ಸೂರ್ಯ ತನ್ನ ಪ್ರಖರತೆಯನ್ನು ಪ್ರದರ್ಶಿಸುತ್ತಿದ್ದಾನೆ. ಬಿಸಿಲಿನ ಝಳ ದಿನ ದಿನಕ್ಕೆ ಹೆಚ್ಚುತ್ತಲೇ ಇದೆ. ಬಿಸಿಲ ತಾಪ ಜೋರಾಗಿದ್ದಾಗ ತಣ್ಣಗೆ, ಬಾಯಿಗೆ ಹಿತ ಎನ್ನಿಸುವ ಜ್ಯೂಸ್ ಸಿಕ್ಕರೆ ಎಷ್ಟು ಚೆನ್ನ ಅಂದುಕೊಳ್ಳುತ್ತೇವೆ. ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಕುಡಿದರೆ ಅದರಲ್ಲಿರುವ ಆನಂದವೇ ಬೇರೆ. ಕೆಲ ಪಾನೀಯಗಳು ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿವೆ. ಅಂತಹ ಪಾನೀಯಗಳ ವಿವರ ಹಾಗೂ ತಯಾರಿಸುವ ವಿಧಾನ ಇಲ್ಲಿದೆ.
- ಆಮ್ ಪನ್ನಾ
ಇದು ಭಾರತದ ವಿಶಿಷ್ಟ ಬೇಸಿಗೆ ಪಾನೀಯವಾಗಿದ್ದು, ಇದನ್ನು ಹಸಿ ಮಾವಿನಿಂದ ತಯಾರಿಸಲಾಗುತ್ತದೆ. ಹಸಿ ಮಾವು ಶಾಖ-ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದ್ದು ಅದು ದೇಹವನ್ನು ಶಾಖದ ಒತ್ತಡ ಮತ್ತು ಶಾಖದ ಹೊಡೆತದಿಂದ ರಕ್ಷಿಸುತ್ತದೆ. ಕಚ್ಚಾ ಮಾವಿನ ಹುಳಿಯನ್ನು ಸಕ್ಕರೆ ಮತ್ತು ಪುದೀನದೊಂದಿಗೆ ಬೆರೆಸಿದಾಗ, ಆಮ್ ಪನ್ನಾಕ್ಕೆ ತುಟಿಗೆ ಮುದ ನೀಡುವ ಪರಿಮಳವನ್ನು ನೀಡುತ್ತದೆ.

- ಲಾವಂಚದ ಪಾನೀಯ
ಎಂಟರಿಂದ ಹತ್ತು ಲಾವಂಚದ ಬೇರುಗಳನ್ನು ಚೆನ್ನಾಗಿ ತೊಳೆದು ಅರ್ಧ ಲೀಟರ್ ನೀರಿನಲ್ಲಿ ಎರಡು ಗಂಟೆ ನೆನೆಸಬೇಕು. ಆ ನೀರನ್ನು ಶೋಧಿಸಿ. ಅದಕ್ಕೆ ಅರ್ಧಕಪ್ ಬೆಲ್ಲ, ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಬೇಕು. ಲಾವಂಚ ಪಾನೀಯ ಸಿದ್ದ. ಇದು ದೇಹಕ್ಕೆ ತಂಪು ನೀಡುವ ಜೊತೆಗೆ, ರಕ್ತಶುದ್ದಿ ಮಾಡುತ್ತದೆ.
- ಪುದೀನ ಜ್ಯೂಸ್
ಐದಾರು ಪುದೀನ ಎಲೆಗಳನ್ನು ಸ್ವಚ್ಛವಾಗಿ ತೊಳೆದು, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ, ಬೆಲ್ಲ ಬೆರೆಸಬೇಕು. ಜೊತೆಗೆ ಚಿಟಿಕೆ ಏಲಕ್ಕಿ ಪುಡಿ ಬೆರೆಸಿದರೆ, ಇನ್ನೂ ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಪಾನೀಯ ಸೇವಿಸಿದರೆ, ಅಜೀರ್ಣ, ಎದೆಯುರಿಯಂತಹವು ಬಾಧಿಸುವುದಿಲ್ಲ.

- ದಾಸವಾಳ ಹೂವಿನ ಷರಬತ್
ಐದು ಅಥವಾ ಆರು ದಾಸವಾಳದ ಹೂವುಗಳನ್ನು ರುಬ್ಬಿ ರಸ ತೆಗೆದು ಅದಕ್ಕೆ ನೀರು, ಬೆಲ್ಲ ಬೆರೆಸಿದರೆ ಷರಬತ್ತು ರೆಡಿ.
ಮತ್ತೊಂದು ವಿಧಾನದಲ್ಲಿ ಷರಬತ್ತು : ಒಂದು ಲೋಟ ಸಕ್ಕರೆಗೆ ನೀರು ಬೆರೆಸಿ, ಸಕ್ಕರೆ ಪಾಕ ತಯಾರಿಸಿಟ್ಟುಕೊಳ್ಳಿ. ಅದಕ್ಕೆ ಒಂದು ಬಟ್ಟಲು ದಾಸವಾಳದ ಹೂವಿನ ರಸ ಬೆರೆಸಿ. ಅದನ್ನು ಒಲೆಯ ಮೇಲಿಟ್ಟು ನೀರಿನಂಶ ಹೋಗುವವರೆಗೂ ಕಾಯಿಸಿ. ನಂತರ ಇಳಿಸಿ, ಶೋಧಿಸಿ. ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಿ. ನಿಮಗೆ ಬೇಕೆನಿಸಿದಾಗ ಎರಡು ಚಮಚ ರಸಕ್ಕೆ ಒಂದು ಲೋಟ ನೀರು ಬೆರೆಸಿ ಕುಡಿಯಬಹುದು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಅತಿಥಿಗಳ ಸತ್ಕಾರಕ್ಕೆ ಇದೇ ಪಾನೀಯ ಬಳಸುತ್ತಾರೆ.
- ಕಬ್ಬಿನ ರಸ
ಬೇಸಿಗೆಯಲ್ಲಿ ಕಬ್ಬಿನ ರಸವು ದೇಹವನ್ನು ತಂಪಾಗಿಡಲು ಅತ್ಯುತ್ತಮವಾದ ಪಾನೀಯವಾಗಿದೆ. ಆದಾಗ್ಯೂ, ಪುದೀನ, ಶುಂಠಿ ಮತ್ತು ನಿಂಬೆಯೊಂದಿಗೆ ಬೆರೆಸಿದಾಗ, ಅದು ದಿನವಿಡೀ ಚೈತನ್ಯಶೀಲವಾಗಿರುತ್ತದೆ. ಹೊಸದಾಗಿ ಪುಡಿಮಾಡಿದ ಕಬ್ಬಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ತಂಪಾಗಿಸುವ ಗುಣಗಳಿವೆ.
- ಮೆಂತ್ಯೆ ಬೆಲ್ಲ ನೀರು
ಬೇಸಿಗೆಗೆ ಹೇಳಿ ಮಾಡಿಸಿದ ಜ್ಯೂಸ್ ಇದು. ಸುಮಾರು ಒಂದೆರಡು ಗಂಟೆ ನೆನೆಸಿದ ಮೆಂತ್ಯೆಯನ್ನು ನುಣ್ಣಗೆ ರುಬ್ಬಬೇಕು. ಇದಕ್ಕೆ ಬೆಲ್ಲ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಕುಡಿಯಬಹುದು. ಇದು ದೇಹಕ್ಕೆ ತಂಪು. ಇದನ್ನು ಮಾಡಿದ ಕೂಡಲೇ ಕುಡಿಬೇಕು. ರುಬ್ಬಿದಾಗ ಗಟ್ಟಿ ಇರುತ್ತದೆ. ನೀರು ಬೆರೆಸಿ ಮೇಲೆ ಕೆಳಗೆ ಎತ್ತಿಹಿಡಿದಾಗ ನೀರಾಗುತ್ತದೆ. ಸ್ವಲ್ಪ ಹೊತ್ತು ಹಾಗೇ ಇಟ್ಟರೆ ಮತ್ತೆ ಗಟ್ಟಿ ಆಗುತ್ತದೆ. ಹಾಗಾಗಿ ತಕ್ಷಣ ಕುಡಿಯುವುದು ಸೂಕ್ತ.

- ತೆಂಗಿನ ನೀರು
ಎಳನೀರು ದೇಹಕ್ಕೆ ಬಹಳ ಒಳ್ಳೆಯದು. ಎಳನೀರು ಕುಡಿದರೆ ದೇಹವು ತಂಪಾಗಿರುತ್ತದೆ. ಅಷ್ಟೇ ಅಲ್ಲ ಎಳನೀರಿನ ಗಂಜಿ ಕೂಡ ಆರೋಗ್ಯಕರ ಗುಣ ಲಕ್ಷಣಗಳನ್ನು ಹೊಂದಿದ್ದು ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಎಳನೀರನ್ನು ಕುಡಿಯುವುದರಿಂದ ರಕ್ತ ಸಂಚಲನ ಸುಲಭವಾಗಿ ಆಗುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ದೇಹಕ್ಕೆ ಕಬ್ಬಿಣಾಂಶವನ್ನು ಕೂಡ ಒದಗಿಸುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಳನೀರನ್ನು ಸೇವಿಸಿದರೆ ದೇಹವು ತಂಪಾಗಿರುತ್ತದೆ.

8. ಬಾರ್ಲಿ ನೀರು
ಒಳ್ಳೆಯ ಆರೋಗ್ಯಕ್ಕೆ ಬಾರ್ಲಿ ನೀರು ತುಂಬಾ ಒಳ್ಳೆಯ ಪಾನೀಯವಾಗಿದೆ. 1 ಕಪ್ ಬಾರ್ಲಿಯನ್ನು 3 ಕಪ್ ನೀರಿಗೆ ಸೇರಿಸಿ 20 ನಿಮಿಷಗಳ ಕಾಲ ಕುದಿಸಿದರೆ ಬಾರ್ಲಿ ನೀರು ಸಿದ್ಧ. ರುಚಿಯನ್ನು ಹೆಚ್ಚಿಸಲು ನಿಂಬೆ ರಸ, ಜೇನುತುಪ್ಪವನ್ನು ಸೇರಿಸಬಹುದು. ಅಥವಾ ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ. ಬಳಿಕ ಈ ಬೇಸಿಗೆಯಲ್ಲಿ ಆಗಾಗ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಹೊರತಾಗಿ, ಉಪ್ಪು ಜೊತೆಗೆ ಕಾಲು ಲೋಟ ಮಜ್ಜಿಗೆಯನ್ನು ಬೆರೆಸಿ ಕುಡಿಯಬಹುದು. ಬಾರ್ಲಿಯಲ್ಲಿ ಯಥೇಚ್ಛವಾದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಅಡಗಿವೆ.

ಸೌಮ್ಯ ಸನತ್








