ದುಬೈ: ಏಷ್ಯಾ ಕಪ್‌ನ ಸೂಪರ್ 4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶವನ್ನು 11 ರನ್ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
1984ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಒಟ್ಟು 16 ಬಾರಿ ಭಾರತ–ಪಾಕಿಸ್ತಾನ ಪಂದ್ಯಾವಳಿ ಜರುಗಿದರೂ, ಇದುವರೆಗೂ ಈ ಎರಡುಪ ರಂಪರಾಗತ ಎದುರಾಳಿಗಳು ಫೈನಲ್ ಹಂತ ತಲುಪಿರಲಿಲ್ಲ. ಆದರೆ, ಭಾನುವಾರ ನಡೆಯಲಿರುವ ಅಂತಿಮ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ನಿಜವಾದ ಹೈವೋಲ್ಟೇಜ್ ಕಾದಾಟವಾಗಲಿದೆ.
ಗುರುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿ ಸೋಲನುಭವಿಸಿತು. ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಬೌಲರ್‌ಗಳ ಆಕರ್ಷಕ ದಾಳಿಯಿಂದ ಪಂದ್ಯ ರೋಚಕ ಅಂತ್ಯ ಕಂಡಿತು.
ಶಾಹಿನ್ ಶಾ ಅಫ್ರಿದಿ ಬಾಂಗ್ಲಾದೇಶದ ಬ್ಯಾಟರ್‌ಗಳನ್ನು ಕಟ್ಟಿಹಾಕಿ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. ಹ್ಯಾರಿಸ್ ರೌಫ್ ಸಹ 3 ವಿಕೆಟ್ ಕಿತ್ತುಕೊಂಡು ಬೌಲಿಂಗ್ ದಾಳಿಗೆ ಬಲ ತುಂಬಿದರು.
ಸಂಕ್ಷಿಪ್ತ ಸ್ಕೋರ್:
ಪಾಕಿಸ್ತಾನ – 135/8 (20 ಓವರ್)
ಮೊಹಮ್ಮದ್ ಹ್ಯಾರಿಸ್ – 31 (23), ಮೊಹಮ್ಮದ್ ನವಾಝ್ – 25 (15), ಶಾಹಿನ್ ಶಾ ಅಫ್ರಿದಿ – 19 (13);
ಟಸ್ಕಿನ್ ಅಹ್ಮದ್ – 3/28, ಮಹೆದಿ ಹಸನ್ – 2/28, ರಿಶಾದ್ ಹುಸೈನ್ – 2/18.
ಬಾಂಗ್ಲಾದೇಶ – 124/9 (20 ಓವರ್)
ಶಮೀಮ್ ಹುಸೇನ್ – 30 (25), ರಿಶಾದ್ ಹುಸೈನ್ – 16 (11);
ಶಾಹಿನ್ ಶಾ ಅಫ್ರಿದಿ – 3/17, ಹ್ಯಾರಿಸ್ ರೌಫ್ – 3/33.
ಈ ಜಯದೊಂದಿಗೆ ಪಾಕಿಸ್ತಾನ ಫೈನಲ್‌ಗೆ ತಲುಪಿದ್ದು, ಏಷ್ಯಾ ಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಡೋ–ಪಾಕ್ ಫೈನಲ್ ಕಾದಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.








