ಇಂದಿನ ಕಾಲದಲ್ಲಿ ಹೆಚ್ಚಿನ ಹಣ ಅಥವಾ ಆಡಂಬರದ ಜೀವನವೇ ಶ್ರೇಷ್ಠ ಎಂದು ಅನೇಕರು ಭಾವಿಸುತ್ತಾರೆ. ಆದರೆ,ಒಬ್ಬ ವ್ಯಕ್ತಿಯ ನಿಜವಾದ ಸೌಂದರ್ಯ ಇರುವುದು ಆತನ ಬಟ್ಟೆಯಲ್ಲಲ್ಲ,ಬದಲಿಗೆ ಆತನ ನಡೆ-ನುಡಿಯ ಸರಳತೆ ಯಲ್ಲಿ. ಸರಳವಾಗಿರುವುದು ಎಂದರೆ ಅದು ನಮ್ಮ ಸಂಸ್ಕಾರದ ಗುರುತು. ಅಂತಹ ವ್ಯಕ್ತಿಗಳು ಯಾರಿಗೂ ಹೊರೆಯಾಗದೆ ಎಲ್ಲರಿಗೂ ಆಪ್ತರಾಗುತ್ತಾರೆ.
ಸರಳತೆಗೆ ಉದಾಹರಣೆ ಎಂದರೆ ಅಣ್ಣಾವ್ರು.ಚಿತ್ರೀಕರಣದ ಸಮಯದಲ್ಲಿ ಅವರಿಗೆ ದೊಡ್ಡ ಹೋಟೆಲ್‌ಗಳಿಂದ ಊಟ ತರಿಸುವ ವ್ಯವಸ್ಥೆ ಇರುತ್ತಿತ್ತು. ಆದರೆ,ಅವರು ಅದನ್ನು ನಿರಾಕರಿಸುತ್ತಿದ್ದರು.ಅಲ್ಲಿನ ಸಾಮಾನ್ಯ ಕೆಲಸಗಾರರಿಗೆ ಯಾವ ಅನ್ನ-ಸಾರು ಇರುತ್ತಿತ್ತೋ,ಅದನ್ನೇ ತಮಗೂ ನೀಡುವಂತೆ ಹೇಳುತ್ತಿದ್ದರು. ಎಲ್ಲರ ಜೊತೆ ಮಣ್ಣಿನ ನೆಲದ ಮೇಲೆ ಕುಳಿತು ಹರಟುತ್ತಾ ಊಟ ಮಾಡುತ್ತಿದ್ದರು.ನಾವೆಲ್ಲರೂ ಒಂದೇಎನ್ನುವ ಅವರ ಈ ಗುಣವೇ ಅವರನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಡಾ.ರಾಜಕುಮಾರ್ ಇವರನ್ನು ದೇವತಾ ಮನುಷ್ಯನನ್ನಾಗಿ ಮಾಡಿತು.
ಗೆಳೆಯರೇ,ಜೀವನದಲ್ಲಿ ನೀವು ಎಷ್ಟೇ ದೊಡ್ಡ ಸಾಧನೆ ಮಾಡಿ,ಎಷ್ಟೇ ಹಣ ಗಳಿಸಿ,ಆದರೆ ನಿಮ್ಮಲ್ಲಿರುವ ವಿನಯ ಮತ್ತು ಸರಳತೆಯನ್ನು ಮಾತ್ರ ಬಿಡಬೇಡಿ.ಅಹಂಕಾರ ಮನುಷ್ಯನನ್ನು ದೂರ ಮಾಡುತ್ತದೆ, ಆದರೆ ಸರಳತೆ ಎಲ್ಲರನ್ನೂ ಹತ್ತಿರ ತರುತ್ತದೆ.ಅಸಾಮಾನ್ಯವಾಗಿ ಬೆಳೆದು ಸಾಮಾನ್ಯರಂತೆ ಬದುಕುವುದು ಶ್ರೇಷ್ಠ ವ್ಯಕ್ತಿತ್ವದ ಲಕ್ಷಣ.ನಿಮ್ಮ ಈ ಸರಳತೆಯೇ ನಿಮ್ಮ ಬದುಕಿನ ಸುಗಂಧವಾಗಲಿ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.



