ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಸಮಯ ಬಂದಾಗ ನಿರ್ಧರಿಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರು ಎಲ್ಲೆಡೆ ನಮ್ಮನ್ನು ಪ್ರೀತಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಜನರು ನನ್ನನ್ನು ಆಹ್ವಾನಿಸುತ್ತಿದ್ದಾರೆ. ಅದರಿಂದ ನಾನು ವಿವಿಧ ಪ್ರದೇಶಗಳಿಗೆ ತೆರಳಬೇಕಾಗುತ್ತಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದು ಹೇಳಿದರು.
“2028ರೊಳಗೆ ಪಕ್ಷವನ್ನು ಬಲಪಡಿಸಿ ಗುರಿ ಸಾಧಿಸಬೇಕು. ವಿಧಾನಸಭೆಯಲ್ಲಿ ನಮ್ಮ ಸಂಖ್ಯೆಯನ್ನು ನೋಡಿ ಕೆಲವರು ಅಪಹಾಸ್ಯ ಮಾಡಿದ್ದಾರೆ. ಆದರೆ ನಾವು ಪಕ್ಷವನ್ನು ಕಟ್ಟಿ ತೋರಿಸುತ್ತೇವೆ. ಮೈತ್ರಿಯೊಂದಿಗೆ ಸರ್ಕಾರ ರಚನೆ ನಮ್ಮ ಗುರಿ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಚುನಾವಣೆಯ ವೇಳೆಯಲ್ಲಿ ತೀರ್ಮಾನಿಸುತ್ತೇವೆ. ಹಣೆಬರಹದಲ್ಲಿ ಎಲ್ಲಿ ಬರೆದಿದೆಯೋ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ” ಎಂದು ಹೇಳಿದರು.
ಇನ್ನೂ, ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಬರಬೇಕು ಎಂಬ ಅಭಿಪ್ರಾಯ ಜನರಲ್ಲಿ ಇದೆ. ಅವರ ನಾಯಕತ್ವದಲ್ಲಿ ಜೆಡಿಎಸ್ ಮತ ಕೇಳಲಿದೆ. ಕಾಂಗ್ರೆಸ್ ಆಡಳಿತವನ್ನು ನೋಡಿ ಜನರು ಕುಮಾರಸ್ವಾಮಿ ಅವರ ಆಡಳಿತವನ್ನು ಸ್ಮರಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆದರೆ ಅಭಿವೃದ್ಧಿ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ ಎಂದು ಹೇಳಿದರು.
“ನಾವು ಮೈತ್ರಿಯಲ್ಲಿ ಇದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ನಾಯಕರು ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಅವರ ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯ ಕೇಂದ್ರ ನಾಯಕರಿಗೂ ತಿಳಿದಿದೆ” ಎಂದು ಹೇಳಿದರು.ಇದನ್ನು ಓದಿ –ಸಾಹಿತಿ, ಹಿರಿಯ ಪತ್ರಕರ್ತ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಇನ್ನಿಲ್ಲ
ಮುಂದಿನ ದಿನಗಳಲ್ಲಿ ಬಿಜೆಪಿ ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳನ್ನು ಗಮನಿಸಿ, ಮೈತ್ರಿ ರಾಜಕೀಯದಲ್ಲಿ ಮುಂದುವರಿಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.








