ಬಿಲ್ವಪತ್ರೆ… ಇದು ಮಹಾಶಿವನಿಗೆ ಅತ್ಯಂತ ಪ್ರಿಯವಾದ ಎಲೆ. ಶಿವನನ್ನು ಮೆಚ್ಚಿಸಲು ಭಕ್ತರು ಅರ್ಪಿಸುವ ಅತಿ ಪವಿತ್ರವಾದ ಎಲೆ. ಯಾವ ಪೂಜೆ ಪುನಸ್ಕಾರ ಇಲ್ಲದಿದ್ದರೂ ಸರಿ ಬಿಲ್ವಪತ್ರೆ ಎಲೆವನ್ನು ಅರ್ಪಿಸಿದರೆ ಪರಮಾತ್ಮನು ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಈ ಎಲೆ ಕೇವಲ ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಬಿಲ್ವಪತ್ರೆ ವಿಟಮಿನ್ ಎ, ಬಿ1, ಬಿ2, ಸಿ, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಯ ರಸವನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
- ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ. ಇದರ ಬೇರು, ಎಲೆಗಳು, ತೊಗಟೆ, ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ.
- ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ ಹಾಗೂ ಹೃದಯಕ್ಕೆ ಒಳ್ಳೆಯದು. ಇದು ಹಸಿವು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗೆ ಮದ್ದಾಗಿ ಬಳಕೆಯಾಗುತ್ತಿದೆ. ತಿರುಳಿನಿಂದ ತೆಗೆದ ತೈಲವು ವಾತನಿವಾರಕವಾಗಿದೆ.
- ಬಾಯಿಯಲ್ಲಿ ಹುಣ್ಣಾಗಿದ್ದಾಗ ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಒಂದು ಬಾರಿ ಸೇವಿಸಬೇಕು. ಅಜೀರ್ಣ ಸಮಸ್ಯೆಯಿಂದ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆಯಿಂದ ವಾಂತಿ ಆಗುತ್ತಿದ್ದರೆ ಎರಡು ಚಮಚೆ ಬಿಲ್ವಪತ್ರೆ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನದಲ್ಲಿ ೨-೩ ಬಾರಿ ನೆಕ್ಕಬೇಕು. ಬಿಲ್ವ ಫಲದ ಸಿಪ್ಪೆಯನ್ನು ಅರೆದು ಜೀನುತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ ವಾಕರಿಕೆ ನಿಲ್ಲುತ್ತದೆ.
- ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಲೇಪ ಹಚ್ಚಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.
- ಗಾಯ,ಹುಣ್ಣು : ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಲೇಪ ಹಚ್ಚಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.
- ನೋವು, ಬಾವು, ಊತ : ಕಾಲು ಅಥವಾ ದೇಹದ ಬೇರಾವುದೇ ಭಾಗದಲ್ಲಿ ಊತ ಇದ್ದಾಗ ಬಿಲ್ವಪತ್ರೆ ರಸಕ್ಕೆ ಕಾಳುಮೆಣಸು ಪುಡಿ ಸೇರಿಸಿ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಮೈಕೈ ನೋವು ಸಮಸ್ಯೆಯಿಂದ ಬಳಲುತ್ತಿರುವವರು ಬಿಲ್ವಪತ್ರೆ ಎಲೆ, ಬೇವಿನ ಎಲೆ ಮತ್ತು ಹರಳು ಗಿಡದ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ ಆ ನೀರನ್ನು ಸ್ನಾನದ ನೀರಿಗೆ ಮಿಶ್ರ ಮಾಡಿ ಪ್ರತಿ ದಿನ ಸ್ನಾನ ಮಾಡಬೇಕು. ಬಿಲ್ವದ ತಿರುಳಿಗೆ ಸಾಸಿವೆ ಎಣ್ಣೆ ಸೇರಿಸಿ ಕಲೆಸಿ ಬಿಸಿ ಮಾಡಿ ಊತ, ಬಾವು ಇರುವಲ್ಲಿ ಇಟ್ಟರೆ ಪ್ರಯೋಜನವಾಗುತ್ತದೆ.
- ಯಾವುದೇ ಬಗೆಯ ಜ್ವರವಿದ್ದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಆಗಾಗ ಕಾಡುವ ಜ್ವರದಿಂದ ಬಳಲುತ್ತಿರುವವರು ಬಿಲ್ವದ ತೊಗಟೆಯ ಕಷಾಯವನ್ನು ದಿನದಲ್ಲಿ ಮೂರು ಬಾರಿ ನಾಲ್ಕು ಚಮಚೆಯಂತೆ ಒಂದು ವಾರದವರೆಗೆ ಸೇವಿಸಬೇಕು. ಮಲೇರಿಯಾ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮಾಡಿ ಕುಡಿಯುತ್ತಿರಬೇಕು. ಮಧ್ಯಭಾರತದ ಬಸ್ತಾರ್‌ನ ಆದಿವಾಸಿಗಳು ಜ್ವರದ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮದ್ದಾಗಿ ಬಳಸುತ್ತಾರೆ. ಸಾಮಾನ್ಯ ಬಗೆಯ ಜ್ವರಗಳಲ್ಲಿ ಬಿಲ್ವದ ಬೇರಿನ ಕಷಾಯವನ್ನು ಕೊತ್ತಂಬರಿ ಪುಡಿಯೊಡನೆ ಸೇವಿಸುತ್ತಿದ್ದರೆ ಪ್ರಯೋಜನವಾಗುತ್ತದೆ.
- ಚರ್ಮದ ದುರ್ಗಂಧವನ್ನು ಹೋಗಲಾಡಿಸಲು ಬಿಲ್ವಪತ್ರೆ ಬಳಕೆಯಾಗುತ್ತದೆ. ತಾಜಾ ಬಿಲ್ವಪತ್ರೆಯನ್ನು ತಂದು ಅದರ ರಸವನ್ನು ಮೈಗೆ ಲೇಪಿಸಿಕೊಂಡು ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಯಲ್ಲಿನ ದುರ್ಗಂಧ ಕಡಿಮೆಯಾಗುತ್ತದೆ.
- ಅದೇ ರೀತಿ ಚರ್ಮದ ಮೇಲೆ ಕುರುಗಳಾಗಿದ್ದರೆ ಬಿಲ್ವಪತ್ರೆ ಬೇರನ್ನು ಲಿಂಬೆರಸದಲ್ಲಿ ತೇಯ್ದು ಲೇಪಿಸಿದರೆ ಒಂದೆರಡು ದಿನಗಳಲ್ಲಿ ಕುರು ಒಣಗುತ್ತದೆ.
- ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಸೇವಿಸಿದರೆ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.
- ಅಸ್ತಮಾ ಇರುವವರು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಬಿಲ್ವಪತ್ರೆ ಎಲೆಯನ್ನು ಒಂದೆರಡು ಕಾಳುಮೆಣಸಿನೊಂದಿಗೆ ಸೇರಿಸಿ ಜಗಿಯಿರಿ. ಇದರಿಂದ ದೇಹ ಬೆಚ್ಚಗಾಗಿ ಶೀತದಿಂದ ಹಿಂಸೆ ಆಗುವುದು ತಪ್ಪುತ್ತದೆ.
- ಹಸಿವಾಗದೇ ಇರುವ ಸಮಸ್ಯೆಗಳಿದ್ದರೂ ಈ ಬಿಲ್ವಪತ್ರೆ ಸರಿಮಾಡುತ್ತದೆ. ಪ್ರತಿದಿನ ಬೆಳಗ್ಗೆ ಬಿಲ್ವಪತ್ರೆ ಎಲೆಗಳನ್ನು ಜಗಿದರೆ ಹಸಿವೆಯಾಗದ ಸಮಸ್ಯೆಗಳಿದ್ದರೆ ಸರಿಹೋಗುತ್ತದೆ. ಆದ್ದರಿಂದ ಪ್ರತಿದಿನ ಆದಷ್ಟು ಬಿಲ್ವಪತ್ರೆಯ ಬಳಕೆಯಿರಲಿ ಆರೋಗ್ಯಕ್ಕೆ ಒಳ್ಳೆಯದು.
- ಬಿಲ್ವಪತ್ರೆ ಸೊಪ್ಪನ್ನು ಅರೆದು ತಲೆಗೆ ಲೇಪಿಸಿದರೆ ತಲೆಹೊಟ್ಟೆ ಕಡಿಮೆಯಾಗುತ್ತದೆ. ವಾರಕ್ಕೊಮ್ಮೆ ಇದನ್ನು ಹೇರ್ ಮಾಸ್ಕ್ ರೀತಿಯಲ್ಲಿ ಬಳಸಬಹುದಾಗಿದೆ.
- ಬಿಲ್ವಪತ್ರೆಯ ಕಾಯಿಯನ್ನು ಬೇಯಿಸಿ ಅದರ ತಿರುಳನ್ನು ತೆಗೆದು ಅದನ್ನು ತಲೆಗೆ ಲೇಪಿಸಿಕೊಂಡು ಅರ್ಧ ಗಂಟೆಯ ನಂತರ ತೊಳೆಯಿರಿ ವಾರಕ್ಕೊಮ್ಮೆ ಅಥವಾ ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
- ಬಿಲ್ವಪತ್ರೆ ಎಲೆಗಳನ್ನು ಒಣಗಿಸಿ ಚೂರ್ಣದಂತೆ ಮಾಡಿಕೊಂಡು ನೀರಿಗೆ ಹಾಕಿ ಕುದಿಸಿಕೊಂಡು ಕುಡಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದಿನದಲ್ಲಿ 2 ರಿಂದ 3 ಬಾರಿ ಕುಡಿದರೆ ಸಾಕಾಗುತ್ತದೆ.
- ಬಿಲ್ವ ಪತ್ರೆಯ ರಸವನ್ನು ಪ್ರತಿದಿನ 2-3 ಚಮಚ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ. ಅಷ್ಟೇ ಅಲ್ಲದೆ ಅಜೀರ್ಣ, ವಾಂತಿ ಆದಾಗಲೂ ಬಿಲ್ವಪತ್ರೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
- ಮಲಸಂಬಂಧಿ ಸಮಸ್ಯೆಗಳಿದ್ದರೆ ಬಿಲ್ವಪತ್ರೆಯ ಹಣ್ಣಿನ ತಿರುಳು, ಎಳ್ಳುನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಬೆಣ್ಣೆ ಅಥವಾ ತುಪ್ಪ ಸೇರಿಸಿ ಸೇವಿಸಿ ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
- ನಿದ್ರಾಹೀನತೆಯನ್ನು ಅನುಭವಿಸುತ್ತಿರುವವರು ಬಿಲ್ವಪತ್ರದ ಎಲೆಯನ್ನು ಚೆನ್ನಾಗಿ ಅರೆದು ಹಣೆಗೆ ಹಚ್ಚಿದರೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಬಿಲ್ವಪತ್ರೆ ದೇಹದ ಉಷ್ಣತೆಯನ್ನೂ ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯನ್ನು ನೀರು ಸೇರಿಸದೆ ಅರೆದು ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.
- ವೈಜ್ಞಾನಿಕವಾಗಿ ನಡೆಸಿದ ಪ್ರಯೋಗಗಳಿಂದ ಬಿಲ್ವದ ಹಣ್ಣಿನ ತಿರುಳು ನಮ್ಮ ಅನ್ನನಾಳದಲ್ಲಿರುವ ಪರೋಪ ಜೀವಿಗಳನ್ನು ನಾಶಪಡಿಸುವುದು ತಿಳಿದುಬಂದಿದೆ. ಅತಿಸಾರ, ಅನಿಯಮಿತ ಭೇದಿ ಮತ್ತು ಹೊಟ್ಟೆ ನೋವನ್ನು ನಿವಾರಿಸುವುದು ಸಹ ತಿಳಿದುಬಂದಿದೆ.

ಸೌಮ್ಯ ಸನತ್.








