- ಮಹಾರಾಜ ಕಾಲೇಜು ಮೈದಾನದಲ್ಲಿ ಶಾಸಕರ ಜಂಟಿ ಸುದ್ದಿಗೋಷ್ಠಿ
ಮೈಸೂರು: ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶನಿವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ‘ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ’ಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ರೈತರು, ಸೈನಿಕರು ಹಾಗೂ ಜನಸಾಮಾನ್ಯರ ಒಳಿತಿಗಾಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಪಾರಾಯಣದಲ್ಲಿ ಈ ಬಾರಿ ಅಂದಾಜು ೭೫ ಸಾವಿರದಿಂದ ೧ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ಮೈದಾನದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದ್ದು, ಗಣ್ಯರು, ಸ್ವಾಮೀಜಿಗಳು ಮತ್ತು ಸಂತರಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗಾಗಿ ಕುಡಿಯುವ ನೀರು, ಪ್ರಸಾದ ಹಾಗೂ ಹನುಮದ್ ರಕ್ಷೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಸುಮಾರು ೪೦ ರಿಂದ ೫೦ ಸಾವಿರ ಭಕ್ತರು ಕುಳಿತು ಪಾರಾಯಣ ಮಾಡಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಸಂದರ್ಭಕ್ಕಾಗಿ ತಾತ್ಕಾಲಿಕ ಶೌಚಾಲಯಗಳು ಮತ್ತು ವೈದ್ಯಕೀಯ ಸೇವಾ ಘಟಕಗಳನ್ನು ತೆರೆಯಲಾಗಿದೆ. ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, “ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ. ಸಂಗೀತದ ಮೂಲಕ ರೋಗಗಳನ್ನು ವೈಜ್ಞಾನಿಕವಾಗಿ ಗುಣಪಡಿಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೀಗಳದ್ದು.
ಅವರ ನೇತೃತ್ವದಲ್ಲಿ ನಡೆಯುವ ಈ ಪಾರಾಯಣ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, “ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಸದಾ ಆರ್ತರ ಪರವಾಗಿ ಯೋಚಿಸುತ್ತಾರೆ. ಭಕ್ತರನ್ನು ಭಕ್ತಿಮಾರ್ಗದ ಕಡೆಗೆ ಕೊಂಡೊಯ್ಯುತ್ತಿರುವ ಶ್ರೀಗಳ ಸಾನ್ನಿಧ್ಯದಲ್ಲಿ ಪಾರಾಯಣದ ಜೊತೆಗೆ ಶಿವ ಪಾರ್ವತಿ ಕಲ್ಯಾಣ ಕೂಡ ನಡೆಯಲಿದೆ” ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, “೨೦೧೬ರ ನಂತರ ಇದು ಎರಡನೇ ಬಾರಿಗೆ ನಡೆಯುತ್ತಿರುವ ಬೃಹತ್ ಪಾರಾಯಣವಾಗಿದೆ. ನಗರದ ಜನತೆ ಸ್ವಯಂಪ್ರೇರಣೆಯಿಂದ ಶ್ರೀಗಳ ಸಂಕಲ್ಪಕ್ಕೆ ಬೆಂಬಲ ನೀಡಿದ್ದಾರೆ” ಎಂದರು.
ಮಾಜಿ ಮೇಯರ್ ನಾರಾಯಣ ಮಾತನಾಡಿ, “ಪೌರ ಕಾರ್ಮಿಕರ ಮಕ್ಕಳಿಗೆ ಸಂಸ್ಕೃತ ಮತ್ತು ಪೂಜಾ ವಿಧಿವಿಧಾನಗಳನ್ನು ಕಲಿಸುವ ಮೂಲಕ ಶ್ರೀಗಳು ಧಾರ್ಮಿಕ ಅರಿವು ಮೂಡಿಸಿದ್ದಾರೆ. ದೇವರಾಜ ಅರಸು ಬಡಾವಣೆ ಸೇರಿದಂತೆ ಹಲವು ಕಡೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ಅವಧೂತ ದತ್ತಪೀಠದ ಕಾರ್ಯದರ್ಶಿ ಹೆಚ್.ವಿ.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.








