ಕಲಬುರಗಿ: ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡು ಒಂದು ತಿಂಗಳಾಗಿದೆ. ರಾಜ್ಯದ ಜನರ ಸೇವೆಗೆ ಅವಕಾಶ ಕೇಳಿ ಹೆಜ್ಜೆ ಇಡುತ್ತಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಲಬುರಗಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಬರಗಾಲ ಪರಿಸ್ಥಿತಿ, ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತು ಮಹತ್ವದ ಘೋಷಣೆಗಳನ್ನು ಮಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಗೆ ಸರ್ಕಾರ ₹5,000 ಕೋಟಿ ಅನುದಾನ ನೀಡುತ್ತಿರುವುದಾಗಿ ಘೋಷಿಸಿದರು.
ಈ ಅನುದಾನದಿಂದ ಮೂಲಸೌಕರ್ಯ, ಉದ್ಯೋಗ, ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
37 ತಾಲೂಕುಗಳಲ್ಲಿ ಕೊರತೆ:
ಸಿಎಂ ಡಿಕೆ ಶಿವಕುಮಾರ್ ಅವರ ಪ್ರಕಾರ, ರಾಜ್ಯದ 37 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ದಾಖಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬರಗಾಲದ ಲಕ್ಷಣಗಳು ಕಾಣಿಸುತ್ತಿದ್ದು, ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ.
ಅಧಿಕಾರಿಗಳಿಗೆ ಈ ಕೆಳಗಿನ ವಿಷಯಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ, ರೈತರಿಗೆ ಮೇವು ಪೂರೈಕೆ, ಬಿತ್ತನೆ ಬೀಜ ವಿತರಣೆ, ರಸಗೊಬ್ಬರ ಲಭ್ಯತೆ, ವಿದ್ಯುತ್ ಸಮಸ್ಯೆಗಳ ತ್ವರಿತ ಪರಿಹಾರ ನೀಡಲು ಸೂಚಿಸಲಾಗಿದೆ.
ಜಲ್ ಜೀವನ್ ಮಿಷನ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿಂದಿನ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ವಿಳಂಬವಾದ ಕಾರಣ ಕಾಮಗಾರಿಗಳು ನಿಧಾನಗೊಂಡಿದ್ದವು ಎಂದು ಸಿಎಂ ತಿಳಿಸಿದರು.
ಬರ ಪರಿಸ್ಥಿತಿಯ ಅಧ್ಯಯನ
ಬೀದರ್ ಹಾಗೂ ಬಸವಕಲ್ಯಾಣದಿಂದಲೇ ಬರ ಪರಿಸ್ಥಿತಿಯ ಅಧ್ಯಯನ ಆರಂಭಿಸಿರುವುದಾಗಿ ತಿಳಿಸಿದ ಸಿಎಂ, ಮುಂದಿನ ದಿನಗಳಲ್ಲಿ ಬೆಳಗಾವಿ ಸೇರಿದಂತೆ ವಿಭಾಗ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸುವುದಾಗಿ ಹೇಳಿದರು.
ಉದ್ಯೋಗ ಸೇತುವೆ:
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ‘ಉದ್ಯೋಗ ಸೇತುವೆ’ ಎಂಬ ಹೊಸ ಯೋಜನೆಯನ್ನು ಕಲಬುರಗಿಯಿಂದಲೇ ಘೋಷಿಸಿದರು. ದೊಡ್ಡ ನಗರಗಳ ಬದಲಾಗಿ ಟಿಯರ್-2 ಮತ್ತು ಟಿಯರ್-3 ನಗರಗಳಲ್ಲಿ ಕೈಗಾರಿಕೆಗಳು ಬರಲು ಕಡಿಮೆ ದರದಲ್ಲಿ ಭೂಮಿ ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು. ಇದರಿಂದ, ಗ್ರಾಮೀಣ ಯುವಕರಿಗೆ ಉದ್ಯೋಗ, ಕೈಗಾರಿಕಾ ಹೂಡಿಕೆ ಹೆಚ್ಚಳ, ಸ್ಥಳೀಯ ಆರ್ಥಿಕತೆ ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ಇದನ್ನು ಓದಿ –ವಯನಾಡಿನಲ್ಲಿ ಭೂಕುಸಿತ : ಇಬ್ಬರು ಕಾರ್ಮಿಕರು ಮೃತ್ಯು
ಎಸ್ ಐ ಆರ್ ರಾಜಕೀಯ ಹಸ್ತಕ್ಷೇಪವಿಲ್ಲ :
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಮನೆ ಮನೆಗೆ ಬಿಎಲ್ಒಗಳು ತೆರಳಿ ಪರಿಷ್ಕರಣೆ ನಡೆಸಬೇಕು. ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.








