ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೇವಲ ಒಂದು ಅಂಕಿ-ಅಂಶವಷ್ಟೇ ಹೊರತು ನಿಮ್ಮ ಭವಿಷ್ಯದ ಅಂತಿಮ ತೀರ್ಪಲ್ಲ. ಹತ್ತನೇ ತರಗತಿಯಲ್ಲಿ ಫೇಲ್ ಆದ ಒಬ್ಬ ಹುಡುಗ ಇಡೀ ಜಗತ್ತೇ ಮೆಚ್ಚುವ ಕ್ರಿಕೆಟ್ ದೇವರು ಆಗಬಲ್ಲ ಎಂದರೆ, ಆ ಸೋಲು ಬದುಕಿನ ಅಂತ್ಯ ಹೇಗಾದೀತು? ಹೌದು,ಸಚಿನ್ ರಮೇಶ್ ತೆಂಡೂಲ್ಕರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಕುಸಿದು ಕೂರಲಿಲ್ಲ. ಅವರು ತಮ್ಮ ಬ್ಯಾಟನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಕ್ರಿಕೆಟ್ ಮೈದಾನದಲ್ಲಿ ಇತಿಹಾಸ ಬರೆದರು.
ಇಂದು ಕಾಲ ಬದಲಾಗಿದೆ. ಕೇವಲ ಪುಸ್ತಕದ ವಿಷಯಗಳಿಗಿಂತ ಪ್ರಾಯೋಗಿಕ ಸಾಧನೆಗೆ ಬೆಲೆಯಿದೆ. ಸಚಿನ್ ಅವರಂತೆ ನಟ ಅಕ್ಷಯ್ ಕುಮಾರ್ ಅಥವಾ ಹಾಲಿವುಡ್‌ನ ದಿಗ್ಗಜರು ಶೈಕ್ಷಣಿಕ ಹಿನ್ನಡೆಯನ್ನೂ ಮೆಟ್ಟಿ ನಿಂತವರು. ಇವರೆಲ್ಲರೂ ನಮಗೆ ಕಲಿಸುವ ಪಾಠವೊಂದೇ: ಒಂದು ಕಾಗದದ ತುಂಡು ನಿಮ್ಮ ವ್ಯಕ್ತಿತ್ವವನ್ನು ಅಳೆಯಲಾರದು.
ವಿದ್ಯಾರ್ಥಿಗಳೇ,ಪ್ರತಿಭೆ ಎಂಬುದು ಕೇವಲ ಅಂಕ ಅಥವಾ ರಾಂಕ್ಗಳಲ್ಲಿ ಅಡಗಿಲ್ಲ. ನಿಮ್ಮಲ್ಲಿ ಅಡಗಿರುವ ವಿಶೇಷ ಕೌಶಲವನ್ನು ಗುರುತಿಸಿ. ಸಚಿನ್ ಮೈದಾನದಲ್ಲಿ ಶೂನ್ಯಕ್ಕೆ ಔಟ್ ಆದಾಗ ಆಟ ಬಿಡಲಿಲ್ಲ, ಬದಲಾಗಿ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಲು ಸಜ್ಜಾದರು. ಈ ಬಾರಿಯ ಪರೀಕ್ಷೆಯ ಹಿನ್ನಡೆ ನಿಮ್ಮ ಕಲಿಕೆಯ ಮೊದಲ ಹೆಜ್ಜೆ ಎಂದು ಭಾವಿಸಿ.
ಸೋಲನ್ನು ಸೋಲಿಸುವ ಛಲ ನಿಮ್ಮಲ್ಲಿರಲಿ. ಪರಿಶ್ರಮವಿದ್ದರೆ, ಇಂದು ನಿಮ್ಮ ಅಂಕಪಟ್ಟಿ ನೋಡಿ ಹೀಯಾಳಿಸುವ ಜಗತ್ತೇ ನಾಳೆ ನಿಮ್ಮ ಸಾಧನೆ ನೋಡಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತದೆ. ಎದ್ದೇಳಿ, ಸಚಿನ್ ತೆಂಡೂಲ್ಕರ್ ಅವರಂತೆ ನಿಮ್ಮ ಬದುಕಿನ ಮೈದಾನದಲ್ಲಿ ನೀವು ಮಾಸ್ಟರ್ ಬ್ಲಾಸ್ಟರ್ ಆಗಿ ಮಿಂಚುವ ಕಾಲ ದೂರವಿಲ್ಲ!

ಡಾ.ಸುಧಾಕರ.ಜಿ. ಲಕ್ಕವಳ್ಳಿ.



