ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚೆಗೆ ಡಿನ್ನರ್ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 16ರಂದು ಕಾಂಗ್ರೆಸ್ ಸಚಿವರು ಮತ್ತು ಶಾಸಕರಿಗಾಗಿ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಈ ಡಿನ್ನರ್ ಸಭೆಯನ್ನು ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ಒಳರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವುದು ಗಮನಾರ್ಹವಾಗಿದೆ.
ಈ ಡಿನ್ನರ್ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ ಹಾಗೂ ಒಳಮೀಸಲಾತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.ಇದನ್ನು ಓದಿ –ಹೋಟೆಲ್‌ಗಳ ಮೇಲೆ ದಾಳಿ: 46 ಅಕ್ರಮ LPG ಸಿಲಿಂಡರ್ ಜಪ್ತಿ
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಸಚಿವರು ಮತ್ತು ಶಾಸಕರಿಗಾಗಿ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು. ಅದರ ಬೆನ್ನಲ್ಲೇ ಮಾರ್ಚ್ 12ರಂದು ಸಿಎಂ ಮತ್ತು ಡಿಸಿಎಂ ಬಣಗಳಿಗೆ ಸೇರಿರುವ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.








