ವ್ಯಕ್ತಿಯ ಮನಸ್ಸು ಹೇಗಿರುತ್ತದೆಯೋ ಹಾಗೆ ಅವರು ವರ್ತಿಸುತ್ತಾರೆ , ಅದನ್ನೇ ನಾವು ಅವರ ಸ್ವಭಾವ, ಗುಣ ಅಥವಾ ವ್ಯಕ್ತಿತ್ವ ಎಂದು ಹೇಳುವುದು!
ಒಬ್ಬರ ಸ್ವಭಾವದಲ್ಲಿ ಮನಸ್ಸು ತುಂಬಾ ಭಾವುಕವಾಗಿದ್ದರೆ ಅವರ ಮನಸ್ಸು ಮೃದುವಾಗಿರುತ್ತದೆ, ಎಲ್ಲರ ನೋವಿಗೂ ಸ್ಪಂದಿಸುವ, ಮಿಡಿಯುವ ಹೃದಯ ಅವರದು! ತಮಗೆ ನೋವಾದರೂ ಸರಿ ಇನ್ನೊಬ್ಬರಿಗೆ ನೋವಾದರೂ ಸರಿ ಅವರ ಕಣ್ಣುಗಳು ತಕ್ಷಣ ಒದ್ದೆಯಾಗಿ ಬಿಡುತ್ತವೆ, ಎಲ್ಲರೂ ಚೆನ್ನಾಗಿರಲಿ ಎನ್ನುವ ವ್ಯಕ್ತಿತ್ವದ ವ್ಯಕ್ತಿ ಅವರು!
ಅದೇ ಕಠಿಣ ಸ್ವಭಾವದವರಾಗಿದ್ದರೆ , ಯಾರು ಹೇಗಿದ್ದರೂ ನನಗೇನು ಅದು ಅವರವರ ಹಣೆಬರಹ, ನಾನು ಚೆನ್ನಾಗಿದ್ದರೆ ಅಷ್ಟೇ ಸಾಕು ಎನ್ನುವ ಮನೋಭಾವ! ಇವರು ಯಾರನ್ನಾದರೂ ಮನೆಗೆ ಕರೆಯಬೇಕಾದರೆ ನಿರ್ದಿಷ್ಟ ಕಾರಣವಿರಬೇಕು! ತಮ್ಮ ಮನೆಯ ಸಮಾರಂಭ ಚೆನ್ನಾಗಿ ಆಗಬೇಕು ಅಷ್ಟೇ, ಅದರಂತೆ ತಮ್ಮವರ ಸಮಾರಂಭವೂ ಚೆನ್ನಾಗಿ ಆಗಲಿ ಎನ್ನುವ ಮನೋಭಾವನೆ ಇರುವುದಿಲ್ಲ! ಅಪಹಾಸ್ಯದ ಮಾತುಗಳು, ಅತಿರೇಕದ ಹಾವಭಾವ, ವಿಲಕ್ಷಣ ನಗು ಮುಖದಲ್ಲಿ ಹೊಮ್ಮಿಸುತ್ತಾರೆ! ತಮ್ಮ ಬಗ್ಗೆ ಮಾತ್ರ ಹೆಮ್ಮೆ ಪಡುವ ಇವರು ಬೇರೆಯವರ ಬಗ್ಗೆ ಉಡಾಫೆಯ ಮಾತುಗಳನ್ನಾಡುವ ಸ್ವಭಾವ ಇವರದು!
ಇನ್ನು ಸ್ವಭಾವದಿಂದ ಸ್ಥಿತಪ್ರಜ್ಞತೆಯನ್ನು ಹೊಂದಿದವರು ಯಾರ ನೋವಿಗೂ ಸ್ಪಂದಿಸದೇ, ತಮ್ಮ ಸ್ವಂತ ನೋವನ್ನು ಕೂಡ ಹಣೆಬರಹ ಎಂದುಕೊಂಡ ಮೌನವಾಗಿ ಮುಂದೆ ಸಾಗುತ್ತಾರೆ! ಇವರಿಗೆ ಯಾರ ಮೇಲೂ ದ್ವೇಷ, ಸೇಡಿನ ಮನೋಭಾವನೆ ಇರುವುದಿಲ್ಲ, ಹಾಗಂತ ಪ್ರೀತಿಯೂ ಜಾಸ್ತಿ ಇರುವುದಿಲ್ಲ, ಮೋಹದಲ್ಲಂತೂ ಬೀಳುವುದೇ ಇಲ್ಲ! ನೀರಿನ ಮೇಲಿನ ಕಮಲದಂತೆ ಇವರ ಜೀವನ! ಇದು ಮನೆಯ ಸದಸ್ಯರಿಗೆ ಒಂಥರಾ ಉಸಿರುಗಟ್ಟಿಸ ಬಹುದು!
ಇನ್ನು ಸ್ವಾರ್ಥ ಮನಸ್ಸು ಇದ್ದವರು ಬೇರೆಯವರು ಹಾಳಾಗಿ ಹೋಗಲಿ ನನಗೇನು, ನಾನು ಚೆನ್ನಾಗಿದ್ದರೆ ಸಾಕು ಎಂದು ಕೊಳ್ಳುವ ಅತಿ ಸಣ್ಣತನದ ಮನೋಭಾವದವರು! ಇವರು ಒಂದು ಸಹಾಯ ಮಾಡಿದರೆ ಅದರಲ್ಲಿ ಒಂದು ಸ್ವಾರ್ಥದ ಉದ್ದೇಶವನ್ನಿಟ್ಟುಕೊಂಡೆ ಮಾಡುತ್ತಾರೆ ಹೊರತು ಹೃದಯಪೂರ್ವಕವಾಗಿ ಸಹಾಯ ನೀಡುವುದಿಲ್ಲ!
ಇನ್ನು ಅತಿ ದಯೆ ಹೊಂದಿದ ಮನಸ್ಸಿನವರು ತಮಗೆ ಎಷ್ಟಾದರೂ ಕಷ್ಟವಾದರೂ ಪರವಾಗಿಲ್ಲ ಬೇರೆಯವರ ಕಷ್ಟಕ್ಕೆ ಜೊತೆಯಾಗಿ ನಿಲ್ಲುವವರು! ಇಂಥವರು ಅತಿ ವಿರಳವಾಗಿ ಸಿಗುತ್ತಾರೆ, ಆದರೆ ಸಮುದ್ರದ ಮುತ್ತಿನಂತೆ ಅಲ್ಲೊಬ್ಬರು ಇಲ್ಲೊಬ್ಬರು ಇದ್ದೇ ಇರುತ್ತಾರೆ! ಇವರು ಮನೆಯ ಸದಸ್ಯರ ವಿರೋಧ ಕಟ್ಟಿಕೊಂಡರೂ ಪರವಾಗಿಲ್ಲ ಬೇರೆಯವರಿಗೆ ಸಹಾಯ ಮಾಡುವ ಸ್ವಭಾವ!
ಇನ್ನು ದುರಹಂಕಾರದ ಮನಸ್ಸಿನವರು ಎಲ್ಲರ ಮೇಲೆ ದರ್ಪ ತೋರಿಸುತ್ತಾ, ಪ್ರತಿಯೊಬ್ಬರ ಮಾತನ್ನು ಹೀಯಾಳಿಸುತ್ತಾ ತಮ್ಮ ತೀರ್ಮಾನವೇ ಅಂತಿಮ ಎನ್ನುವವರು, ಇವರ ಮನೆಯ ಸದಸ್ಯರ ಆಸೆ ಆಕಾಂಕ್ಷೆಗಳು ನೀರಿನಲ್ಲಿ ಹೋಮ ಮಾಡಿದ ಹಾಗೆ! ಎಲ್ಲರ ಮಾತನ್ನು ಕಡೆಗೆಣಿಸುವ ಸ್ವಭಾವ, ನಾನೇ ಜ್ಞಾನಿ ಬೇರೆಯವರಿಗೆ ಏನೂ ತಿಳಿಯುವುದಿಲ್ಲ ಎನ್ನುವ ಧೋರಣೆಯ ಮನೋಭಾವ! ಇವರು ಇದ್ದಲ್ಲಿ ನಗು, ಹಾಸ್ಯ ಅಷ್ಟಕಷ್ಟೆ, ಹೊರಗಿನವರ ಜೊತೆಗೆ ನಗುತ್ತಾ ಇರುವ ಇವರು ಮನೆಯವರ ಬಗ್ಗೆ ಮಾತ್ರ ತುಂಬಾ ಕಠಿಣವಾಗಿ ವರ್ತಿಸುತ್ತಾರೆ, ಸಂಸಾರದ ತೀರ್ಮಾನ ಪೂರ್ತಿ ಇವರ ಕೈಯಲ್ಲೇ!
ಇನ್ನೊಂದು ರೀತಿಯ ಮನಸ್ಸಿನವರು, ಅವರಿಗೆ ಯಾವುದೇ ವಿಷಯದಲ್ಲಿ ಆಸಕ್ತಿ ಇರುವುದಿಲ್ಲ, ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾರೆ, ಹಟ ಇರುವುದಿಲ್ಲ ಆದರೆ ತಾವಾಗಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಯಾರೇ ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರು ಸಮ್ಮತಿ ನೀಡುತ್ತಾರೆ, ಅಂದರೆ ಯಾವುದೇ ಜವಾಬ್ದಾರಿ ಹೊರಲಾರದ ಸ್ವಭಾವ, ಕೆಲಸ, ಜವಾಬ್ದಾರಿ ನನ್ನ ತನಕ ಬರದಿದ್ದೆರೆ ಸಾಕು, ಅವರೇನಾದರೂ ಮಾಡಿಕೊಳ್ಳಲಿ ಎನ್ನುವ ಸ್ವಭಾವ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯ ಆಸಾಮಿ!
ಇನ್ನು ಒಂದು ಮುಖ್ಯ ಮನಸ್ಸಿನ ಬಗ್ಗೆ ಹೇಳಲೇ ಬೇಕು ಇವರು ನೋಡಲು ತುಂಬಾ ಸರಳ ವ್ಯಕ್ತಿ ಅನಿಸುತ್ತಾರೆ, ಆದರೆ ಮನಸ್ಸು ಮಾತ್ರ ತುಂಬಾ ಕಠಿಣ! ತಪ್ಪುಗಳನ್ನು ಖಂಡಿಸುತ್ತಾರೆ ಅವರು ಯಾರೇ ಇರಲಿ ಮಕ್ಕಳಿರಲಿ ಬಂಧು ಬಾಂಧವರಿರಲಿ! ಹೀಗಾಗಿ ಇವರು ಜೀವನದಲ್ಲಿ ಒಂಟಿಯಾಗಿ ನಿಲ್ಲುವ ಸಂಭವ ಜಾಸ್ತಿ! ಇವರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡವರು ಇದ್ದರೆ ಮಾತ್ರ ಇವರನ್ನು ತಪ್ಪು ತಿಳಿಯುವುದಿಲ್ಲ, ಇಲ್ಲದಿದ್ದರೆ ಇವರು ಒಂಟಿಯೇ ಸರಿ!
ಇನ್ನೊಂದು ವಿಶೇಷ ಸ್ವಭಾವದ ಬಗ್ಗೆ ಹೇಳಲೇ ಬೇಕು,ಇವರದು ಮಾತಿನಲ್ಲಿ ಸಿಹಿ, ಆದರೆ ಮನಸ್ಸು ಮಾತ್ರ ಕಹಿ! ಕಹಿ ನಾಲಿಗೆಗೆ ಸಿಹಿ ಜೇನಿನ ಲೇಪನ ಅಷ್ಟೇ! ನೋಡಲು ನಮ್ಮವರೇ ಅನಿಸುತ್ತಾರೆ, ಆದರೆ ಮನಸ್ಸಿನಿಂದ ನಮ್ಮವರಾಗಿರುವುದು ಇಲ್ಲ! ಈ ವ್ಯಕ್ತಿಯ ಗಾಳಕ್ಕೆ ಬೀಳುವವರು ಒಂದಲ್ಲ ಒಂದು ದಿನ ಇವರ ಸ್ವಭಾವದಿಂದ ಘಾಸಿಗೊಂಡು ಹೊರಗೆ ಬರುತ್ತಾರೆ!
ಇನ್ನೊಂದು ಕೆಟಗರಿ ಜನ ಇದೆ, ಸಹಾಯ ಮಾಡುವಂತೆ ಮಾಡುವುದು ನಂತರ ಪ್ರತಿಯೊಬ್ಬರ ಮುಂದೆ ಹೇಳಿಕೊಂಡು ತಿರುಗುವುದು, ಇವರ ಸಹಾಯವೂ ಬೇಡ ಇವರೂ ಬೇಡ ಎನ್ನುವಷ್ಟು ಬೇಸರ ತರುತ್ತದೆ ಮನಸ್ಸಿಗೆ! ಸಹಾಯ ತೆಗೆದುಕೊಂಡವರನ್ನು ಅವರಿಗೆ ಗೊತ್ತಿಲ್ಲದಂತೆ ಇನ್ನೊಬ್ಬರ ಮುಂದೆ ಆಡಿಕೊಂಡು ನಗುವ ಸ್ವಭಾವ, ಹಣವಂತಿಕೆಯ ದುರಭಿಮಾನ, ನೇರವಾಗಿ ಮಾತನಾಡಿ ಹೇಳುವವರಲ್ಲ, ಆದರೆ ಬೇರೆಯವರ ಮುಂದೆ ಸಹಾಯ ತೆಗೆದುಕೊಂಡವರನ್ನು ಕೀಳಾಗಿ ಮಾಡುತ್ತಾರೆ, ಅದು ಸಹಾಯ ತೆಗೆದುಕೊಂಡವರಿಗೆ ಗೊತ್ತಾಗುವುದೇ ಇಲ್ಲ!
ಹಾಗೆಯೇ ಇನ್ನೊಂದು ಕೆಟಗೆರಿಯ ಜನರು ಜಿಪುಣಾಗ್ರೇಸರು, ದುಡ್ಡಿನ ವಿಷಯ ಬಂದರೆ ಯಾವಾಗಲೂ ಹಿಂದಕ್ಕೆ ಸರಿಯುವ ಸ್ವಭಾವ, ಇವರು ತಮ್ಮ ಜೀವನದಲ್ಲಿ ಒಂದು ರೀತಿಯ ಹಿಡಿತ ಮಾಡಿ,ಮಾಡಿ ಅದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟಿರುತ್ತಾರೆ, ಜೀವನದ ಖುಷಿಯನ್ನು ಅನುಭವಿಸುವ ಸ್ವಭಾವ ಇವರದಲ್ಲ, ಸ್ವಂತದವರಿಗೂ ಅಲ್ಪ ಸ್ವಲ್ಪ ಸಹಾಯ ಮಾಡಲು ಹತ್ತು ಸಲ ವಿಚಾರ ಮಾಡುತ್ತಾರೆ!
ಮತ್ತೊಂದು ಸ್ವಭಾವ ಇದು ಹೆಂಗಸರಲ್ಲಿ ಮಾತ್ರ ಜಾಸ್ತಿ ಕಾಣಸಿಗುತ್ತದೆ, ತನ್ನ ಗಂಡ ಒಳ್ಳೆಯ ಸ್ಥಾನದಲ್ಲಿದ್ದರೆ, ಅಧಿಕಾರದಲ್ಲಿದ್ದರೆ ಗಂಡನಿಗೆ ಇಲ್ಲದ ದುರಹಂಕಾರ ಹೆಂಡತಿಗೆ! ಈ ರೀತಿಯ ಒಂದು ಕನ್ನಡ ಚಿತ್ರ ಇದೆ ನೆನಪಿದೆಯಾ! ಪೋಲಿಸ್ ಹೆಂಡ್ತಿ ಅಂತ.
ಈ ರೀತಿಯ ಸ್ವಭಾವ ಇರುವ ಹೆಣ್ಣು ಎಲ್ಲರನ್ನೂ ಕೀಳಾಗಿ ನೋಡುತ್ತಾ ಉಡಾಫೆಯ ಮಾತನ್ನಾಡುವುದು ಜಾಸ್ತಿ , ಇವರ ಸಹಾಯ ತೆಗೆದುಕೊಂಡರೆ ಮುಗಿಯಿತು ಅವರ ಪ್ರತಿ ಮಾತು, ನಿರ್ಧಾರಕ್ಕೆ ನಾವು ತಲೆ ಬಾಗಿಸಲೇ ಬೇಕು!
ಇನ್ನೊಬ್ಬ ವಿಚಿತ್ರ ಮನಸಿನ ಸ್ವಭಾವದವರು ಇವರು ಯಾರ ಮನಸ್ಸಿಗೂ ನೋವು ಮಾಡುವುದಿಲ್ಲ, ಎಲ್ಲರ ಮಾತಿಗೂ ಹೂಂ ಗುಟ್ಟುತ್ತಾರೆ, ಎದಿರು ಮಾತನಾಡಿ ಯಾರಿಗೂ ಕೆಟ್ಟವರಾಗುವುದಿಲ್ಲ, ಆದರೆ ಮಾಡುವುದು ಮಾತ್ರ ತಮ್ಮ ಮನಸ್ಸಿನಂತೆ, ಇಂಥವರನ್ನು “ಹೂಂನಪ್ಪನ ಛಾವಡಿಯವರು” ಎಂದು ಹೇಳುತ್ತೇವೆ ಉತ್ತರ ಕರ್ನಾಟಕದ ಕಡೆಗೆ!
ಆದರೆ ಇವರನ್ನು ನಂಬಿ ಯಾವುದೇ ದೊಡ್ಡ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ ಹಾಗು ಅಪಾಯ!
ಹೀಗೆ ನಾನಾ ರೀತಿಯ ಚಿತ್ರ ವೈಚಿತ್ರ್ಯ ಸ್ವಭಾವದ ಜನರು ನಮ್ಮ ಸುತ್ತ ಮುತ್ತ ಇರುತ್ತಾರೆ! ಅವರಲ್ಲಿರುವ ಗುಣ ನಾವು ಗುರುತಿಸಿ ಅವರೊಂದಿಗೆ ಮುನ್ನಡೆಯಬೇಕು! ನಾನು ನನಗೆ ನೆನಪಾದಷ್ಟು ಸ್ವಭಾವದ ಪರಿಚಯ ಮಾಡಿಸಿದ್ದೇನೆ!
ಆದರೆ ಇನ್ನೂ ಸಂಕೋಚ ಸ್ವಭಾವದವರು, ಬಂಢತನದ ಸ್ವಭಾವದವರು, ಜಿಪುಣರು, ವನ್ ವೇ ಸಹಾಯ ಪಡೆಯುವವರು, ಬೇಕಾಬಿಟ್ಟಿ ಸ್ವಭಾವದವರು, ಯಾರಿಗೂ ಕ್ಯಾರೆ ಅನ್ನದವರು, ಶರ್ಟ್ ಕಾಲರ್ ಝಾಡಿಸುವಂತೆ ಝಾಡಿಸುವವರು, ಗೋಲ್ ಮಾಲ್ ಮಾಡುವವರು, ಸುಳ್ಳಲ್ಲೇ ಜೀವಿಸುವ ಸ್ವಭಾವದವರು, ಹೊಟ್ಟೆಕಿಚ್ಚಿನ ವ್ಯಕ್ತಿತ್ವದವರು, ತಲೆ ಹಿಡಿಯುವಷ್ಟು ಮಾತನಾಡುವವರು, ಸಹನೆಯಾಗದಷ್ಟು ಮೌನಿಗಳು,ಸ್ವಪ್ರತಿಷ್ಠೆಯನ್ನು ಹೇಳಿಕೊಳ್ಳುವವರು!
ಹೇಗೆ ಜಗತ್ತಿನಲ್ಲಿ ಸಾವಿರಾರು ಮುಖಚರ್ಯೆ ಹೊಂದಿದವರು ಇದ್ದರೆಯೋ, ಹಾಗೆಯೇ ಅಷ್ಟೇ ವಿಧದ ಸ್ವಭಾವದವರು ನಮಗೆ ಕಾಣುತ್ತಾರೆ!
ಇಂಥವರ ಮಧ್ಯದಲ್ಲಿ ಹೃದಯವಂತರನ್ನು ಗುರುತಿಸಿ ಗೆಳೆತನ ಬೆಳೆಸಿಕೊಳ್ಳುವುದು ಕಷ್ಟ ಸಾಧ್ಯ! ಆದರೆ ಅವರ ಜೊತೆಗಿರುವ ತುಂಬಾ ವರ್ಷಗಳ ಒಡನಾಟದಿಂದ ಅವರ ಸ್ವಭಾವ ನಮಗೆ ಅರಿವಾಗುತ್ತಾ, ಇದು ನಮಗೆ ಅವರ ಮೇಲ್ಮುಖ, ಒಳಮುಖಗಳ ಪರಿಚಯ ಮಾಡಿಸುತ್ತದೆ!

ಸ್ನೇಹಾ ಆನಂದ್








