- ಬೆಂಗಳೂರು ಟ್ರಾಫಿಕ್‌ಗೆ ಹೊಸ ಪರಿಹಾರ
ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾಸಗಿ ಕಂಪನಿಗಳು ಹೊಸ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿವೆ. ಇದೇ ಭಾಗವಾಗಿ ಬಯೋಕಾನ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ವಿಶೇಷ ಯೋಜನೆ ಘೋಷಿಸಿದೆ.
ನಗರದ ಟ್ರಾಫಿಕ್ ಒತ್ತಡ ಕಡಿಮೆ ಮಾಡಲು ಹಾಗೂ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ನೆರವಾಗುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆ ಬಳಸುವಂತೆ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ವಾರದಲ್ಲಿ ಕನಿಷ್ಠ ಎರಡು ದಿನ ಮೆಟ್ರೋ, ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸುವ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ಪ್ರೋತ್ಸಾಹಧನ ನೀಡಲು ತೀರ್ಮಾನಿಸಿದೆ.
ಮೊದಲ ಹಂತದಲ್ಲಿ ಸಾವಿರ ಉದ್ಯೋಗಿಗಳಿಗೆ ಪ್ರತಿ ತಿಂಗಳು ₹2,000 ಮೌಲ್ಯದ ಮೆಟ್ರೋ ಪಾಸ್ ಅಥವಾ ಇನ್ಸೆಂಟಿವ್ ನೀಡಲು ಬಯೋಕಾನ್ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯ ಸ್ಥೆಕಿರಣ್ ಮಜುಂದಾರ್-ಶಾ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಮೆಟ್ರೋ ಆರಂಭವಾದರೆ ಆ ಭಾಗದ ಟ್ರಾಫಿಕ್ ಒತ್ತಡ ಕಡಿಮೆಯಾಗಲಿದೆ. ನಮ್ಮ ಸಂಸ್ಥೆಯ ಈ ಕ್ರಮವನ್ನು ನೋಡಿ ಇತರ ಐಟಿ-ಬಿಟಿ ಕಂಪನಿಗಳೂ ಇಂತಹ ಯೋಜನೆಗಳನ್ನು ಜಾರಿಗೆ ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೇರಿತು, ಸ್ವಂತ ವಾಹನದಲ್ಲಿ ಕಚೇರಿಗೆ ಬರುವವರಿಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಕ್ರಮವೂ ಕೆಲವು ಕಂಪನಿಗಳಲ್ಲಿ ಜಾರಿಯಲ್ಲಿದೆ. ಇದರಿಂದ ಅನೇಕ ಉದ್ಯೋಗಿಗಳು ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಅದೇ ರೀತಿ, ಒಂದೇ ಪ್ರದೇಶದಿಂದ ಬರುವ ಸಿಬ್ಬಂದಿ ಕಾರ್ ಪೂಲಿಂಗ್ ಮೂಲಕ ಪ್ರಯಾಣಿಸಲು ಕೂಡ ಉತ್ತೇಜನ ನೀಡಲಾಗುತ್ತಿದೆ.
ಬಯೋಕಾನ್ ಸಂಸ್ಥೆಯ ಈ ಹೊಸ ಯೋಜನೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾದರಿಯಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.



