ಮಂಡ್ಯ: ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಜಲಾಶಯದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಜಲಾಶಯಕ್ಕೆ ಪ್ರಸ್ತುತ 7,531 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಿನ್ನೆ ಇದೇ ವೇಳೆಗೆ ದಾಖಲಾಗಿದ್ದ 5,734 ಕ್ಯೂಸೆಕ್ಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಈ ಬೆಳವಣಿಗೆ ಕಾವೇರಿ ನೀರನ್ನು ಅವಲಂಬಿಸಿರುವ ರೈತರಲ್ಲಿ ಆಶಾಭಾವನೆ ಮೂಡಿಸಿದೆ.
124.80 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ 81.55 ಅಡಿ ನೀರಿನ ಮಟ್ಟ ದಾಖಲಾಗಿದೆ. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 12.485 ಟಿಎಂಸಿ ನೀರು ಸಂಗ್ರಹವಾಗಿದೆ.ಇದನ್ನು ಓದಿ –ಬರಗಾಲ ನಿರ್ವಹಣೆಗೆ ತುರ್ತು ಕ್ರಮ: ‘ಉದ್ಯೋಗ ಸೇತುವೆ’ – ಸಿಎಂ ಘೋಷಣೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








