ದೂರದ ಬೆಟ್ಟ ನುಣ್ಣಗೆ ಎನ್ನುವುದನ್ನು ಕೇಳಿದಾಗಲೆಲ್ಲಾ ಇದು ಗಾದೆ ಮಾತು ಎನ್ನುವುದಷ್ಟೇ ತಲೆಗೆ ಬರುತ್ತದೆ. ಆದರೆ ಮತ್ತೆ ಯೋಚಿಸಿದಾಗ ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ ಮಾತು ಕೂಡ ನೆನಪಿಗೆ ಬರುತ್ತದೆ. ನಮ್ಮ ನಮ್ಮ ಅನುಭವಕ್ಕೆ ಬರುವ ತನಕ ಇಂತಹ ಗಾದೆ ಮಾತುಗಳ ಆಳ ನಮಗೆ ತಿಳಿಯುವುದೇ ಇಲ್ಲ. ನಿಜಕ್ಕೂ ದೂರದಿಂದ ನೋಡುವಾಗ ಎಷ್ಟು ನುಣುಪಾಗಿ ಕಾಣುವ ಬೆಟ್ಟ ಹತ್ತಿರ ಹೋದಾಗ ಕಡಿದಾಗಿ ಕಲ್ಲು ಮಣ್ಣು ಮುಳ್ಳು ಕುರುಕಲು ಗಿಡ ಮರಗಳ ಆಗರವಾಗಿರುವುದನ್ನು ನೋಡುತ್ತೇವೆ. ಗಾದೆಯಲ್ಲಿ ಬೆಟ್ಟ ಎಂದು ಹೇಳಿದರೂ ಅದು ಬದುಕಿನ ಅನೇಕ ವಿಷಯಗಳನ್ನು ಒಳಗೊಳ್ಳುತ್ತದೆ.
ಚಲನಚಿತ್ರಗಳಲ್ಲಿ ನಟಿಸುವವರ ಬದುಕು ಅಷ್ಟೇ ರಮ್ಯವಾಗಿ, ಮನೋಹರವಾಗಿ, ಬಣ್ಣ ಬಣ್ಣದ್ದಾಗಿರುತ್ತದೆ ಎಂದು ಭಾವಿಸುತ್ತೇವೆ. ಆದರೆ ಪರದೆಯ ಹಿಂದಿನ ಕಷ್ಟ ಸುಖ, ನೋವು ನಲಿವುಗಳು ನಮಗೆ ಕಾಣುವುದಿಲ್ಲ. ಸಿರಿವಂತರಾಗಿ ಕಾಣುವವರು ಬಾಡಿಗೆ ಮನೆಯಲ್ಲಿ ವಾಸವಿದ್ದು ಎಷ್ಟೋ ಬಾರಿ ಊಟಕ್ಕೂ ಪರದಾಡುತ್ತಾ ಇದ್ದ ಕಥೆಗಳನ್ನು ಕೇಳಿದ್ದೇವೆ.
ಸಿನಿಮಾರಂಗಕ್ಕೆ ಮಾತ್ರವಲ್ಲದೆ ಇದು ಸಂಗೀತಗಾರರು, ನೃತ್ಯಗಾರರು, ಚಿತ್ರ ಕಲಾವಿದರು, ಕ್ರೀಡಾಳುಗಳು ಎಲ್ಲರಿಗೂ ಅನ್ವಯಿಸುತ್ತದೆ.
ನಾನು ಈ ಸುದ್ದಿಯನ್ನು ಈಗೇಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚಿಗೆ ನಮ್ಮ ಬ್ಯಾಂಕಿನಲ್ಲಿ ಒಂದು ದಿನದ ತರಬೇತಿಯೊಂದನ್ನು ಕೊಟ್ಟರು. ಹೋಗುವಾಗ ಬಸ್ಸಿನಲ್ಲಿ ನನ್ನದೇ ಬ್ಯಾಂಕಿನ ಬೇರೆ ಶಾಖೆಯ ಸಹೋದ್ಯೋಗಿ ಒಬ್ಬರು ಜೊತೆಯಾದರು. ಇಬ್ಬರೂ ಬಸ್ಸಿನಲ್ಲಿ ಮಾತನಾಡುತ್ತಾ ಹೋದೆವು.
ಬ್ಯಾಂಕರ್ ಡೈರಿ ಕೇವಲ ಗ್ರಾಹಕರು ಮತ್ತು ಸಿಬ್ಬಂದಿಯ ನಡುವೆ ಮಾತ್ರವೇ ಆದ ಅನುಭವ ಎಂದೇನಿಲ್ಲ. ಇಬ್ಬರು ಸಹೋದ್ಯೋಗಿಗಳ ನಡುವೆ ಆದ ಅನುಭವವನ್ನು ಕೂಡ ನಾನು ಬ್ಯಾಂಕರ್ಸ್ಡೈ ರಿಯಲ್ಲಿ ದಾಖಲಿಸಬಾರದೇಕೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನನ್ನ ಸಹೋದ್ಯೋಗಿಯ ಮಗಳು ಕಶ್ವಿ ಸುನಿಲ್ ಟೆನಿಸ್ ಆಟದಲ್ಲಿ ಪ್ರಾವೀಣ್ಯತೆ ಪಡೆದಿದ್ದಾಳೆ. ತಾಯಿ ನಮ್ಮ ಬ್ಯಾಂಕಿನಲ್ಲಿ ಉದ್ಯೋಗಿ. ತಂದೆ ಖಾಸಗಿ ಉದ್ಯೋಗದಲ್ಲಿದ್ದು ಮಗಳಿಗಾಗಿ ಅದನ್ನು ತೊರೆದು ಮೆಡಿಕಲ್ ಸ್ಟೋರ್ಸ್ ನಡೆಸುತ್ತಿದ್ದಾರೆ.
ತಮ್ಮದೇ ಮೆಡಿಕಲ್ ಸ್ಟೋರ್ ಆದ್ದರಿಂದ ಯಾವಾಗ ಬೇಕಾದರೂ ತೆಗೆಯಬಹುದು, ಯಾವಾಗ ಬೇಕಾದರೂ ಮುಚ್ಚಬಹುದು. ತಾಯಿಗೆ ಸದಾ ಸದಾ ಬ್ಯಾಂಕಿನಲ್ಲಿ ರಜೆ ಸಿಗುವುದಿಲ್ಲವಾದ್ದರಿಂದ ಮಗಳು ಆಟಕ್ಕೆ ಎಂದು ಹೋಗುವಾಗ ತಂದೆಯೇ ಅವಳ ಜೊತೆಯಲ್ಲಿ ಹೋಗುವುದು.
ತಾನು ಓದುವ ಹೈಸ್ಕೂಲು, ಕಾಲೇಜು, ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸ್ಪರ್ಧೆ – ಹೀಗೆ ಅನೇಕ ಕಡೆಗಳಲ್ಲಿ ಆ ಮಗು ಸದಾ ಹೋಗುತ್ತಲೇ ಇರಬೇಕಾಗುತ್ತದೆ.
ತಮ್ಮ ದುಡಿಮೆಯಲ್ಲಿ ಮಗುವನ್ನು ಹೇಗೋ ಒಳ್ಳೆಯ ಕೋಚಿಂಗ್ಗೆ ಸೇರಿಸಿ ರಾಜ್ಯಮಟ್ಟದ ಸ್ಪರ್ಧೆಗಳಿಗೆಂದು ಬೇರೆ ರಾಜ್ಯಗಳಿಗೂ ಕರೆದುಕೊಂಡು ಹೋಗುತ್ತಿದ್ದಾರೆ. ಒಂದು ಟೂರ್ನಮೆಂಟ್ಎಂ ದರೆ ಹೋಗಿ ಬರುವ ಖರ್ಚು ಊಟ ವಸತಿ ಎಲ್ಲವೂ ಸಾಕಷ್ಟು ಹಣ ವ್ಯಯವಾಗುತ್ತದೆ. ಆ ಹುಡುಗಿ ಟೆನಿಸ್ ಆಟದಲ್ಲಿ ಒಳ್ಳೆಯ ರಾಂಕ್ ಪಡೆದಿದ್ದಾಳೆ.




ಒಮ್ಮೆ ರಾಜ್ಯಮಟ್ಟದ ಪುರಸ್ಕಾರವೊಂದರಲ್ಲಿ ಸಾಹಿತ್ಯ ಪ್ರಶಸ್ತಿಗಾಗಿ ನಾನೂ, ಕ್ರೀಡಾ ಪ್ರಶಸ್ತಿಗಾಗಿ ಕಶ್ವಿಯೂ ಒಂದೇ ವೇದಿಕೆ ಹಂಚಿಕೊಂಡಿದ್ದೆವು. ಅಂದೇ ನನಗೆ ಈಕೆ ನನ್ನ ಸಹೋದ್ಯೋಗಿಯ ಮಗಳು ಮತ್ತು ಇಷ್ಟು ಪ್ರತಿಭಾನ್ವಿತೆ ಎಂದು ತಿಳಿದಿದ್ದು.
ರಾಜ್ಯಮಟ್ಟದಲ್ಲೂ ರಾಷ್ಟ್ರಮಟ್ಟದಲ್ಲೂ ಒಳ್ಳೆಯ ರಾಂಕಿಂಗ್ ಪಡೆದಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕಾದರೆ ಅತಿ ಹೆಚ್ಚು ವ್ಯಯ ಮಾಡಬೇಕಾಗುತ್ತದೆ. ಮಾತಿನಲ್ಲಿ ನನ್ನ ಸಹೋದ್ಯೋಗಿ “ಮೇಡಂ ಇತ್ತೀಚಿನ ವರ್ಷಗಳಲ್ಲಿ ನಾನು ಒಂದು ಚಿನ್ನದ ಆಭರಣ ಖರೀದಿಸಿಲ್ಲ. ಎಲ್ಲವನ್ನೂ ಮಗಳಿಗಾಗಿ – ವರ್ಷಕ್ಕೆ ಆರು ಏಳು ಲಕ್ಷಕ್ಕಿಂತ ಮಿಗಿಲಾಗಿ ಖರ್ಚು ಮಾಡುತ್ತಿದ್ದೇವೆ. ಪಕ್ಕದ ರಾಜ್ಯದ ಹುಡುಗಿ ಒಬ್ಬಳು ಅತ್ಯಂತ ಸುಸಜ್ಜಿತ ಕೋಚಿಂಗ್ ಸೆಂಟರ್ ಗೆ ಸೇರಿದ್ದಾಳೆ. ಅದರ ಖರ್ಚನ್ನು ಆ ರಾಜ್ಯದ ಕೆಲವು ಸಂಸ್ಥೆಗಳು ಮತ್ತು ಕೆಲವನ್ನು ಸರ್ಕಾರವೇ ಭರಿಸುತ್ತಿವೆ. ಆ ಹುಡುಗಿಯ ರಾಂಕಿಂಗ್ ಈ ಮಗುವಿಗಿಂತ ಕಡಿಮೆ ಇದ್ದರೂ ಆಕೆಗೆ ಹೆಚ್ಚು ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಕಾರಣ ಅವಳು ಕೋಚಿಂಗ್ ತೆಗೆದುಕೊಳ್ಳುತ್ತಿರುವ ಸಂಸ್ಥೆ. ಈ ಮಗು ಈ ಕಾಲೇಜನ್ನು ಬಿಟ್ಟು ಅಲ್ಲಿಗೆ ಕೋಚಿಂಗ್ ಸೇರಿಕೊಂಡರೆ ಅಷ್ಟನ್ನು ನಿಭಾಯಿಸುವುದು ಹೇಗೆ ಎನ್ನುವ ಕಾರಣಕ್ಕೆ ನಾವು ಈಗ ಅವಳಿಗೆ ಕೇವಲ ಕಾಲೇಜಿನಲ್ಲಿ ಓದುವುದು ಬಿಟ್ಟು ಬೇರೆ ಎಲ್ಲವನ್ನು ನಿಲ್ಲಿಸುತ್ತಿದ್ದೇವೆ. ನಮಗೂ ಸಾಕಾಗಿ ಹೋಗಿದೆ. ಇನ್ನು ನಮ್ಮ ಕೈಯಲ್ಲಿ ಸಾಧ್ಯವಿಲ್ಲ. ನಾವೂ ಅನೇಕ ಕಡೆ ವಿಚಾರಿಸಿದೆವು. ನಮಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚು ಪ್ರಭಾವ ಇಲ್ಲದೇ ಇರುವುದರಿಂದ ನಮ್ಮ ಮಗುವಿಗೆ ಸ್ಪಾನ್ಸರ್ಶಿಪ್ ಸಿಕ್ಕಿಲ್ಲ” ಎಂದು ನಿಟ್ಟುಸಿರಿಟ್ಟರು.
ನಾನು “ಇದರಿಂದ ಮಗುವಿಗೆ ಬೇಜಾರಾಗಿಲ್ಲವೇ? ಅಷ್ಟು ಪ್ರತಿಭಾನ್ವಿತ ಕ್ರೀಡಾಪಟು. ಎಲ್ಲವನ್ನೂ ಬದಿಗೊತ್ತಿ ಮನದೊಳಗೆ ಅಳು ನುಂಗಿ ಹೇಗೆ ಇದ್ದಾಳೆ?” ಎಂದು ಕೇಳಿದೆ.
ಅದಕ್ಕೆ ಆಕೆ “ನಾವು ಕುಳಿತುಕೊಂಡು ಗಂಡ ಹೆಂಡತಿಯ ಅವಳ ಜೊತೆ ಮಾತನಾಡಿದ್ದೇವೆ. ನಮ್ಮ ಶಕ್ತಿ ಇರುವಷ್ಟು ನಾವು ನಿನಗಾಗಿ ಖರ್ಚು ಮಾಡಿದ್ದೇವೆ. ಇನ್ನು ಮಾಡಲು ನಮಗೆ ಸಾಧ್ಯವಿಲ್ಲ ಎಂದು. ಆಕೆಗೂ ನಮ್ಮ ಅಸಹಾಯಕತೆ ಅರ್ಥವಾಗಿದೆ. ನಮಗೂ ಯಾವುದಾದರೂ ದೊಡ್ಡ ದೊಡ್ಡ
ಸಂಸ್ಥೆಗಳು ಸಹಾಯ ಮಾಡಿದರೆ ನಮ್ಮ ಮಗಳನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಿಗೆ ಕರೆದುಕೊಂಡು ಹೋಗಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಹೆಸರು ತರಬೇಕು ಎನ್ನುವ ಆಸೆ ಇದೆ. ಆದರೆ ಏನು ಮಾಡುವುದು?” ಎಂದು ಪ್ರಶ್ನೆ ಇಟ್ಟರು.
ಹೌದಲ್ಲಾ ಹೊರಗಿನಿಂದ ನಮಗೆ ಕಾಣುವುದು ಅವರು ದೊಡ್ಡ ಕ್ರೀಡಾಪಟು, ದೊಡ್ಡ ಕಲಾವಿದರು, ದೊಡ್ಡ ನಟರು ಎಂದು. ಆದರೆ ಅದರ ಹಿಂದಿನ ಶ್ರಮ, ಖರ್ಚು, ನೋವು ಎಷ್ಟು ಎಂಬುದು ಬೇರೆಯವರಿಗೆ ಕಾಣಿಸದು.
ನನ್ನೊಳಗೆ ಅನೇಕ ಪ್ರಶ್ನೆಗಳು ಗೊಂದಲಗಳು ಹುಟ್ಟಿಕೊಂಡವು. ನಿಜವಾದ ಪ್ರತಿಭೆಗಳು ಸೊಂಪಾಗಿ ಅರಳಬೇಕಾದರೆ ಅದಕ್ಕೆ ಸರಿಯಾದ ನೀರು ಗೊಬ್ಬರ ಬೇಕು. ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರವೇ ಈ ರೀತಿ ದೊಡ್ಡ ಮಟ್ಟದಲ್ಲಿ ಪ್ರತಿಭಾ ಪ್ರದರ್ಶನ ಮಾಡಲು ಸಾಧ್ಯ. ಸಾಮಾನ್ಯರು ಹಾಗೆ ಮಾಡುವ ಸಂಭವನೀಯತೆ ತೀರಾ ಕಡಿಮೆ.
ಕಡೆಯದಾಗಿ ನನಗೆ ಅನಿಸಿದ್ದಾದರೂ ಇಷ್ಟೇ. ಯಾವುದಾದರೂ ದೊಡ್ಡ ದೊಡ್ಡ ಸಂಸ್ಥೆಗಳು ಕೋಚಿಂಗ್ಗೆ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಭಾಗವಹಿಸಲು ಸ್ಪೋನ್ಸರ್ ಮಾಡಿದರೆ ನಮ್ಮ ಜಿಲ್ಲೆಯ ಮಗು ಕೂಡ ನಮ್ಮ ಜಿಲ್ಲೆ, ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸಿ ಹೆಮ್ಮೆ ಕೀರ್ತಿಯನ್ನು ತರಬಹುದು.
ನಾವು ಹಾರೈಸಬಹುದಷ್ಟೇ.

-ಡಾ.ಶುಭಶ್ರೀಪ್ರಸಾದ್, ಮಂಡ್ಯ.



