ಮೈಸೂರು: “ನಗರದ ಹಲವೆಡೆ ಬಾಂಬ್ ಇಟ್ಟಿದ್ದೇವೆ” ಎಂಬ ಆತಂಕಕಾರಿ ಇ-ಮೇಲ್‌ನೊಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದು, ಈ ಬಗ್ಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇ-ಮೇಲ್‌ನಲ್ಲಿ ಅನಾಮಧೇಯ ವ್ಯಕ್ತಿ ಹಲವು ಸ್ಥಳಗಳಲ್ಲಿ ಬಾಂಬ್ ಇಟ್ಟಿದ್ದೇನೆಂದು ಬರೆದು ಕಳಿಸಿದ್ದಾನೆ. ಈ ಸಂದೇಶದ ಕುರಿತು ತಕ್ಷಣವೇ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ಸಹಾಯದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗಂಭೀರ ತಪಾಸಣೆ ನಡೆಸಲಾಗಿದೆ. ಈ ತನಿಖೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪ್ರಾರಂಭವಾಗಿದೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, “ಇದುವರೆಗೆ ಯಾವುದೇ ಸ್ಥಳದಲ್ಲಿ ಬಾಂಬ್ ಪತ್ತೆಯಾಗಿಲ್ಲ. ಇದು ಭಯ ಹುಟ್ಟುಹಾಕುವ ನಕಲಿ ಬೆದರಿಕೆ ಎನ್ನಬಹುದು. ಲಾಡ್ಜ್‌ಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಹಾಗೂ ಹೋಟೆಲ್‌ಗಳಂತಹ ಜನಸಂಚಾರವಿರುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ – ಅಧಿಕಾರಿಗಳಲ್ಲಿ ಆತಂಕ
ಸೈಬರ್ ಪೊಲೀಸ್ ಠಾಣೆಯ ಸಹಕಾರದಿಂದ ಇ-ಮೇಲ್ ಕಳಿಸಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ. ಶೀಘ್ರದಲ್ಲಿಯೇ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.