ಒಂದೇ ಸರ್ವೆ ನಂಬರ್‌ನಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಇದ್ದಲ್ಲಿ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಮೀಸಲು ಅರಣ್ಯ, ಪರಿಭಾವಿತ ಅರಣ್ಯ ಹಾಗೂ ಸೆಕ್ಷನ್ 4 ಅಧಿಸೂಚನೆಯ ನಂತರ ಯಾವುದೇ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಸಕ್ರಮ ಯೋಜನೆಯಡಿ ನಮೂನೆ 50, 53, 57ರಲ್ಲಿ ಸಲ್ಲಿಸಿದ ಅರ್ಜಿಗಳ ಮೂಲಕ ಕಂದಾಯ ಭೂಮಿ ಮಾತ್ರ ಮಂಜೂರು ಮಾಡಬಹುದೇ ಹೊರತು ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.
ಮೋಜಿಣಿ ಕಾರ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲದಿದ್ದು, ಕಾಲಮಿತಿಯೊಳಗೆ ಗಡಿ ಗುರುತಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 1,20,491 ಪ್ರಕರಣಗಳಲ್ಲಿ 2,21,263 ಎಕರೆ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸುವ ಕೆಲಸ ಬಾಕಿಯಿದ್ದು, ಒತ್ತುವರಿದಾರರ ವಿರುದ್ಧ ಅರಣ್ಯ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಇದನ್ನು ಓದಿ –ಅನ್ಯ ಧರ್ಮಕ್ಕೆ ಮತಾಂತರವಾದರೆ ಎಸ್‌ಸಿ ಮೀಸಲಾತಿ ಇಲ್ಲ: ಸುಪ್ರೀಂ ತೀರ್ಪು
ಅರಣ್ಯ ಅತಿಕ್ರಮಣ ಪತ್ತೆ ಹಚ್ಚಲು ‘ಫಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್’ ಎಂಬ ಉಪಗ್ರಹ ಆಧಾರಿತ ತಾಂತ್ರಿಕ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದು ಅರಣ್ಯ ಒತ್ತುವರಿಯ ಕುರಿತು ಎಚ್ಚರಿಕೆ ನೀಡುವ ಜೊತೆಗೆ ತಾಂತ್ರಿಕ ಸಾಕ್ಷ್ಯ ಒದಗಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.








