ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆ ಚುರುಕುಗೊಂಡಿದ್ದು, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಜುಲೈ 8ರ ಬಳಿಕ ಮಳೆಯ ತೀವ್ರತೆ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ದಾಖಲಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಬಿಡುಗಡೆ ಮಾಡಿದ ವರದಿ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು ಅತ್ಯಧಿಕ ಮಳೆ ದಾಖಲಿಸಿರುವ ಪ್ರದೇಶವಾಗಿದೆ. ಅಂಕೋಲಾ ಪಟ್ಟಣದಲ್ಲಿ 275 ಮಿ.ಮೀ ಮಳೆಯಾಗಿದ್ದು, ವಂದಿಗೆ ಗ್ರಾಮದಲ್ಲಿ 270.5 ಮಿ.ಮೀ ಮತ್ತು ಅಲಗೇರಿಯಲ್ಲಿ 266.5 ಮಿ.ಮೀ ಮಳೆಯಾಗಿದೆ. ಭಾವಿಕೇರಿಯಲ್ಲಿ 259 ಮಿ.ಮೀ ಹಾಗೂ ಬೆಲಸೆಯಲ್ಲಿ 244 ಮಿ.ಮೀ ಮಳೆ ಸುರಿದಿದೆ.
ಕಾರವಾರ ತಾಲ್ಲೂಕಿನ ಕದ್ರಾ ಪ್ರದೇಶದಲ್ಲಿ 238 ಮಿ.ಮೀ ಮಳೆಯಾಗಿದ್ದು, ಅಂಕೋಲಾ ತಾಲ್ಲೂಕಿನ ಬೆಳಂಬಾರಿನಲ್ಲಿ 238 ಮಿ.ಮೀ ಹಾಗೂ ಬೊಬ್ರವಾಡದಲ್ಲಿ 235.5 ಮಿ.ಮೀ ಮಳೆಯಾಗಿದೆ. ಕುಮಟಾ ತಾಲ್ಲೂಕಿನ ಹನೇಹಳ್ಳಿಯಲ್ಲಿ 231 ಮಿ.ಮೀ, ಅಂಕೋಲಾದ ಹಟ್ಟಿಕೇರಿಯಲ್ಲಿ 225.5 ಮಿ.ಮೀ, ಶೆಟಗೇರಿಯಲ್ಲಿ 216.5 ಮಿ.ಮೀ ಹಾಗೂ ಕುಮಟಾ ತಾಲ್ಲೂಕಿನ ನಡುಮಸಕೇರಿಯಲ್ಲಿ 204.5 ಮಿ.ಮೀ ಮಳೆ ದಾಖಲಾಗಿದೆ.ಇದನ್ನು ಓದಿ –₹72 ಕೋಟಿ ಅಕ್ರಮ ಪ್ರಕರಣ: KRDL ಎಂಜಿನಿಯರ್ ಬಂಧನ
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.







