- ಏ.6ಕ್ಕೆ ಅಧಿಸೂಚನೆ
ಬೆಂಗಳೂರು: ಜಿಬಿಎ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದ್ದು, ಏಪ್ರಿಲ್ 6ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಸೂಚನೆ ಹೊರಬಂದ ಬಳಿಕ ಒಂದು ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಕರಗ ಉತ್ಸವ ಕುರಿತು ಮಾತನಾಡಿದ ಸಚಿವರು, ಸಿ-ಗ್ರೇಡ್ ದೇವಾಲಯಗಳ ಅಭಿವೃದ್ಧಿಗಾಗಿ ವಿಷನ್ ಗ್ರೂಪ್ ರಚಿಸಲಾಗಿದೆ. ಇದರ ಸಭೆ ಇಂದು ನಡೆಯಲಿದೆ. ಮುಜರಾಯಿ ಆಸ್ತಿಗಳನ್ನು ಮರುಸ್ವಾಧೀನಪಡಿಸಿಕೊಳ್ಳುವ ಹಾಗೂ ಹಿಂಡೀಕರಣ ಮಾಡಿ ಗೆಜೆಟ್ ಪ್ರಕಟಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆಗೆ ಸಹ ಸೂಚನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಸಿ-ಗ್ರೇಡ್ ದೇವಾಲಯಗಳ ದತ್ತು ಪ್ರಕ್ರಿಯೆಯನ್ನು ಸರಳೀಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ದೇವಾಲಯ ಆಸ್ತಿಗಳಿಗೆ ಜಿಯೋ-ಫೆನ್ಸಿಂಗ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತದೆ ಎಂದರು.
ಏಪ್ರಿಲ್ 1ರಂದು ಕರಗ ಉತ್ಸವ ನಡೆಯಲಿದೆ. ಎಂಟು ಸದಸ್ಯರ ಸಮಿತಿ ರಚನೆಯಾಗಿದ್ದು, ನಾರಾಯಣಸ್ವಾಮಿ ಅಧ್ಯಕ್ಷರಾಗಿದ್ದಾರೆ. ಮುಜರಾಯಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆಯುವುದಿಲ್ಲ; ಜಿಬಿಎಗೆ ಎಲ್ಲಾ ಹೊಣೆಗಾರಿಕೆ ನೀಡಲಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್, ಅವಿನ್ಯೂ ರೋಡ್, ಹಡ್ಸನ್ ಸರ್ಕಲ್ ಹಾಗೂ ಕಾಟನ್ ಪೇಟೆ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸುವ ಬಗ್ಗೆ ಚಿಂತನೆ ನಡೆದಿದೆ. ಅಗತ್ಯ ಭದ್ರತಾ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕರಗ ಹೊರುವ ವ್ಯಕ್ತಿಯನ್ನು ಸಮಿತಿಯೇ ನಿರ್ಧರಿಸುತ್ತದೆ. ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮಾರ್ಚ್ 24ರಂದು ಕರಗ ಧ್ವಜಾರೋಹಣ ನಡೆಯಲಿದೆ. ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಏಪ್ರಿಲ್ 1ರ ಮಧ್ಯರಾತ್ರಿ ಜರುಗಲಿದೆ.ಇದನ್ನು ಓದಿ –5.82 ಕೋಟಿ ವೆಚ್ಚದ ಕಾಮಗಾರಿಗೆ ಹರೀಶ್ ಗೌಡ ಗುದ್ದಲಿ ಪೂಜೆ
16ನೇ ಬಾರಿ ಕರಗವನ್ನು ಎ. ಜ್ಞಾನೇಂದ್ರ ಸ್ವಾಮಿ ಹೊರಲಿದ್ದಾರೆ. ಕಳೆದ ವರ್ಷ ಅವರು 15ನೇ ಬಾರಿ ಕರಗ ಹೊತ್ತಿದ್ದರು. ಒಟ್ಟು 11 ದಿನಗಳ ಕಾಲ ಉತ್ಸವ ನಡೆಯಲಿದ್ದು, ಮಾರ್ಚ್ 30ರಂದು ಹಸಿ ಕರಗ ಜರುಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.








