ಅಂತೂ ಕನ್ನಡಕ್ಕೆ ಯಾರಾದರೂ ಸಲ್ಲದ ಮಾತನಾಡಿದಾಗ ಕೊನೇಪಕ್ಷ ಸಾಮಾಜಿಕ ಜಾಲತಾಣದಲ್ಲಾದರೂ ಪ್ರತಿಭಟಿಸಿ ಕನ್ನಡತನ ಮೆರೆಯಬೇಕೆಂಬ ಮನಸ್ಸು ಕನ್ನಡಿಗರಲ್ಲಿ ನಿಧಾನಕ್ಕೆ ಮೂಡುತ್ತಿರುವುದು ಸಂತೋಷದ ವಿಷಯ.
” ಕನ್ನಡಕ್ಕೆ ಯಾವನೋ ಅವಹೇಳನ ಮಾಡಿದ, ಅವರಾರೋ ಕನ್ನಡದಲ್ಲಿ ಮಾತನಾಡಲಿಲ್ಲ, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲಹಾಸನ್ ಕ್ಷಮೆ ಕೇಳಲಿಲ್ಲ, ಕನ್ನಡವನ್ನು ಯಾವುದಕ್ಕೋ ಹೋಲಿಸಿದರು”…..ಇತ್ಯಾದಿಯಾಗಿ ಜಾಲತಾಣದ ಕೆಲ ಡಿಜಿಟಲ್ ಮಾಧ್ಯಮಗಳ ಕೆರಳಿಸುವ ತಲೆಬರಹವನ್ನೇ ನೋಡಿ, ಆವೇಶಕ್ಕೊಳಗಾಗಿ ಬಾಯಿಗೆ ಬಂದಂತೆ ಕಾಮೆಂಟು ಹಾಕುವ ಬಹುತೇಕ ಕನ್ನಡಿಗರಲ್ಲಿ ನಾವೆಷ್ಟರಮಟ್ಟಿಗೆ ನಮ್ಮೊಳಗೆ ಕನ್ನಡತನವನ್ನು ಉಳಿಸಿಕೊಂಡಿದ್ದೇವೆಂಬ ಬಗ್ಗೆ ಎಂದಾದರೂ ಆತ್ಮವಿಮರ್ಶೆ ಮಾಡಿಕೊಂಡಿದ್ದೇವೆಯೇ ?
ಅನ್ಯ ಭಾಷಿಕರನ್ನು ಅಸಹ್ಯವಾಗಿ ಖಂಡಿಸುವ ಮುನ್ನ ಕನ್ನಡಕ್ಕೆ ನಮ್ಮ ಬದ್ದತೆ, ನಿಷ್ಠೆ, ಪ್ರಾಮಾಣಿಕ ಅಭಿಮಾನ ಯಾವ ಮಟ್ಟದಲ್ಲಿದೆಯೆಂದು ಸ್ವಲ್ಪಮಟ್ಟಿಗಾದರೂ ಪರೀಕ್ಷಿಸಿಕೊಳ್ಳುವುದು ಉತ್ತಮವಲ್ಲವೇ.? ಈ ಬಗ್ಗೆ ನಮಗೆ ನಾವೇ ಒಂದು ಚಿಕ್ಕ ಆತ್ಮವಿಮರ್ಶೆ ಮಾಡಿಕೊಳ್ಳೋಣ, ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ. ಎದೆಮುಟ್ಟಿಕೊಂಡು ಕೇಳಿಕೊಳ್ಳೋಣ. ಏನೆಂದರೆ…
ನನ್ನನ್ನೂ ಸೇರಿದಂತೆ ನಮ್ಮಲ್ಲಿ ಎಷ್ಟು ಜನ ಕನ್ನಡಿಗರು…,
೧. ಮನೆಯ ಒಳಗಿನ ವಾತವರಣದಲ್ಲಿ ಮತ್ತು ಹೊರಗಡೆ ಪ್ರಪಂಚದಲ್ಲಿ ಸದಾ ಕನ್ನಡದಲ್ಲೇ ಮಾತನಾಡುತ್ತೀರಾ… ವ್ಯವಹರಿಸುತ್ತೀರಾ.. ಕನ್ನಡವನ್ನು ಹೃದಯದಿಂದ ಪ್ರೀತಿಸುತ್ತೀರ..?
೨. ಕನ್ನಡ ಬಾರದ ಅನ್ಯಭಾಷಿಕರ ಜೊತೆ ನಿತ್ಯ ವ್ಯವಹಾರದಲ್ಲಿ ಕನ್ನಡದಲ್ಲೇ ಮಾತನಾಡುವಿರಾ ಅಥವಾ ಅವರ ಭಾಷೆಯಲ್ಲೇ ವ್ಯವರಿಸುತ್ತೀರಾ…. ?
೩. ನಿಮ್ಮ ಮನೆಗೆ ತರಿಸುವ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಮಾಸಿಕಗಳಲ್ಲಿ ಕನ್ನಡದ ಪಾಲೆಷ್ಟು..? ಕನ್ನಡ ಪತ್ರಿಕೆಗಳನ್ನು ಮಕ್ಕಳಿಗೂ ಕಡ್ಡಾಯವಾಗಿ ಓದುವಂತೆ ಹೇಳುತ್ತೀರ..?
೪. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿರುವವರೆಷ್ಟು ? ಅಥವಾ ಕಾನ್ವೆಂಟುಗಳಿಗೆ ಕಳಿಸಿದರೂ ಅಲ್ಲಿ ಕನ್ನಡ ಮಾಧ್ಯಮಕ್ಕೆ ಸೇರಿಸಿದವರು ಎಷ್ಟು ಜನರಿದ್ದೀರಾ…. ?
೫. ನಿಮ್ಮ ಮನೆಯಲ್ಲಿ ಪುಟಾಣಿ ಮಕ್ಕಳು ಆಂಗ್ಲಭಾಷೆಯಲ್ಲಿ ಮಾತನಾಡಿದರೆ ಹೆಚ್ಚು ಪುಳಕಗೊಳ್ಳುವಿರಾ ಅಥವಾ ಕನ್ನಡದಲ್ಲಿ ಮಾತನಾಡಿದರೆ ಖುಷಿ ಪಡುವಿರಾ..? ಮಕ್ಕಳು ತಮ್ಮ ತಂದೆತಾಯಿಯನ್ನು ಡ್ಯಾಡೀ ಮಮ್ಮೀ ಎಂದೂ, ಸೋದರನಿಗೆ ಬ್ರೋ ಎಂದೂ ಕರೆಯುವ ಪದ್ದತಿ ಇದೆಯಾ..? ಹಾಗೆಯೇ ಅಂಕಲ್ ಆಂಟಿಯೋ….ಚಿಕ್ಕಪ್ಪ ಚಿಕ್ಕಮ್ಮನೋ…..? ಕಸೀನೋ….ಅಳಿಯನೋ….? ಬಾಮೈದನೋ…ಇನ್ ಲಾ ನೋ…? ಸೊಸೆಯೋ…ಡಾಟರ್ ಇನ್ ಲಾನೋ…? ಕೇಳಿಕೊಳ್ಳಿ.
೬. ನಿಮ್ಮ ಸಮೀಪಕ್ಕೆ ಬರುವ ಕನ್ನಡವೇ ಬಾರದ ಅನ್ಯಭಾಷಿಕರಲ್ಲಿ ಎಷ್ಟು ಜನಕ್ಕೆ ಕನ್ನಡ ಕಲಿಸುವ ಪ್ರಾಮಾಣಿಕ ಪ್ರಯತ್ನ ಇದುವರೆಗೆ ಮಾಡಿದ್ದೀರಾ..?
೭. ನಿಮ್ಮ ಮನೆಯ ಯಾವುದೇ ಶುಭ ಕಾರ್ಯಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಆಹ್ವಾನ ಪತ್ರಿಕೆಯನ್ನು ಕನ್ನಡದಲ್ಲೇ ಮಾಡಿಸಿರುವಿರಾ ಅಥವಾ ಪ್ರತಿಷ್ಠೆಗಾಗಿ ಆಂಗ್ಲಭಾಷೆಯಲ್ಲಿಯೋ..?
೮. ನಿಮ್ಮಲ್ಲಿ ಎಷ್ಟು ಮಂದಿ ಕನ್ನಡಿಗರು ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೇ , ಮಾಲ್ ಗಳಿಗೆ ಹೋಗಿ ನೋಡುತ್ತೀರಾ ? ಅಥವಾ ಮನೆಯಲ್ಲಿನ ಒಟಿಟಿ ಯಲ್ಲಿ ಎಷ್ಟು ಮಂದಿಗೆ ಕನ್ನಡ ಸಿನಿಮಾ ನೋಡುವ ಅಭ್ಯಾಸವಿದೆ.
೯. ಹಾಗೆಯೇ ಓಟಿಟಿಯಲ್ಲಿ ಅಥವಾ ಮಾಲ್ ಗಳಲ್ಲಿ ಆಂಗ್ಲ, ಹಿಂದಿ ತಮಿಳು ತೆಲುಗು ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕನ್ನಡಕ್ಕಿಂತ ಹೆಚ್ಚಿದೆಯಾ …ಕಡಿಮೆಯಿದೆಯಾ.?
೧೦. ನೀವು ಕನ್ನಡದಲ್ಲಿ ಸಹಿ ಮಾಡುವಿರಾ ಅಥವಾ ಆಂಗ್ಲಭಾಷೆಯಲ್ಲೋ..? ಅಗತ್ಯವಿದ್ದಾಗ ಕನ್ನಡದ ಅಂಕಿಗಳನ್ನೇ ಬಳಸುವಿರಾ..?
೧೧. ಯಾವುದಾದರೂ ಸಂಸ್ಥೆಗೆ, ಕಚೇರಿಗೆ ಅರ್ಜಿಗಳನ್ನು ಕನ್ನಡದಲ್ಲಿ ಬರೆಯುವಿರಾ ಅಥವಾ ಆಂಗ್ಲಭಾಷೆಯಲ್ಲೋ.? ಮಾತನಾಡುವಾಗ ಆಂಗ್ಲಪದದ ಸಹಾಯವಿಲ್ಲದೇ ಶುದ್ಧವಾಗಿ ಕನ್ನಡ ಮಾತನಾಡಬಲ್ಲಿರಾ.?
೧೨. ಮೆಟ್ರೋ ರೈಲುಗಳಲ್ಲಿ, ವಿಮಾನನಿಲ್ದಾಣಗಳಲ್ಲಿ ಅಥವಾ ಇತರೆ ಸಂಸ್ಥೆಗಳಲ್ಲಿ ವ್ಯವಹರಿಸಲು ಅಗತ್ಯವಾಗಿ ಕನ್ನಡವನ್ನೇ ಬಳಸುವಿರಾ..? ಅಲ್ಲೆಲ್ಲಾದರೂ ಕನ್ನಡಕ್ಕೆ ಆದ್ಯತೆಯಿಲ್ಲವೆಂದರೆ ದನಿಯೆತ್ತುವಿರಾ…?
೧೩. ಬಹುತೇಕ ಕನ್ನಡಿಗರೇ ತುಂಬಿರುವ ನಿಮ್ಮ ಕಚೇರಿಯ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡುವಿರಾ ಅಥವಾ ಅವಶ್ಯಕತೆ ಇಲ್ಲದಿದ್ದರೂ ಆಂಗ್ಲಭಾಷೆಯಲ್ಲೇ ಮಾತನಾಡುವಿರಾ..?
೧೪. ಅನ್ಯ ಭಾಷಿಕರೂ ಭಾಗವಹಿಸಿರುವ ಯಾವುದಾದರೂ ಸಭೆ ಸಮಾರಂಭಗಳಲ್ಲಿ ಕನ್ನಡದಲ್ಲೇ ಮಾತನಾಡಿ , ಕನ್ನಡತನ ಉಳಿಸಿಕೊಂಡಿರುವಿರಾ..? ಅಥವಾ ಅವರಿಗೆ ಅರ್ಥವಾಗೋಲ್ಲವೆಂದು ಇಂಗ್ಲೀಷ್ ನಲ್ಲೇ ಮಾತನಾಡುವಿರಾ..?
೧೫. ಕರ್ನಾಟಕದಲ್ಲೇ ಇರುವ “ಮಾಲ್” ಗಳಿಗೆ, “ಷಾಪಿಂಗು”ಗಳಿಗೆ, ಅಥವಾ ದೊಡ್ಡ ” ಷೋ ರೂಂ” ಗಳಿಗೆ ಹೋದಾಗ ಕನ್ನಡದಲ್ಲಿ ವ್ಯವವಹರಿಸುವಿರಾ ಅಥವಾ ಇತರೆ ಭಾಷೆಯಲ್ಲಿಯೋ..?
೧೬. ಎಷ್ಟು ಜನ ಕನ್ನಡಿಗರಿಗೆ ತಮ್ಮ ಭಾಷೆಯ ಹುಟ್ಟು, ಬೆಳವಣಿಗೆ, ಇತಿಹಾಸ ಪರಂಪರೆ ಶ್ರೇಷ್ಠತೆ ಬಗೆಗೆ, ಹಾಗೂ ಕರ್ನಾಟಕದ ಇತಿಹಾಸದ ಬಗೆಗೆ ಪ್ರಾಥಮಿಕ ಮಾಹಿತಿ ಇದೆ.?
೧೭. ವಿದೇಶಗಳಿಗೆ, ಅನ್ಯರಾಜ್ಯಗಳಿಗೆ ಪ್ರವಾಸ ಹೋಗುವ ಎಷ್ಟು ಮಂದಿ ಕನ್ನಡಿಗರು ಅದಕ್ಕೆ ಮೊದಲು ನಮ್ಮ ರಾಜ್ಯದಲ್ಲೇ ಇರುವ ಪ್ರವಾಸಿ ತಾಣಗಳನ್ನು ನೋಡಿದ್ದೀರಾ ಪ್ರೋತ್ಸಾಹಿಸಿದ್ದೀರಾ..?
೧೮. ಕನ್ನಡದ ಬಳಕೆ ಹೆಚ್ಚಾದರೆ ಮಾತ್ರ ಭಾಷೆ ಉಳಿಯಬಲ್ಲದೆಂಬ ಕಾಳಜಿಯಿಂದ ಎಷ್ಟು ಜನ ಕನ್ನಡಿಗರು ನಿತ್ಯ. ವ್ಯವಹಾರದಲ್ಲಿ ಕನ್ನಡದಲ್ಲೇ ಮಾತನಾಡುತ್ತಾರೆ.?
೧೯. ಕನ್ನಡಕ್ಕಾಗಿ ಆಯಾ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ, ಕೊಡುಗೆ ನೀಡಿದ ಎಷ್ಟು ಮಂದಿ ಕನ್ನಡದ ಸಾಧಕರ ಬಗೆಗೆ ನಮಗೆ ನಮ್ಮ ಮಕ್ಕಳಿಗೆ ಕನ್ನಡಿಗರಾಗಿ ಮಾಹಿತಿಯಿದೆ ..?
೨೦. ಕನ್ನಡ ಶಾಲೆಗಳ ದುಃಸ್ಥಿತಿ ಬಗ್ಗೆ , ಪ್ರತೀ ಊರ್೮ಗೆ ಕನ್ನಡ ಗ್ರಂಥಾಲಯ ಬೇಕು ಎನ್ನುವ ಬಗ್ಗೆ ಹಾಗೂ ಸಂಬಂಧಿಸಿದ ಇತ್ಯಾದಿ ಕನ್ನಡಪರ ವಿಚಾರಗಳಲ್ಲಿ ಎಷ್ಟು ಮಂದಿ ಕನ್ನಡಿಗರು ಹೋರಾಟ ಮಾಡಿದ್ದೇವೆ..?
೨೧. ರಾಜ್ಯದ ನಾಡುನುಡಿ ಗಡಿಗಳ ವಿಚಾರದಲ್ಲಿರುವ ಗಂಭೀರ ಸಮಸ್ಯೆಗಳ ಬಗ್ಗೆ, ಸವಾಲುಗಳ ಬಗ್ಗೆ ,ಕನ್ನಡಕ್ಕೆ ದಕ್ಕದ ಸಂಪೂರ್ಣ ಶಾಸ್ತ್ರೀಯ ಸ್ಥಾನಮಾನದ ಸವಲತ್ತುಗಳ ಬಗ್ಗೆ ಎಷ್ಟು ಮಂದಿ ಕನ್ನಡಿಗರಿಗೆ ಅರಿವಿದೆ ಹಾಗೂ ಆ ಬಗ್ಗೆ ನಮ್ಮದೇ ಮಿತಿಯೊಳಗೆ ಚಿಂತಿಸಿ ಹೋರಾಟ ಮಾಡಿದ್ದೇವೆ ಅಥವಾ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇವೆ .
೨೨. ನಾಮಫಲಕಗಳಲ್ಲಿ, ಆಹ್ವಾನಪತ್ರಿಕೆಗಳಲ್ಲಿ, ಮೈಲುಗಲ್ಲುಗಳಲ್ಲಿ, ಎಲ್ಲೆಡೆ ಸೂಚನಾ ಫಲಕಗಳಲ್ಲಿ, ಮಾಹಿತಿ ಕೋಶದಲ್ಲಿ ಕನ್ನಡವಿರಬೇಕೆಂಬ ಕಾಳಜಿಯಿಂದ ಎಂದಾದರೂ ಆ ಬಗ್ಗೆ ದನಿಯೆತ್ತಿದ್ದೀರಾ..?
೨೩. ಕನ್ನಡದ ಸಾಹಿತ್ಯ ಕಥೆ ಕಾದಂಬರಿಗಳನ್ನು ಓದುವ ಅಥವಾ ಶುದ್ಧ ಕನ್ನಡದಲ್ಲೇ ಬರೆಯುವ ಪ್ರಾಮಾಣಿಕತೆ ನಮ್ಮಲ್ಲಿ ಇನ್ನೂ ಉಳಿಸಿಕೊಂಡಿದ್ದೇವೆಯೇ…?
೨೪. ನಿಮ್ಮ. ಕನ್ನಡಪರ ಹೋರಾಟವೆಂಬುದು ಪಕ್ಷಾಧಾರಿತ ಅಥವಾ ಸೈದ್ಧಾಂತಿಕ ಆಧಾರಿತವಾಗಿ ರೂಪುಗೊಂಡಿದೆಯೇ ಅಥವಾ ಕನ್ನಡದ ಅಸ್ಮಿತೆಗಾಗಿ ಇರುವ ಪ್ರಾಮಾಣಿಕ ನಿಲುವಿನಿಂದಲೋ !
೨೪. ಕೊನೆಯದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ಪು, ಇ ಮೈಲು, ಇನ್ಸ್ಟಾ ಗ್ರಾಮು, ಫ಼ೇಸ್ಬುಕ್ಕು ಮುಂತಾದ ಕಡೆ ನಿಮ್ಮ ಚಾಟಿಂಗು-ಬ್ರೌಸಿಂಗು, ಮೆಸೇಜಿ ಎಲ್ಲವೂ ಕನ್ನಡದಲ್ಲಿದೆಯಾ..ಅಥವಾ ಆಂಗ್ಲದಲ್ಲೋ..?
ಹೀಗೆ…… ಹೇಳುತ್ತಾ ಹೋದಂತೆಲ್ಲಾ ನಮ್ಮನಿತ್ಯ ಬದುಕಿನಲ್ಲಿ ನಾವೆಷ್ಟರ ಮಟ್ಟಿಗೆ ಕನ್ನಡತನವನ್ನು ಅಳವಡಿಸಿಕೊಂಡಿದ್ದೇವೆಂಬ ಬಗ್ಗೆ ಎಲ್ಲ ಕನ್ನಡಿಗರು ಆತ್ಮವಿಮರ್ಶೆ ಮಾಡಿಕೊಂಡಾಗ ನಾವೆಲ್ಲಿದ್ದೇವೆಂದು ಅರಿವಾಗಬಹುದು.
ಇದು ವ್ಯಂಗ್ಯವೂ ಅಲ್ಲ, ಟೀಕೆಯೂ ಅಲ್ಲ. ನನ್ನನ್ನೂ ಸೇರಿದಂತೆ ನಿತ್ಯ ವ್ಯವಹಾರದಲ್ಲಿ ನಾವೆಲ್ಲಾ ಕನ್ನಡವನ್ನು ಹೇಗೆ ಬಳಸುತ್ತೇವೆ, ಪ್ರೀತಿಸುತ್ತೇವೆಂಬ ಬಗ್ಗೆ ಅಂದಾಜಿಸಬಹುದಾದ ಹಾಗೂ ನಮ್ಮಕನ್ನಡಾಭಿಮಾನವನ್ನು ಪ್ರಮಾಣಿಕವಾಗಿ ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿನ ಚಿಕ್ಕ ಒಳನೋಟ ಅಷ್ಟೇ !
ಉತ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ.
ಮರೆಯುವ ಮುನ್ನ
ಭಾಷೆ ಉಳಿಸುವುದು, ಬೆಳೆಸುವುದು, ಅದನ್ನು ಹೆಚ್ಚು ಹೆಚ್ಚಾಗಿ ಬಳಸುವುದರಿಂದ ಹಾಗೂ ನಮ್ಮ ಭಾಷೆಯ ಬಗೆಗೆ ನಾವು ಅಂತರ್ಗತವಾಗಿ ಹೊಂದಿರುವ ಪ್ರಾಮಾಣಿಕ ಅಭಿಮಾನದಿಂದಲೇ ಹೊರತು ಯಾರೋ ಏನೋ ಅರೆಬೆಂದ ಅವಿವೇಕಿಗಳು ಕನ್ನಡದ ಬಗ್ಗೆ ಏನೋ ಹೇಳಿದರೆಂದು ಅವರ ಬಗ್ಗೆ ಜಾಲತಾಣಗಳಲ್ಲಿ ಕೀಳುಮಟ್ಟದ ಕಾಮೆಂಟುಗಳನ್ನು ಕುಟ್ಟಿ ವೀರ ಪೌರುಷ ತೋರುವುದರಿಂದ ಅಲ್ಲ.!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.








