ಮೈಸೂರು: ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿ ಇರುವ ಗೋದಾಮುಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ, ನಾಲ್ಕು ಗೋದಾಮುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಗೋದಾಮುಗಳಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಗೋದಾಮುಗಳಿಗೆ ವ್ಯಾಪಿಸಿ, ಸುತ್ತಮುತ್ತಲಿನ ಇತರ ಗೋದಾಮುಗಳಿಗೂ ಹರಡಿದೆ. ಮುಗಿಲೆತ್ತರದ ಜ್ವಾಲೆಗಳು ಹೊತ್ತಿ ಉರಿದ ಪರಿಣಾಮ ದಟ್ಟ ಹೊಗೆ ಪ್ರದೇಶವನ್ನೆಲ್ಲ ಆವರಿಸಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಲವು ಗಂಟೆಗಳ ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ಇದನ್ನು ಓದಿ –ಪಿಜಿ ವೈದ್ಯಕೀಯ ಆಯ್ಕೆ : ಫೆ.10ರವರೆಗೆ ಅವಧಿ ವಿಸ್ತರಣೆ
ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ಗೋದಾಮು ಮಾಲೀಕರು ತಿಳಿಸಿದ್ದಾರೆ. ಮದ್ಯಪಾನದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮೈಸೂರಿನ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








