- ಮಾರುತಿ 30,000, ಹ್ಯೂಂಡಾಯ್ 11,000 ಕಾರು ಸೇಲ್
ನವದೆಹಲಿ, ಸೆಪ್ಟೆಂಬರ್ 23: ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ದೇಶದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ನಡೆದಿದೆ. ತೆರಿಗೆ ಕಡಿತ ಜಾರಿಗೆ ಬಂದ ದಿನವೇ ಕಾರು ಖರೀದಿಗೆ ಜನರಿಂದ ಅಪಾರ ಪ್ರತಿಕ್ರಿಯೆ ದೊರಕಿದೆ.
ಸೆಪ್ಟೆಂಬರ್ 22ರಂದು ಜಾರಿಗೆ ಬಂದ ಹೊಸ ಜಿಎಸ್‌ಟಿ ಕ್ರಮದಲ್ಲಿ ಕಾರುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಕೆಯಾಯಿತು. ಇದರ ಪರಿಣಾಮವಾಗಿ ಕಾರುಗಳ ಬೆಲೆ ಲಕ್ಷಾಂತರ ರೂಪಾಯಿ ಮಟ್ಟಿಗೆ ಕಡಿಮೆಯಾಗಿದೆ.
ದೇಶದ ಅಗ್ರ ಕಾರು ತಯಾರಕ ಮಾರುತಿ ಸುಜುಕಿಯೇ ಒಂದೇ ದಿನದಲ್ಲಿ ಸುಮಾರು 30,000 ಕಾರುಗಳನ್ನು ಮಾರಾಟ ಮಾಡಿದೆ. ಹ್ಯೂಂಡಾಯ್ ಮೋಟಾರ್ಸ್ ಸಂಸ್ಥೆಯಂತೂ ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ಒಂದೇ ದಿನದ ಸೇಲ್ಸ್ ದಾಖಲಿಸಿದೆ. ಸೆಪ್ಟೆಂಬರ್ 22ರಂದು ಹ್ಯೂಂಡಾಯ್ 11,000 ಕಾರುಗಳನ್ನು ಮಾರಾಟ ಮಾಡಿದೆ.
ಮಾರುತಿ ಸುಜುಕಿಯ ಡೀಲರ್‌ಗಳು ಹೇಳುವಂತೆ, ಒಂದೇ ದಿನದಲ್ಲಿ 80,000 ಗ್ರಾಹಕರು ವಿಚಾರಣೆಗಾಗಿ ಶೋರೂಮ್‌ಗೆ ಭೇಟಿ ನೀಡಿದ್ದರು. ವಿಶೇಷವಾಗಿ ಸಣ್ಣ ಕಾರುಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.
ಆಟೊಮೊಬೈಲ್ ಡೀಲರ್‌ಗಳ ಒಕ್ಕೂಟ ಎಫ್‌ಎಡಿಎ ಪ್ರಕಾರ, ಜಿಎಸ್‌ಟಿ ಕಡಿತದಿಂದಾಗಿ ಜನರು ಶೋರೂಮ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದಾರೆ.
ಹೊಸ ಜಿಎಸ್‌ಟಿ ದರದಲ್ಲಿ 1,200 ಸಿಸಿ ಅಥವಾ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಕಾರುಗಳ ಬೆಲೆ ಹೆಚ್ಚು ಇಳಿಕೆಯಾಗಿದೆ. ಒಟ್ಟಾರೆ 30 ಲಕ್ಷ ರೂವರೆಗೂ ಕಾರುಗಳ ಬೆಲೆ ಕಡಿಮೆಯಾಗಿದ್ದು, ಕಂಪನಿಗಳು ಈ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿವೆ.








