ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾರೆ ಎಂಬ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನು ಗುರುತಿಸಿದ ಸ್ಥಳಗಳಲ್ಲಿ ಇಂದು ಅಧಿಕೃತವಾಗಿ ಅಗೆಯುವ ಪ್ರಕ್ರಿಯೆ ಆರಂಭವಾಗಿದೆ.
ಸೋಮವಾರ, ದೂರುದಾರನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 13 ಸ್ಥಳಗಳನ್ನು ಗುರುತಿಸಿ, ಈ ಸ್ಥಳಗಳಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ಸದ್ಯಕ್ಕೆ ಅಲ್ಲಿಗೆ ಕಾರ್ಮಿಕರನ್ನು ಕರೆಯಿಸಿ, ಅಗೆಯುವ ಕಾರ್ಯಕ್ಕೆ ಚಾಲನೆ ನೀಡಿದೆ.
ಕಾರ್ಮಿಕರು ಈಗಾಗಲೇ ಹಾರೆ ಮತ್ತು ಪಿಕಾಸಿ ಉಪಕರಣಗಳೊಂದಿಗೆ ನೆಲ ತೆಗೆಯುವ ಕೆಲಸದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ನಡೆದಿದ್ದ ಏನು ?
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ದೂರುದಾರನು ಆರೋಪಿಸಿದ್ದ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ SIT ಅಧಿಕಾರಿಗಳು ಮಹಜರು ನಡೆಸಿದ್ದರು.
ಮುಖಕ್ಕೆ ಮುಸುಕು ಹಾಕಿಕೊಂಡಿದ್ದ ದೂರುದಾರನು ತೋರಿಸಿದ ಪ್ರತಿ ಸ್ಥಳದ ಜಿಪಿಎಸ್ ಗುರುತುಗಳನ್ನು ಅಧಿಕಾರಿಗಳು ದಾಖಲಿಸಿಕೊಂಡು, ಕೆಂಪು ರಿಬ್ಬನ್ ಹಾಕಿ ಗುರುತಿಸಿದ್ದಾರೆ. ಪ್ರತಿ ಸ್ಥಳಕ್ಕೂ ನಂಬರ್ ನೀಡಲಾಗಿದೆ.
ವಿಧಿವಿಜ್ಞಾನ ತಜ್ಞರು, ಭದ್ರತಾ ಸಿಬ್ಬಂದಿ ಹಾಗೂ ಸಾಕ್ಷಿ ದೂರುದಾರನೊಂದಿಗೆ ಮುಂಡಾಜೆ ಮೀಸಲು ಅರಣ್ಯದೊಳಗೆ ತಪಾಸಣೆ ನಡೆಸಿದ್ದು, ವಿಡಿಯೋ ಚಿತ್ರೀಕರಣದ ಜೊತೆಗೆ ಪಂಚನಾಮೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದಾರೆ.ಇದನ್ನು ಓದಿ –ನಾಲ್ಕು ದಿನಗಳ ಸಿಎಂ ಸಭೆ: ಶಾಸಕರಿಗೆ 50 ಕೋಟಿ ಅನುದಾನ
ಪ್ರಕರಣದ ತನಿಖೆ ಮುಂದುವರೆದಿದ್ದು, SIT ಇನ್ನಷ್ಟು ದಾಖಲಾತಿಗಳು ಹಾಗೂ ದೃಢವಾದ ಪುರಾವೆಗಳಿಗಾಗಿ ಪರಿಶೀಲನೆ ನಡೆಸುತ್ತಿದೆ.