ನಾನು ಭಾವನಾಂತರಂಗದಲ್ಲಿ ಒಂದು ಸಾಲು ಬರೆದಿದ್ದೆ, “ನಾವು ದ್ವೇಷಕ್ಕೆ ಬೆಂಕಿ ಹಚ್ಚಬೇಕು ಹೊರತು ಮನಸ್ಸಿಗಲ್ಲ ” ಎನ್ನುವುದು!
ನಾವು ದ್ವೇಷದ ಸ್ವಭಾವವನ್ನು ಹೊಂದಿದಷ್ಟು ನಮ್ಮ ಮನಸ್ಸು ಸುಡುತ್ತದೆ, ಅದರಿಂದ ಆರೋಗ್ಯ ಹಾಳಾಗುವುದು ನಮ್ಮದೇ!
ಹೀಗಾಗಿ ದ್ವೇಷದ ಸ್ವಭಾವ ಬಿಡುವುದು ನಮ್ಮ ಒಳ್ಳೆಯದಕ್ಕೆ ಹೊರತು ಅನ್ಯರಿಗಾಗಿ ಅಲ್ಲ !
ನಮಗೆ ಒಳ್ಳೆಯದಾಗಲು ನಾವು ಬೇಕಾದಷ್ಟು ಪ್ರಯತ್ನ ಪಡುತ್ತೇವೆ, ಆರೋಗ್ಯದ ದೃಷ್ಟಿಯಿಂದ ವಾಯು ವಿಹಾರ , ವ್ಯಾಯಾಮ ಮಾಡುತ್ತೇವೆ, ಆದರೂ ನಮ್ಮ ಆರೋಗ್ಯ ಒಂದೊಂದು ಬಾರಿ ಸುಧಾರಿಸುವುದಿಲ್ಲ ಎಂದರೆ ಒಂದು ಕಾರಣ ನಾವೇ ನಮ್ಮ ಮನಸ್ಸಿಗೆ ಚಿತ್ರಹಿಂಸೆ ಕೊಡುತ್ತೇವೆ ಎಂದು ಅರ್ಥ!
ನಾವು ಎಲ್ಲಾ ರೀತಿಯ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೂ ಎಲ್ಲೋ ಒಂದು ಕಡೆಗೆ ಭುಗಿಲೇಳುವ ದ್ವೇಷವನ್ನು ಸಾಕಿದ್ದೇವೆ ಎಂದು ಅರ್ಥ! ಅದನ್ನು ಬಿಟ್ಟರೂ ನಮ್ಮ ಆರೋಗ್ಯ ಸುಧಾರಿಸಬಹುದು, ಏಕೆಂದರೆ ದ್ವೇಷ ಮನಸ್ಸನ್ನು ಸುಡುತ್ತದೆ, ಅದರಿಂದ ನಿದ್ದೆ ಗೆ ಕತ್ತರಿ ಬೀಳುತ್ತದೆ, ಹೀಗಾಗಿ ದ್ವೇಷ ನಮ್ಮನ್ನು ನಾವು ತಿವಿದು ಕೊಳ್ಳವ ಚಾಕುವಿದ್ದಂತೆ!
ಮನದಲ್ಲಿ ದ್ವೇಷ ಇಟ್ಟುಕೊಂಡರೆ ಯಾವಾಗಲೂ ವಿಷವನ್ನೇ ಕಾರಿದಂತೆ, ಅದು ನಮ್ಮ ಜೀವನಕ್ಕೆ ಹಾನಿ!
ಎಷ್ಟೋ ಸಂಬಂಧಗಳಲ್ಲಿ ಇವುಗಳು ಕಾಣಸಿಗುತ್ತವೆ, ಅದರಲ್ಲೂ ಈ ದ್ವೇಷ ಅಕ್ಕ ತಂಗಿಯರಿಗಿಂತ ಅಣ್ಣ ತಮ್ಮಂದಿರಲ್ಲಿ ಜಾಸ್ತಿ!
ತಂದೆ,ತಾಯಿಯರು ಒಟ್ಟುಗೂಡಿಸಿದ ಸುಂದರ ಹೂಗುಚ್ಛ ಬೇರೆ,ಬೇರೆಯಾಗಲು, ಈ ದ್ವೇಷ , ಸಿಟ್ಟು, ಮತ್ಸರ ಮುಖ್ಯವಾಗಿ ಕಾರಣವಾಗುತ್ತದೆ!
ತಂದೆ ತಾಯಿಯರ ಹೂಗಳು ಬೇರೆಯ ಹೂಗಳ ಜೊತೆ ಸೇರಿದಾಗ ಬಾಲ್ಯದ ಹೂಗಳನ್ನು ದೂರ ಸರಿಸುತ್ತವೆ!
ಅದರಿಂದ ಬೇರು ಸಮೇತ ಗಿಡ ಬಿದ್ದು ಬಿಡುತ್ತದೆ! ಹೂಗುಚ್ಛದಲ್ಲಿ ಒಂದು ಹೂವು ವಿಷದ್ದಾಗಿದ್ದರೆ ಸಾಕು ದ್ವೇಷದ ಬೆಂಕಿ ಅದನ್ನು ಹೇಳ ಹೆಸರಿಲ್ಲದಂತೆ ಸುಟ್ಟು ಬಿಡುತ್ತದೆ!
ಅದೇ ರೀತಿ ಆತ್ಮೀಯತೆಯಲ್ಲಿ, ಗೆಳೆತನದಲ್ಲಿ ಕೂಡ ಇರುವ ಸಾಧ್ಯತೆ ಇರುತ್ತದೆ !
ಇಬ್ಬರು ಆತ್ಮೀಯರನ್ನು ದೂರ ಸರಿಸಲು ಒಂದು ದ್ವೇಷದ ಕಿಡಿ ಸಾಕು! ನಂತರ ಆ ಕಿಡಿ ಬೆಂಕಿಯಾಗಿ, ಎಲ್ಲಾ ಸಂಬಂಧಗಳನ್ನು ಸುಟ್ಟು ಬೂದಿಯಾಗಿಸಿ ಬಿಡುತ್ತದೆ!
ಹೀಗಾಗಿ ನಾವು ದ್ವೇಷಕ್ಕೆ ಬೆಂಕಿ ಹಚ್ಚಬೇಕು ಹೊರತು ಮನಸ್ಸಿಗಲ್ಲ!
ನಾವು ಗೀರಿದ ಕಡ್ಡಿ ದೇವರ ಮುಂದಿನ ನಂದಾ ದೀಪಕ್ಕೆ ಮಾತ್ರ ಸೀಮಿತವಾಗಿರಬೇಕು!

ಸ್ನೇಹಾ ಆನಂದ್








