ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಾಮನಗರದಲ್ಲಿ ಪ್ರತ್ಯೇಕ ದಾಳಿಗಳಲ್ಲಿ 3 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ವೇಳೆ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಲಗೇಜ್‌ನಲ್ಲಿ ಸುಮಾರು 8 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆ ಹಚ್ಚಿದರು. ಇದರ ಅಂದಾಜು ಮೌಲ್ಯ 2.8 ಕೋಟಿ ರೂ. ಎಂದು ತಿಳಿದುಬಂದಿದೆ.
ಹಾಂಕಾಂಗ್‌ನಿಂದ ಬಂದ ಮತ್ತೊಬ್ಬ ಪ್ರಯಾಣಿಕನ ಬಳಿಯಿಂದ 900 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದರ ಮೌಲ್ಯ ಸುಮಾರು 31.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಇದೇ ವೇಳೆ ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ 1.5 ಕೋಟಿ ರೂ. ಮೌಲ್ಯದ 750 ಗ್ರಾಂ ಡ್ರಗ್ಸ್ ವಶಪಡಿಸಲಾಗಿದೆ. 450 ಎಂಡಿಎಂಎ ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ಸೀಜ್ ಮಾಡಲಾಗಿದೆ.ಇದನ್ನು ಓದಿ –ಐದು ಜಿಲ್ಲೆಗಳಲ್ಲಿ ಗುಡುಗು ಮಳೆ – ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಳ
ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿದ್ದು, ಬೆಂಗಳೂರಿನ ಗೋರಿಪಾಳ್ಯದ ಸಜ್ಜಿಲ್ ಪಾಷಾ ಅಲಿಯಾಸ್ ಸಲ್ಮಾನ್, ಸಾದಿಕ್ ಹಾಗೂ ಉಗಾಂಡ ಮೂಲದ ನಾನಾ ಜಾನ್ಸನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್ ತಂದು ರಾಮನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.








