(ಬ್ಯಾಂಕರ್ಸ್ ಡೈರಿ)
ಕೈಗಳು ಮತ್ತು ಕಣ್ಣುಗಳು ಪೇಪರ್ ಹಾಗೂ ಕಂಪ್ಯೂಟರ್‌ಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದರೂ, ಒಂದು ಕಣ್ಣು, ಒಂದು ಕಿವಿ, ಒಂದು ಮನಸ್ಸು ಎದುರಿಗೆ ಕುಳಿತ ಗ್ರಾಹಕರ ಕಡೆ ಕೊಡಲೇಬೇಕಾದದ್ದು ಬ್ಯಾಂಕರಾಗಿ ನಮ್ಮ ಕರ್ತವ್ಯ.
ಆತ ನಮ್ಮ ಶಾಖೆಗೆ ಹೊಸಬರೇನೂ ಅಲ್ಲ. ಹೆಸರೇಕೆ ಬೇಕು ಅಲ್ವಾ? ಆತ ನಮ್ಮ ಗ್ರಾಹಕರು, ಅಷ್ಟೇ ಸಾಕು. ನಾನು ಅವರೊಂದಿಗೆ ವೈಯಕ್ತಿಕವಾಗಿ ಎಂದೂ ಮಾತನಾಡಿರಲಿಲ್ಲ. ಹೀಗೆ ಬರುವುದು, ಹೋಗುವುದು ಕಂಡಾಗ ವಿಶ್ ಮಾಡುವುದು ಅಷ್ಟೇ.
ಈಗ ವಯಸ್ಸಿನಿಂದ ಹಣ್ಣಾಗಿದ್ದಾರೋ, ಮನಸ್ಸಿನಿಂದ ಹಣ್ಣಾಗಿದ್ದಾರೋ ತಿಳಿಯುತ್ತಿಲ್ಲ.
ಅವತ್ತು ಏಕೆ ಈ ವಿಷಯ ಪ್ರಸ್ತಾಪವಾಯಿತು ಎಂಬ ಹಿನ್ನೆಲೆ ನನಗೆ ಪೂರ್ತಿ ನೆನಪಾಗುತ್ತಿಲ್ಲ. ಆದರೆ ನಾನು ಅವರ ಪತ್ನಿಯ ವಿಚಾರ ಪ್ರಸ್ತಾಪಿಸಿದ್ದಷ್ಟೇ ನೆನಪು.
“ನಿಮ್ಮ ಮನೆಯವರು ಹೇಗಿದ್ದಾರೆ?” ಎಂದು ಕೇಳಿದೆ.
“ಕ್ಯಾನ್ಸರ್‌ನಿಂದ ತೀರಿಕೊಂಡು ಎರಡು ವರ್ಷವಾಯಿತು,” ಎಂದರು.
ನಾನು “ಅಯ್ಯೋ!” ಎಂದೆ.
“ಹಾಗಿದ್ದರೆ ಮಗನ ಮನೆಯಲ್ಲಿ ಇದ್ದೀರಾ?” ಎಂದು ಕೇಳಿದೆ.
“ಇಲ್ಲ, ಒಂಟಿಯಾಗಿಯೇ ಇದ್ದೇನೆ,” ಎಂದರು.
ಅವರಿಗೆ ಮಗಳು ಇದ್ದ ನೆನಪು ನನಗಿತ್ತು. ನಾಮಿನೇಷನ್ ಮಾಡುವಾಗ ಒಬ್ಬೊಬ್ಬರಿಗೆ ಒಂದೊಂದು ಬಾರಿ ಮಾಡಿರುತ್ತೇವಲ್ಲ, ಹಾಗಾಗಿ ಕುಟುಂಬದವರ ಪರಿಚಯ ಇರುತ್ತದೆ.
ಈಗ ಕಂಪ್ಯೂಟರ್ ಬಂದ ಮೇಲೆ ವಿಳಾಸವನ್ನೆಲ್ಲ ನಾವು ಬರೆಯುವುದಿಲ್ಲ. ಆದರೆ ಹಿಂದೆ ಲೆಡ್ಜರ್‌ಗಳಿದ್ದಾಗ, ಎಫ್.ಡಿ. ಬಾಂಡ್‌ಗಳನ್ನು ಕೈಯಲ್ಲಿ ಬರೆದುಕೊಡುವಾಗ ಗ್ರಾಹಕರ ಹೆಸರು, ನಾಮಿನಿಯ ಹೆಸರು, ಮನೆಯ ವಿಳಾಸ ಎಲ್ಲವನ್ನೂ ಕೈಯಿಂದಲೇ ಬರೆಯುತ್ತಿದ್ದೆವು. ಹಾಗಾಗಿ ಜನವರಿ ಒಂದರ ಹೊಸ ವರ್ಷಾಚರಣೆಗೆ ಒಂದು ವಾರ ಮುಂಚೆಯೇ ನನ್ನ ನೆನಪಿನಿಂದ ನೂರು ಜನ ಗ್ರಾಹಕರ ಹೆಸರು ಮತ್ತು ಪೂರ್ಣ ವಿಳಾಸವನ್ನು ಎಲ್ಲಿಯೂ ನೋಡದೆ ಬರೆದು ಬ್ಯಾಂಕಿನ ಪರವಾಗಿ ಶುಭಾಶಯ ಪತ್ರ ಕಳುಹಿಸುತ್ತಿದ್ದೆ.
ಕಂಪ್ಯೂಟರ್ ಬಂದ ಮೇಲೆ ಸತ್ಯ ಏನೆಂದರೆ, ಗ್ರಾಹಕರ ಮುಖವನ್ನು ನೋಡಿ “ಇವರೇ ಆ ಹೆಸರಿನವರು” ಎಂದು ಗುರುತಿಸಿದರೆ ಸಾಕಾಗಿದೆ. ಇದಕ್ಕೆ ಎರಡು ಕಾರಣ—ಬಿಸಿನೆಸ್ ವಾಲ್ಯೂಮ್ ಹೆಚ್ಚಾಗಿದೆ; ಮಾನವೀಯ ಸಂಬಂಧಗಳು ಕಡಿಮೆಯಾಗಿವೆ.
ಇರಲಿ, ವಿಷಯಕ್ಕೆ ಬರುತ್ತೇನೆ.
ಮಗನೊಂದಿಗೆ ಅಥವಾ ಸೊಸೆಯೊಂದಿಗೆ ಹೊಂದಾಣಿಕೆ ಆಗಿಲ್ಲದಿರಬಹುದು ಎಂದುಕೊಂಡು, “ಮಗಳ ಜೊತೆಗಾದರೂ ಇರಬಹುದಿತ್ತಲ್ಲ?” ಎಂದೆ.
ಅವರು ಹೇಳಿದರು:
“ಮಗ, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳು… ಯಾರೂ ನನ್ನ ಜೊತೆ ಮಾತನಾಡುವುದಿಲ್ಲ.”
ಯಾರೋ ಒಬ್ಬರು ಮಾತನಾಡುವುದಿಲ್ಲ ಎಂದರೆ ಕುಟುಂಬದಲ್ಲಿ ಏನೋ ಸಮಸ್ಯೆ ಇರಬಹುದು ಎಂದುಕೊಳ್ಳಬಹುದು. ಆದರೆ ಅವರು ಮುಂದುವರಿದು ಹೇಳಿದರು:
“ನಾನು ಮೈಯಲ್ಲಿ ಶಕ್ತಿ ಇದ್ದಾಗ ಮಾಡದ ಕೆಲಸವೇ ಇಲ್ಲ. ಟಿಂಬರ್ ವ್ಯಾಪಾರ ಮಾಡಿದೆ, ಬಡ್ಡಿ ವ್ಯಾಪಾರ ಮಾಡಿದೆ, ದಿನಸಿ ವ್ಯಾಪಾರ ಮಾಡಿದೆ, ರಿಯಲ್ ಎಸ್ಟೇಟ್ ಮಾಡಿದೆ. ಕೋಟಿಗಟ್ಟಲೆ ದುಡಿದಿದ್ದೆ. ಸೈಟುಗಳು, ಮನೆಗಳು, ಗದ್ದೆ, ಹೊಲ, ಜಮೀನು… ಬೇಕಾದಷ್ಟು ಮಾಡಿದ್ದೆ.
ಒಂದು ದಿನ ಮಗ ಹೇಳಿದ—’ಅಪ್ಪ, ಎಲ್ಲವೂ ನಿಮ್ಮ ಹೆಸರಲ್ಲಿದ್ದರೆ ನಾಳೆ ನಿಮ್ಮ ಅಕ್ಕ-ತಂಗಿಯರು ಪಾಲು ಕೇಳುತ್ತಾರೆ. ಇದು ನಿಮ್ಮ ಸ್ವಯಾರ್ಜಿತ ಆಸ್ತಿ. ನನ್ನ ಹೆಸರಿಗೆ ಮಾಡಿಬಿಡಿ. ಆಗ ಯಾರೂ ಬರಲ್ಲ.’
ನನಗೂ ಸರಿ ಅನಿಸಿತು. ಎಲ್ಲವನ್ನೂ ಮಗನ ಹೆಸರಿಗೆ ಮಾಡಿಬಿಟ್ಟೆ. ಮಗಳಿಗೂ ಕೊಟ್ಟೆ.
ಮಗ ಒಳ್ಳೆಯವನೇ, ಮಗಳು ಒಳ್ಳೆಯವಳೇ… ಎಲ್ಲರೂ ಒಳ್ಳೆಯವರೇ.
ನನಗೆ ಯಾವಾಗಲೂ ಕೋಪ ಜಾಸ್ತಿ. ಕೋಪ ಬಂದಾಗ ನಾನು ಏನು ಮಾತನಾಡುತ್ತೇನೆ ಎಂಬ ಅರಿವೇ ಇರುವುದಿಲ್ಲ. ಯಾವ ಶಬ್ದ ಬಳಸುತ್ತೇನೆ ಎಂಬ ಪ್ರಜ್ಞೆಯೂ ಇರುವುದಿಲ್ಲ. ಅದೇ ನನಗೆ ದೊಡ್ಡ ಮುಳುವಾಯಿತು.”
“ಅಂಥದ್ದೇನಾಯ್ತು?” ಎಂದು ಕೇಳಿದೆ.
ಅವರು ಹೇಳತೊಡಗಿದರು:
“ನೋಡು ಮೊಗಾ…
ನನ್ನ ಹೆಂಡತಿಗೆ ಕ್ಯಾನ್ಸರ್ ಬಂದಾಗ ನಾವು ಮಗನ ಮನೆಯಲ್ಲಿ ಇದ್ದೆವು. ಅಂದರೆ ಅದು ನಾನು ಕಟ್ಟಿಸಿದ ಮನೆ. ಎಲ್ಲರೂ ಒಟ್ಟಿಗೇ ಇದ್ದೆವು.
ಮಗನಿಗೆ ಆ ಮನೆಯನ್ನು ಕೆಡವಿ ಹೊಸದಾಗಿ ಕಟ್ಟಿಸಬೇಕೆಂಬ ಆಸೆ. ಆದರೆ ನಾನು ಆಸೆಪಟ್ಟು ಕಟ್ಟಿಸಿದ ಮನೆ ಕೆಡವಲು ನಾ ಒಪ್ಪಲಿಲ್ಲ. ಅವನು ಹಠಕ್ಕೆ ಬಿದ್ದ, ನಾನೂ ಹಠಕ್ಕೆ ಬಿದ್ದೆ.
ಒಂದು ದಿನ ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ ಹೊಸ ಬಾಡಿಗೆ ಮನೆಗೆ ಹೊರಟ. ನಾನು ಮಾತ್ರ ಮನೆಯ ಹೊಸ್ತಿಲಲ್ಲಿ ನಿಂತಿದ್ದೆ.
ಮಗ, ಸೊಸೆ, ಮೊಮ್ಮಕ್ಕಳು ಕಾರು ಹತ್ತಿದರು. ಸರಿ. ಆದರೆ ನನ್ನ ಹೆಂಡತಿ ಒಂದು ಮಾತೂ ಆಡದೆ ಹೋಗಿ ಮಗನ ಪಕ್ಕ ಕುಳಿತುಬಿಟ್ಟಳು.
ಆ ಕ್ಷಣ ನನಗೆ ಕೋಪ ನೆತ್ತಿಗೇರಿತು.
ನಾನೇ ತಾಳಿ ಕಟ್ಟಿದ ಹೆಂಡತಿ… ಅವಳಿಗೆ ಮಕ್ಕಳು ನನ್ನಿಂದಲೇ… ಅವಳಿಗೆ ಬೇಕಾದದ್ದನ್ನೆಲ್ಲ ಕೊಟ್ಟಿದ್ದೆ.
Blood is thicker than water ಅನ್ನೋದು ನಿಜವೋ ಅಥವಾ ನನ್ನ ಕೋಪ ತಾಳಲಾರದೆ ಅವಳು ಹೊರಟಿದ್ದಳೋ ತಿಳಿಯೆ.. ಕೋಪದಲ್ಲಿ ಏನೇನೋ ಹೊಲಸು ಮಾತುಗಳನ್ನು ಆಡಿಬಿಟ್ಟೆ.
ಅಷ್ಟರವರೆಗೆ ಸುಮ್ಮನಿದ್ದ ಮಗ, ‘ಯಾಕಪ್ಪಾ ಅಮ್ಮನನ್ನು ಅಷ್ಟು ಕೆಟ್ಟದಾಗಿ ಬೈತೀರಾ?’ ಎಂದು ಕೇಳಿದ. ಜೋರಾಗಿ ಮಾತನಾಡಿ ಕಾರನ್ನು ಓಡಿಸಿಕೊಂಡು ಹೋದ.
ಮನೆಯಲ್ಲಿ ನಾನು ಒಂಟಿಯಾಗಿ ಉಳಿದೆ.
ಒಂದು ವಾರದ ನಂತರ ಮನಸ್ಸು ತಡೆಯಲಾರದೆ ಮೊಮ್ಮಗಳಿಗೆ ಫೋನ್ ಮಾಡಿದೆ.
ಅವಳು ಮಾತಿನ ಮಧ್ಯೆ ‘ಅಜ್ಜಿ’ ಎಂದು ಹೇಳಿದಳು.
ಮತ್ತೆ ನನಗೆ ಸಿಟ್ಟು ಬಂತು.
ಅವಳ ಅಜ್ಜಿಯ ಬಗ್ಗೆ ತೀರಾ ಕನಿಷ್ಠ ಭಾಷೆಯಲ್ಲಿ ಅರ್ಧ ಗಂಟೆ ಬೈದೆ.
ಮೊಮ್ಮಗಳು ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದಳು. ಅದನ್ನು ಅವಳಪ್ಪನಿಗೂ, ನನ್ನ ಮಗಳಿಗೂ ಕೇಳಿಸಿದ್ದಳು.
ಇಡೀ ಕುಟುಂಬ ನನ್ನ ಬೈಗುಳ ಕೇಳಿ ನನ್ನ ಜೊತೆ ಮಾತನಾಡುವುದನ್ನೇ ಬಿಟ್ಟುಬಿಟ್ಟರು.
ಆಗ ನನಗೆ ಮತ್ತಷ್ಟು ಸಿಟ್ಟು ಬಂತು.
ನಾನು ದುಡಿದಿದ್ದನ್ನೆಲ್ಲ ಮಗನಿಗೆ ಕೊಟ್ಟು, ಈಗ ನಾನೇ ಅವನ ಕೈ ಕೆಳಗೆ ಬಂದೆನಲ್ಲ ಎನ್ನುವ ಕೋಪದಲ್ಲಿ, ಯಾರೋ ಒಬ್ಬನಿಗೆ ಇಪ್ಪತ್ತೈದು ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟು ‘ನನ್ನ ಮಗನನ್ನು ಮುಗಿಸಿಬಿಡು’ ಎಂದು ಹೇಳಿಬಿಟ್ಟೆ.
ಯಾಕೆ ಆ ದುರ್ಬುದ್ಧಿ ಬಂತೋ ಇಂದಿಗೂ ಗೊತ್ತಿಲ್ಲ.
ಆ ರಾತ್ರಿ ಕನಸಿನಲ್ಲಿ ಮೊಮ್ಮಕ್ಕಳು ಬಂದು ಅಳುತ್ತಿದ್ದರು.
‘ತಾತ, ನಮ್ಮಪ್ಪನಿಗೆ ನೀನೇನು ಮಾಡಿಬಿಟ್ಟೆ? ನಮಗೆ ಇನ್ನು ಅಪ್ಪ ಇಲ್ಲ…’ ಎಂದು ಅಳುತ್ತಿದ್ದರು.
ಧಡಕ್ ಎಂದು ಎಚ್ಚರವಾಯಿತು.
ಅಯ್ಯೋ! ನನ್ನ ಕೋಪಕ್ಕೆ ನನ್ನ ಮೊಮ್ಮಕ್ಕಳಿಗೆ ಅಪ್ಪ ಇಲ್ಲದಂತಾಗುತ್ತಿತ್ತು… ನನ್ನ ಸೊಸೆಗೆ ಗಂಡ ಇಲ್ಲದಂತಾಗುತ್ತಿತ್ತು…
ತಕ್ಷಣ ಆ ಮನುಷ್ಯನಿಗೆ ಫೋನ್ ಮಾಡಿ,
‘ಅಡ್ವಾನ್ಸ್ ದುಡ್ಡು ನೀನೇ ಇಟ್ಟುಕೋ. ನನ್ನ ಮಗನಿಗೆ ಏನೂ ಮಾಡಬೇಡ. ಅವನು ಚೆನ್ನಾಗಿರಲಿ,’ ಎಂದು ಹೇಳಿಬಿಟ್ಟೆ.
ಇವೆಲ್ಲ ಗೊತ್ತಿಲ್ಲದ ಮಗ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿದ.
ನಾನು ಹೋಟೆಲ್‌ನಲ್ಲಿ ಒಬ್ಬನೇ ಊಟ ಮಾಡುವುದು ಅವನಿಗೆ ಬೇಡವಾಗಿತ್ತು.
ಆದರೆ ಇಷ್ಟು ರಾಜನಂತೆ ಬದುಕಿದ ನಾನು ವೃದ್ಧಾಶ್ರಮದಲ್ಲಿ ಇರಬೇಕಾ?
ಸೇರಿದ ಮರುದಿನವೇ ಮ್ಯಾನೇಜರ್ ಜೊತೆ ಜಗಳವಾಡಿ, ಬೆದರಿಸಿ, ಗೆಳೆಯನಿಗೆ ಫೋನ್ ಮಾಡಿ ಕಾರು ತರಿಸಿಕೊಂಡು ಅಲ್ಲಿಂದ ಹೊರಟುಬಂದೆ.
ಈ ನಡುವೆ ನನ್ನ ಹೆಂಡತಿಯೂ ಕ್ಯಾನ್ಸರ್‌ನಿಂದ ತೀರಿಕೊಂಡಳು.
ಈಗ ಹೇಗೋ ನಾನೇ ಒಂಟಿ ಸಂಸಾರ ನಡೆಸುತ್ತಿದ್ದೇನೆ.
‘ಕೋಪವೆಂಬುದನರ್ಥ ಸಾಧನಂ’ ಎಂಬ ಮಾತಿನಂತೆ, ಕೋಪಕ್ಕೆ ನನ್ನ ನಾಲಿಗೆಯನ್ನೂ ಬುದ್ಧಿಯನ್ನೂ ಕೊಟ್ಟು ನನ್ನ ಇಡೀ ಸಂಸಾರವನ್ನೇ ನಾನೇ ಹಾಳು ಮಾಡಿಕೊಂಡೆ.
ಈಗಲೂ ಕೋಪ ಸಂಪೂರ್ಣ ಕಡಿಮೆಯಾಗಿಲ್ಲ. ‘ಹುಟ್ಟುಗುಣ ಸುಟ್ಟು ಹೋಗುವುದಿಲ್ಲ’ ಅಂತಾರಲ್ಲ, ಹಾಗೆಯೇ ಇದೆ.
ಆದರೆ ಒಂದು ಅರಿವು ಬಂದಿದೆ.
ಕೋಪ ಬಂದಾಗ ನಾಲಿಗೆಯ ಮೇಲೆ ಹಿಡಿತ ಇರಬೇಕು.
ಅದೇನು ಮಾಡುವುದು… ಕಾಲ ಮಿಂಚಿ ಹೋಗಿದೆ.
ಇರಲಿ ಬಿಡು ಮೊಗಾ… ನಾನು ಹೋಗ್ತೇನೆ.”
ಎಂದು ಹೇಳಿ ಹೊರಟುಬಿಟ್ಟರು.
ಆಮೇಲೆ ಅವರನ್ನು ನಾನು ಮತ್ತೆ ಕಂಡಿಲ್ಲ.
ಮನುಷ್ಯ ಮತ್ತು ಮೃಗಗಳ ನಡುವಿನ ಬಹುದೊಡ್ಡ ವ್ಯತ್ಯಾಸ ಕೋಪವನ್ನು ನಿಭಾಯಿಸುವ ರೀತಿಯಲ್ಲಿದೆ.
ಪ್ರಾಣಿಗಳಿಗೆ ಹಸಿವು ಮತ್ತು ಕೋಪ ಬಂದಾಗ ಬುದ್ಧಿಗಿಂತ ದೇಹದ ಸಹಜ ಪ್ರವೃತ್ತಿಯೇ ಕೆಲಸ ಮಾಡುತ್ತದೆ.
ಆದರೆ ಮನುಷ್ಯನಿಗೆ ಜ್ಞಾನ, ಅರಿವು, ಅನುಭವ ಇವೆ. ಕೋಪ ಹೆಚ್ಚಾದಾಗ ಏನು ಮಾಡಿದರೆ ಶಾಂತವಾಗಬಹುದು, ಅಥವಾ ಸ್ವಲ್ಪ ಸಮಯ ಏನೂ ಮಾತನಾಡದೆ ಸುಮ್ಮನಿದ್ದರೆ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು ಎಂಬ ಎಚ್ಚರ ಇದ್ದರೆ, ಈ ಸಮಾಜ ಅಶಾಂತಿ ಮತ್ತು ಯುದ್ಧಗಳಿಂದ ಬಹಳ ಮಟ್ಟಿಗೆ ಮುಕ್ತವಾಗಬಹುದು.

-ಡಾ.ಶುಭಶ್ರೀ ಪ್ರಸಾದ್ ಮಂಡ್ಯ








