ಅದರಲ್ಲೂ ಮಕ್ಕಳಿಗೆ ಕಮಲದ ಬೀಜಗಳನ್ನು ನೀಡಿದರೆ ಅವರ ಸ್ನಾಯುಗಳು ವೇಗವಾಗಿ ಬೆಳೆಯುತ್ತವೆ.
- ಕಬ್ಬಿಣ ಮತ್ತು ತಾಮ್ರದ ಪ್ರಮುಖ ಅಂಶಗಳು ಕಮಲದ ಬೇರುಗಳಲ್ಲಿ ಇರುತ್ತವೆ. ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ರಕ್ತಹೀನತೆಯ ಸಮಸ್ಯೆಗೆ ಮುಕ್ತಿ ನೀಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ, ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ, ಇದು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
- ಮಧುಮೇಹದಿಂದ ಬಳಲುತ್ತಿರುವವರು ನಾರಿನಂಶವನ್ನು ಹೊಂದಿರುವ ಕಮಲದ ಬೀಜಗಳನ್ನು ಸೇವಿಸಬಹುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮಧುಮೇಹದ ಪರಿಣಾಮಗಳನ್ನು ನಿಯಂತ್ರಿಸಬಹುದು.
- ಈ ಬೀಜದ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
- ತೂಕ ಇಳಿಸಿಕೊಳ್ಳಲು ಬಯಸುವವರು ಕಮಲದ ಬೀಜಗಳನ್ನು ತೆಗೆದುಕೊಳ್ಳಬಹುದು. ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಾಗಿದೆದ್ದ್ದು ತೆಗೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನಾವು ಪಡೆಯುತ್ತೇವೆ.
- ಇಂದು ಹೆಚ್ಚಿನ ಜನರು ಅತಿಯಾದ ಒತ್ತಡದಿಂದ ನಿದ್ರಾಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಮಲಗುವ ಮುನ್ನ ಒಂದು ಲೋಟ ಹಾಲಿನಲ್ಲಿ ಕೆಲವು ಕಮಲದ ಬೀಜದ ಪುಡಿ ಅಥವಾ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ ಸೇವಿಸಬೇಕು. ಇದರಿಂದ ಅವರಿಗೆ ಉತ್ತಮ ಮತ್ತು ಶಾಂತ ನಿದ್ರೆ ಬರುತ್ತದೆ.
- ಕಮಲದ ಬೇರನ್ನು ಸೇವಿಸುವ ಮೂಲಕ ನಾವು ನಮ್ಮ ದೇಹವನ್ನು ವಿವಿಧ ಸೋಂಕುಗಳು, ಸಿಡುಬು, ಕುಷ್ಠರೋಗ ಮತ್ತು ರಿಂಗ್‌ವರ್ಮ್‌ನಂತಹ ಶಿಲೀಂಧ್ರ ರೋಗಗಳನ್ನು ತಡೆಯಬಹುದಾಗಿದೆ.

ಸೌಮ್ಯ ಸನತ್.



