ಮೈಸೂರು: ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನೀಡದ ಹಿನ್ನೆಲೆ 46 ವರ್ಷದ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸಂಬಂಧಿಕರು ಇದನ್ನು ಅನುಮಾನಾಸ್ಪದ ಸಾವು ಎಂದು ಆರೋಪಿಸಿದ್ದಾರೆ.
ಸರಸ್ವತಿಪುರಂ ನಿವಾಸಿ ಸಂಧ್ಯಾ ಮೃತರು. ಮನೆಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪುತ್ರಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಧ್ಯಾ ಗಂಡ ಹಾಗೂ ಮಗನೊಂದಿಗೆ ವಾಸವಿದ್ದರು.
ಪ್ರವಾಸ ವಿಚಾರವಾಗಿ ದಂಪತಿಗಳ ನಡುವೆ ಜಗಳ ನಡೆದಿದ್ದು, ಬಳಿಕ ಗಂಡ ಮನೆಯಿಂದ ಹೊರ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದನ್ನು ಓದಿ –ಇಂದು ರಾಮನಗರಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಆದರೆ, ಸಂಧ್ಯಾ ಸಹೋದರ ಗುರುಮೂರ್ತಿ ಗಂಡ ಹಾಗೂ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








