: ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ
ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆಯ ಅಂಗವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು.
ಪುನೀತ್ ಅವರ ಸಮಾಧಿಯ ಬಳಿ ಪತ್ನಿ ಅಶ್ವಿನಿ, ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ದಂಪತಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಭಾಗವಹಿಸಿ ಪೂಜೆ ನೆರವೇರಿಸಿದರು. ಈ ವೇಳೆ ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಸಮಾಧಿಯ ಬಳಿ ಇಟ್ಟು ಪೂಜೆ ಕೈಗೊಳ್ಳಲಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳು “ಅಪ್ಪು ಅಪ್ಪು” ಎಂದು ಜೈಕಾರ ಹಾಕುತ್ತಾ ಕಂಠೀರವ ಸ್ಟುಡಿಯೋದಲ್ಲಿ ಭಾವಪೂರ್ಣವಾಗಿ ಭಾಗವಹಿಸಿದರು. ಹಲವರು ಕೈಯಲ್ಲಿ ಬಿಳಿ ರೋಸ್ ಹಿಡಿದು ಅಪ್ಪುಗೆ ಗೌರವ ಸಲ್ಲಿಸಿದರು. ಯುವ ರಾಜ್‌ಕುಮಾರ್‌ರನ್ನು ಕಂಡ ಅಭಿಮಾನಿಗಳು “ಜೂನಿಯರ್ ಪವರ್ ಸ್ಟಾರ್” ಎಂದು ಘೋಷಣೆ ಕೂಗಿದರು.
ಪುನೀತ್ ಅವರ ಸಮಾಧಿಗೆ ಬಿಳಿ ಮತ್ತು ಗುಲಾಬಿ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಕುಟುಂಬದವರು ಬಳಿಕ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದರು.ಇದನ್ನು ಓದಿ –ಕಸಾಪ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯತ್ರಿ ಅಧಿಕಾರ ಸ್ವೀಕಾರ : ಜೋಷಿಗೆ ಮುಖಭಂಗ
ಈ ಸಂದರ್ಭ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನಸಂತರ್ಪಣೆ, ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ಆಯೋಜಿಸಿದ್ದು, ದಿನವಿಡೀ ಪುನೀತ್ ಸ್ಮರಣಾರ್ಥ ಕಾರ್ಯಗಳು ನಡೆಯುತ್ತಿವೆ.








