ನಮ್ಮ ನಡುವಿನ ಬಹುತೇಕರ ಒಂದು ಕಾಮನ್ ಅಪ್ರೋಚ್ ಏನು ಗೊತ್ತಾ..?
ನೀವು ಯಾರಿಗಾದರೂ ಯಾವುದೇ ವಿಚಾರಕ್ಕೆ ಸುಲಭಕ್ಕೆ ಸಿಗುವಂತಿದ್ದರೆ, ಒಬ್ಬರು ಕೇಳಿದ ತಕ್ಷಣ ಹಿಂದೆ ಮುಂದೆ ಯೋಚಿಸದೇ ಸಹಾಯ ಮಾಡುವವರಾಗಿದ್ದರೆ, ಒಬ್ಬರ ಫೋನ್ ಕಾಲ್ ಬಂದ ಕೂಡಲೇ ಅದನ್ನು ಕೂಡಲೇ ರಿಸೀವ್ ಮಾಡುವಂತಿದ್ದರೆ, ಮತ್ತೊಬ್ಬರು ಯಾಚಿಸಿದ ಕೆಲಸವನ್ನು ಅದೆಷ್ಟೇ ಕಷ್ಟವಾಗಿರಲೀ ಅದನ್ನು ತೀರ ಸುಲಭ ಕಾಣಿಸುವಂತೆ ಮಾಡಿಕೊಟ್ಟರೆ, ಯಾರಾದರೂ ಅವರಾಗಿಯೇ ಎಂದೂ ಕರೆ ಮಾಡದೇ ಇದ್ದರೂ ನೀವಾಗಿಯೇ ಪದೇ ಪದೇ ಅವರಿಗೆ ಆತ್ಮೀಯವಾಗಿ ಮಾತನಾಡಲು ಬಯಸಿ ಫೋನ್ ಮಾಡುತ್ತಿದ್ದರೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಅಪ್ರೋಚ್ ನಲ್ಲಿ ನೀವು ತುಂಬಾ ಸರಳ ಮತ್ತು ವಿನೀತರಾಗಿ ಎಲ್ಲರ ಕೈಗೂ ” ಈಸೀ ಅಕ್ಸೆಸ್ಸೆಬಲ್ ” ಎನ್ನುವಂತಿದ್ದರೆ, ನಿಮ್ಮಲ್ಲಿ ಹಣ, ವಿದ್ಯೆ , ಅಧಿಕಾರ ಎಲ್ಲವೂ ಇದ್ದೂ ಏನೂ ಡೌಲು ಮಾಡದಂತೆ, ಏನೂ ಬಿಲ್ಡಪ್ ಕೊಡದಂತೆ ಸಮಾಜದ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರೆ, ಯಾವುದೇ ಕಾರ್ಯಕ್ರಮಕ್ಕೆ ಅಥವಾ ಸಮಾರಂಭಕ್ಕೆ ಆಹ್ವಾನಿಸಿದ ತಕ್ಷಣ ಏನೊಂದೂ ಯೋಚಿಸದೇ ಒಳ್ಳೆಯ ಮನಸಿನಿಂದ ತಪ್ಪದೇ ಅಟೆಂಡ್ ಆಗುತ್ತಿದ್ದರೆ, ಒಬ್ಬರಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಗೌರವ ಕೊಡುವ ಸ್ವಭಾವ ನಿಮ್ಮದಾಗಿದ್ದರೆ, ಮತ್ತೊಬ್ಬರು ನಿಮ್ಮನ್ನು ಹೇಗೆ ಟ್ರೀಟ್ ಮಾಡಿದರೂ ” ಪರವಾಗಿಲ್ಲ ಚಲ್ತಾಹೈ ಕಣ್ರೀ ” ಎಂಬ ಮನಃಸ್ಥಿತಿ ನಿರ್ಮಾಣವಾಗಲು ಕಾರಣರಾಗುವಂತೆ ನಿಮ್ಮ ಸ್ವಭಾವವಿದ್ದರೆ….., ಒಟ್ಟಾರೆಯಾಗಿ ಇತರರಿಗೆ ನೀವು ಯಾವ ವಿಷಯಕ್ಕಾಗಲೀ ಸಹಾಯಕ್ಕಾಗಲೀ ಸುಲಭಕ್ಕೆ ಸಿಗಬಹುದಾದ “ಟೇಕನ್ ಫ಼ಾರ್ ಗ್ರಾಂಟೆಡ್ ” ಸ್ಟಫ಼್ ಅಂತ ಅನಿಸಿದ್ದೇ ಆದರೆ….
ಊಫ಼್……ಬರೆದಿಟ್ಟುಕೊಳ್ಳಿ….ಸಾಮಾನ್ಯವಾಗಿ ಈ ಸಮಾಜ ನಿಮ್ಮನ್ನು ನಿಮ್ಮ ಅರ್ಹತೆಗೆ ತಕ್ಕಂತೆ ನಡೆಸಿಕೊಳ್ಳುವುದಿಲ್ಲ ಎಂದೇ ಅರ್ಥ…! ಅಷ್ಟೇ ಅಲ್ಲ, ಜನ ನಿಮ್ಮನ್ನು ಸುಲಭಕ್ಕೆ ಟ್ರೀಟ್ ಮಾಡಲು ನಿಮ್ಮೊಳಗಿನ ಪಾಸಿಟಿವ್ ಆಗಿ ಕಾಣಿಸಲ್ಪಟ್ಟರೂ , ಅಸಲಿಗೆ ನೆಗೆಟೀವ್ ಆಗಿ ಕಾಡುವ ಈ ರೀತಿಯ ಅಂಶಗಳೇ ಕಾರಣವಾದರೂ ಅಚ್ಚರಿಯೇನಿಲ್ಲ .!
ಈ ಥರಾ ಹೇಳೋದೇ ಒಂಥರಾ ನೆಗೆಟೀವ್ ಆಗಿ ಕಾಣುತ್ತಲ್ಲಾ ಎಂದು ಅಚ್ಚರಿಯೆನಿಸುತ್ತದೆಯಲ್ಲವೇ..?
ಒಮ್ಮೊಮ್ಮೆ ಈ ಸಮಾಜ ಯಾಕೆ ಹೀಗೆ ಎಂದನಿಸುತ್ತದೆಯಾದರೂ ಪ್ರಾಕ್ಟಿಕಲ್ಲಾಗಿ ಇದು ನೈಜತೆಗೆ ಹತ್ತಿರ.
ಹಾಗೇ ಸುಮ್ಮನೇ ನೋಡಿ .! ಬಹಳಷ್ಟು ಸಂದರ್ಭಗಳಲ್ಲಿ ಸಪೋಸ್ ನಿಮ್ಮ ಆತ್ಮೀಯರಿಗೋ ಅಥವಾ ತೀರ ಪರಿಚಿತರಿಗೋ ಮಾತನಾಡುವ ಆಸೆಯಿಂದ ನೀವಾಗಿಯೇ ಆಗಾಗ್ಗೆ ಫೋನ್ ಕರೆ ಮಾಡುತ್ತಲೇ ಇದ್ದರೆ ಒಂದು ಹಂತದ ನಂತರ ನಿಮ್ಮ ಕರೆ ಬಂದಾಕ್ಷಣ ಬಿಜ಼ಿ ಟೋನ್ ಗೆ ಹಾಕಿಬಿಡುತ್ತಾರೆ ಇಲ್ಲವೇ ಯಾವುದೋ ಕಾರಣ ಹೇಳಿ ಅವಾಯ್ಡ್ ಮಾಡುತ್ತಾರಲ್ಲವೇ.? ಏಕೆಂದರೆ ಅವರ ದೃಷ್ಟಿಯಿಂದ ನಿಮ್ಮದು ಅನಪೇಕ್ಷಿತ ಕರೆ, ನಿಮ್ಮೊಂದಿಗೆ ಮಾತನಾಡುವುದು ಟೈಮ್ ವೇಸ್ಟು. ಈ ಮನೋಭಾವಕ್ಕೆ ಕಾರಣ, ಅವರ ದೃಷ್ಟಿಯಿಂದ ನೀವು ” ಟೇಕನ್ ಫ಼ಾರ್ ಗ್ರಾಂಟೆಡ್ .!
ಅದೇ ಅವರ ಬಗ್ಗೆ ಕೇರೇ ಇಲ್ಲದ ಆದರೆ ಅಪರೂಪದ ಅಥವಾ ವ್ಯವಹಾರಿಕ ಫೋನ್ ಕರೆಗಳನ್ನು ನಿದ್ದೆಯಲ್ಲಾದರೂ ರಿಸೀವ್ ಮಾಡಿ ಮಾತನಾಡುತ್ತಾರೆ. ಆ ಮಾತು ಬೇರೆ !
ಹಾಗೆಯೇ ಸಹಾಯ ಅಂತ ಕೇಳಿ ಯಾರಾದರೂ ನಿಮ್ಮನ್ನು ಅಪ್ರೋಚ್ ಮಾಡಿದಾಗ ಅವರ ಕಷ್ಟಕ್ಕೆ ನೆರವಾಗಿ ಅವರಿಗೆ ತೀರ ಸುಲಭವಾಗಿ ಸಹಾಯ ಮಾಡಿ ನೋಡಿ. ! ಹಾಗೆ ಸಹಾಯ ಪಡೆದ ಬಹುತೇಕರಿಗೆ ನಿಮ್ಮ ಬೆಲೆ ಹಾಗೂ ಸಹಾಯದ ಮೌಲ್ಯ ಎರಡೂ ಅರ್ಥವಾಗದು. ವಿಪರ್ಯಾಸವೆಂದರೆ ಯಾರು ಸಹಾಯ ಮಾಡಿರುವುದಿಲ್ಲವೋ ಅಥವಾ ಮಾಡಿದರೂ ಅತ್ತೂ ಕರೆದು ಕಾಡಿಸಿ ಹೆಲ್ಪ್ ಮಾಡಿರುತ್ತಾರೋ ಅಂಥವರಿಗೆ ಸ್ವಲ್ಪ ಭಯ ಭಕ್ತಿಯನ್ನಾದರೂ ಇವರು ತೋರಿಸುತ್ತಾರೆ.
ಇನ್ನೂ ಸಿಂಪಲ್ ಆದ ಉದಾಹರಣೆ ಮೂಲಕ ಇದನ್ನು ಬಿಡಿಸುವುದಾದರೆ, ನಿಮ್ಮ ಆತ್ಮೀಯರಿಗೋ ಸ್ನೇಹಿತರಿಗೋ ನೀವು ನೀವಾಗಿಯೇ ನಿತ್ಯವೂ ಕಳಿಸುವ ಮೆಸೇಜಿಗೆ ಅಲ್ಲಿಂದ ಉತ್ತರವಾಗಲೀ ಅಥವಾ ಆಗಾಗ್ಗೆ ನೀವು ಪ್ರೀತಿಯಿಂದ ಮಾಡುವ ಕರೆಗಳಿಗೆ ತಕ್ಷಣದ ಸ್ಪಂದನೆಯಾಗಲೀ ಸಿಗಲಿಲ್ಲವೆಂದರೆ ಅರ್ಥ, ನೀವು ಅವರ ಪಾಲಿಗೆ ಟೇಕನ್ ಫ಼ಾರ್ ಗ್ರಾಂಟೆಡ್ ನಂತೆ ಅಮುಖ್ಯ ಎಂದೇ ! ಅಥವಾ ನಿಮಗೆ ಉತ್ತರಿಸಿದರೂ ಬಿಟ್ಟರೂ ಚಲ್ತಾ ಹೈ ಎಂಬಂತೆ ನಿಮ್ಮನ್ನು ಆದ್ಯತೆಯಲ್ಲದ ಸಂಪರ್ಕದಂತೆ ಟ್ರೀಟ್ ಮಾಡಲಾಗಿರುತ್ತೆ.
ನೀವು ಉದ್ಯೋಗ ಮಾಡುವ ಸ್ಥಳದಲ್ಲಿ, ಕಚೇರಿಗಳಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಅಥವಾ ಸಬಾರ್ಡಿನೇಟ್ಸ್ ಜೊತೆಗೆ ನಿಮ್ಮ ಪೊಸಿಷನ್ನನ್ನೂ ಮರೆತು ಸಿಕ್ಕಾಪಟ್ಟೆ ಸಲಿಗೆಯಿಂದ ಫ಼್ರೆಂಡ್ಲಿಯಾಗಿ ಇದ್ದಲ್ಲಿ ಅವರು ನಿಮ್ಮನ್ನು ಟ್ರೀಟ್ ಮಾಡುವ ರೀತಿಗೂ, ಅದೇ ಒಂದು ವೃತ್ತಿಪರ ಅಂತರವನ್ನು ಕಾಪಾಡಿಕೊಂಡಿದ್ದಾಗ ಅವರು ಕೊಡುವ ಗೌರವಕ್ಕೂ ಸಾಕಷ್ಟು ವ್ಯತ್ಯಾಸವಂತೂ ಇದ್ದೇ ಇದೆ. ಇಲ್ಲಿಯೂ ಅತ್ತಕಡೆಯ ” ಟೇಕನ್‌ಫ಼ಾರ್ ಗ್ರಾಂಟೆಡ್” ಮನೋಭಾವ ಕೆಲಸ ಮಾಡಿರುತ್ತೆ. ಎಮೋಷನಲ್ ಜಾಸ್ತಿ ಇರುವವರಿಗೆ ಇವೆರಡರ ಸೂಕ್ಷ್ಮತೆ ಅರಿಯುವುದು ಸ್ವಲ್ಪ ಕಷ್ಟವೇ.!
ಹೀಗೇ ನಿತ್ಯಬದುಕಿನ ಹತ್ತಾರು ಉದಾಹರಣೆ ಕೊಡಬಹುದಾದರೂ ನೀವು ಒಬ್ಬರ ಫೋನ್ ಕರೆಗೆ, ಕೆಲಸಕ್ಕೆ, ಸಹಾಯಕ್ಕೆ ತೀರ ಸುಲಭಕ್ಕೆ ಸಿಗುವಂತಿದ್ದರೆ ಎಲ್ಲೋ ಒಂದು ಕಡೆ ನಿಮ್ಮ ವ್ಯಕ್ತಿತ್ವವನ್ನು ಬಹಳ ಸುಲಭಕ್ಕೆ ಅಳೆದುಬಿಡುವ ಅಪಾಯವೂ ಉಂಟು.
ಹಾಗಂತ ಜೀವನದಲ್ಲಿ ಸರಳವಾಗಿರದೇ, ಅನಗತ್ಯ ಬಿಲ್ಡಪ್ ಕೊಟ್ಟುಕೊಂಡು ನಕರಾ ಮಾಡುತ್ತಲೇ ಇರಬೇಕೇ…? ಏನೂ ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿರುವಂತೆ ಪೋಸು ಕೊಡಬೇಕೇ ? ಎಂಬೆಲ್ಲಾ ಸಹಜ ಡೌಟುಗಳಿದ್ದರೆ ಅದಕ್ಕೆ ಸಿಂಪಲ್ ಉತ್ತರ ” ಇದು ನಿಮ್ಮ ಜೀವನ, ನೀವು ಹೇಗೆ ಬೇಕಾದರೂ ನಿಮಗಿಷ್ಟವಾದ ರೀತಿಯಲ್ಲಿ ಇರಬಹುದು. ಆದರೆ ಮತ್ತೊಬ್ಬರ ಪಾಲಿಗೆ ನೀವು ” ಟೇಕನ್ ಫ಼ಾರ್ ಗ್ರಾಂಟೆಡ್” ಥರಾ ಆಗದಿದ್ದರೇ, ಅಷ್ಟೇ ಸಾಕು..!
ಆಯ್ತು ! ಒಬ್ಬರು ನಮ್ಮನ್ನು ಟೇಕನ್ ಫ಼ಾರ್ ಗ್ರಾಂಟೆಡ್ ಅಂತ ಅಂದುಕೊಂಡರೆ ಏನು ಪ್ರಾಬ್ಲಮ್ಮು, ಅಂದಿರಾ..? ಕುಟುಂಬದ ಒಳಗಾಗಲೀ ಅಥವಾ ಹೊರಗಾಗಲೀ ಒಮ್ಮೆ ನಿಮ್ಮನ್ನು ಹಾಗೆ ಟ್ರೀಟ್ ಮಾಡಲು ಶುರು ಮಾಡಿದಾಗ ನಿಮ್ಮ ಮನಸ್ಸು ನಿಧಾನಕ್ಕೆ ಮತ್ತೊಬ್ಬರ ವರ್ತನೆ ಬಗೆಗೆ ಕೆರೆದು ಗಾಯ ಮಾಡಿಕೊಳ್ಳಲು ಶುರುಮಾಡುತ್ತೆ. ” ಒಬ್ಬ ವ್ಯಕ್ತಿ ತಾನು ಏನೊಂದೂ ಮಾಡದಿದ್ದರೂ ಅವನಲ್ಲಿ ಯಾವ ಅರ್ಹತೆ ಇರದಿದ್ದರೂ ಅಂಥವನನ್ನು ಓವರ್ ಬಿಲ್ಡಪ್ ಕೊಟ್ಟು ಮೆರೆಸುವ ಈ ಸಮಾಜ, ತಾನು ಮತ್ತೊಬ್ಬರಿಗಾಗಿ ಅಷ್ಟೆಲ್ಲಾ ಕೆಲಸ ಮಾಡಿದರೂ, ಎಲ್ಲರಿಗೂ ಬೇಕಾದವಂತೆ ಇದ್ದರೂ ತನ್ನ ಕೊಡುಗೆಯನ್ನು ನಿಕೃಷ್ಠವಾಗಿಸಿ ಕಡೆಗಣಿಸುತ್ತದೆಯಲ್ಲಾ…ಎಂಬ ಸಣ್ಣಕೊರಗು ಮನದಲ್ಲಿ ತಣ್ಣಗೆ ಟಿಸಿಲೊಡೆಯ ಲಾರಂಭಿಸುತ್ತದೆ. ಅದಷ್ಟೇ ಅಲ್ಲ, ನಿಮ್ಮಲ್ಲಿರಬಹುದಾದ ಒಳ್ಳೆಯತನವನ್ನು ಸರಳತೆಯನ್ನು ಅಥವಾ ಇತರರಿಗೆ ಹೆಚ್ಚು ಗೌರವಕೊಟ್ಟು ಮಾತನಾಡಿಸುವ ಸ್ವಭಾವವನ್ನೇ ದೌರ್ಬಲ್ಯ ಎಂದು ವರ್ಗೀಕರಿಸಿಬಿಡುವ ಅಪಾಯವನ್ನೂ ಎಸುರಿಸಬೇಕಾಗಬಹುದು.!
ಒಂದೇ ಮಾತಿನಲ್ಲಿ ಸಮ್‌ಅಪ್ ಮಾಡುವುದಾದರೆ ನಮ್ಮ ಜೀವನದಲ್ಲಿನ ಸರಳತೆ , ಸೌಮ್ಯತೆ ಅಥವಾ ಒಳ್ಳೆಯತನವೆಂಬುದು ಮತ್ತೊಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗದಂತೆ ನೋಡಿಕೊಳ್ಳುವ ಸೂಕ್ಷ್ಮತೆ ನಮ್ಮೊಳಗೆ ಜಾಗೃತವಾಗಿದ್ದಷ್ಟೂ ಒಳ್ಳೆಯದು.
ಬಹಳಷ್ಟು ಸಾರಿ ಇತರರು ನಿಮ್ಮಲ್ಲಿರುವ ಅಗಾಧವಾದ ತಾಳ್ಮೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿಬಿಡುತ್ತಾರೆ, ಪ್ರಾಮಾಣಿಕತೆಯನ್ನೇ ಪೆಕ್ಯೂಲಿಯರ್ ಅಂದುಬಿಡುತ್ತಾರೆ. ಹಾಗೆಯೇ ಇತರರ ಕಷ್ಟಕ್ಕೆ ಅಥವಾ ಯಾಚನೆಗೆ ಸುಲಭಕ್ಕೆ ಸಿಗಬಹುದಾದ ನಿಮ್ಮ ಅಂತರಂಗದ ದಯಾಳು ಸ್ವಭಾವವನ್ನೇ ಗಾಂಧಿಗಿರಿಗೆ ಹೋಲಿಸಿ ತೀರ ತುಚ್ಛೀಕರಿಸಿ ಅಥವಾ ಯೂಸ್ ಲೆಸ್ ಎಂದು ಭಾವಿಸುವುದೂ ಉಂಟು.
ಇದು ಎಲ್ಲರ ವಿಷಯದಲ್ಲೂ ಹೀಗೇ ಆಗಬಹುದು ಎಂದೇನಲ್ಲ. ಆದರೆ ಬಹುತೇಕರ ಅನುಭವಗಳು ಹೆಚ್ಚು ಕಡಿಮೆ ಇದೇ ಟ್ರ್ಯಾಕಿನಲ್ಲೇ ಸ್ಪರ್ಧೆ ಮಾಡುತ್ತಲೇ ಇರುತ್ತವೆ.
ಮೇಲಾಗಿ ಇಲ್ಲಿ ನಾನು ಬೇಕಂತಲೇ ಒಬ್ಬರ ಸಹಾಯ ನೆನೆದು ಕೃತಜ್ಞತೆ ಹೇಳುವ ಉತ್ತಮ ವರ್ಗವನ್ನು ಹೊರಗಿಟ್ಟು ಈ ಮಾತುಗಳನ್ನು ಹೇಳುತ್ತಿದ್ದೇನೆ.
ಎಲ್ಲಿಯವರೆಗೆ ನಮಗೆ ಇಷ್ಟವಿರಲೀ ಬಿಡಲೀ , ಇತರರೊಂದಿಗೆ ಅಗತ್ಯ ಸ್ನೇಹ ವಿಶ್ವಾಸಗಳನ್ನು ಉಳಿಸಿಕೊಂಡೂ ನಮ್ಮದೇ ಆದ ಒಂದು ವೃತ್ತಿಪರ, ಖಾಸಗಿತನದ ಗೌರವಯುತ ಅಂತರವನ್ನು ಕಾಪಿಟ್ಟುಕೊಳ್ಳುವುದಿಲ್ಲವೋ ಆಗೆಲ್ಲಾ ಬಹು ಜನರ ದೃಷ್ಟಿಯಿಂದ ನಾವು ಟೇಕನ್ ಫ಼ಾರ್ ಗ್ರಾಂಟೇಡ್ ಆದಂತೆಯೇ..! !

ಹಿರಿಯೂರು ಪ್ರಕಾಶ್.








