” ಭಾರತದ ಸಂವಿಧಾನ ಪೀಠಿಕೆಯಲ್ಲಿರುವ ಎರಡು ಪದಗಳಾದ ಜಾತ್ಯತೀತ ( ಸೆಕ್ಯುಲರಿಸಂ) ಮತ್ತು ಸಮಾಜವಾದ ( ಸೋಷಿಯಲಿಸಂ) ಗಳು ಪೀಠಿಕೆಯಲ್ಲಿರಬೇಕೇ ಬೇಡವೇ ಎಂಬುದರ ಬಗ್ಗೆ ದೇಶಾದ್ಯಂತ ಚರ್ಚೆಯ ಅಗತ್ಯವಿದೆ” ಎಂದು ಯಾವಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮೊನ್ನೆ ಒಂದು ಹೇಳಿಕೆಯ ಬಾಂಬ್ ಸಿಡಿಸಿದರೋ ಅಲ್ಲಿಂದ ಈ ಬಗ್ಗೆ ದೇಶಾದ್ಯಂತ ಪರ -ವಿರೋಧಗಳ ಸಂಘರ್ಷ ಭುಗಿಲೆದ್ದಿದೆ. ಹೊಸಬಾಳೆ ಮಾತ್ರವಲ್ಲದೇ ಈ ದೇಶದ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್, ಕೆಲವು ಕೇಂದ್ರ ಮಂತ್ರಿಗಳು, ಯೋಗಿ ಆದಿತ್ಯನಾಥ ಸೇರಿದಂತೆ ಭಾಜಪ ಆಡಳಿತದ ಮುಖ್ಯಮಂತ್ರಿಗಳು ಹಾಗೂ ಆರ್.ಎಸ್. ಎಸ್ ಮತ್ತು ಭಾಜಪ ಪರವಾಗಿರುವ ಹಾಗೂ ಬಲಪಂಥೀಯ ಚಿಂತನೆಯ ಪರವುಳ್ಳ ಅನೇಕರು ಈ ಎರಡು ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈಬಿಡಬೇಕೆಂದು ಹಿಂದೆ ಮುಂದೆ ನೋಡದೇ ಸ್ಪರ್ಧೆಗೆ ಬಿದ್ದವರಂತೆ ಬೀಸು ಹೇಳಿಕೆಗಳನ್ನು ನೀಡುತ್ತಿದ್ದು ಅದಕ್ಕೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು , ಎಡಪಂಥೀಯ ಚಿಂತನೆಯುಳ್ಳವರು ಕೌಂಟರ್ ಕೊಡುತ್ತಾ ಚರ್ಚೆಗೆ ಹೊಸ ಆಯಾಮವನ್ನೇ ನೀಡಿದ್ದಾರೆ. ಸಧ್ಯಕ್ಕಿದು ಹಾಟ್ ಟಾಪಿಕ್ಕು !
ಈ ಹಿಂದೆ ಈ ಎರಡು ಪದಗಳನ್ನು ಪೀಠಿಕೆಯಿಂದ ಕೈಬಿಡುವ ಬಗ್ಗೆ ಕ್ಯಾತ ಬುದ್ದಿವಂತ ರಾಜಕಾರಣಿ ಸುಬ್ರಹ್ಮಣ್ಯಂ ಸ್ವಾಮಿ ಸೇರಿದಂತೆ ಕೆಲವರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರೂ, ಕಳೆದವರ್ಷ ಕೋರ್ಟಿನ ತೀರ್ಪು ಇವರ ವಿರುದ್ಧವಾಗಿದ್ದರಿಂದ ಸುಮ್ಮನಾಗಿದ್ದರು. ಈಗ ತುರ್ತುಪರಿಸ್ಥಿತಿ ಹೇರಿಕೆಗೆ ಐವತ್ತು ವರ್ಷ ತುಂಬಿರುವ ಸಂಧರ್ಭದಲ್ಲಿ ಈ ವಿವಾದವನ್ನು ಮತ್ತೇ ಮುನ್ನೆಲೆಗೆ ತಂದಿದ್ದಾರೆ.
ಈ ಪದಗಳ ಮೇಲೆ ಇವರಿಗೆ ಯಾಕಿಷ್ಟು ಅಸಹನೆ ಎಂಬ ಪ್ರಶ್ನೆಗೆ, ಇವುಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ, ಸಂವಿಧಾನಕ್ಕೆ ಸೇರಿಸಲಾಯಿತೇ ಹೊರತು ಅವು ಮೂಲ ಪೀಠಿಕೆಯ ಭಾಗವಾಗಿರಲಿಲ್ಲ. ಮೇಲಾಗಿ ಅಂಬೇಡ್ಕರ್ ರಚಿತ ಮೂಲ ಸಂವಿಧಾನದಲ್ಲಿ ಜಾತ್ಯತೀತ ಮತ್ತು ಸಮಾಜವಾದ ಪದಗಳು ಇರಲೇ ಇಲ್ಲವಾದ್ದರಿಂದ ಅವುಗಳನ್ನು ಪೀಠಿಕೆಯಿಂದ ಕೈ ಬಿಡಬೇಕೆಂಬುದು ಕೆಲವರ ಆಗ್ರಹ.
ಇದಿಷ್ಟು ಸಂಕ್ಷಿಪ್ತವಾಗಿ ಈ ಎರಡು ಪದಗಳ ಬಗೆಗಿನ ವಿವಾದ.
ಯಥಾ ಪ್ರಕಾರ ಆರ್. ಎಸ್. ಎಸ್, ಭಾಜಪ ಮತ್ತು ಮಿತ್ರ ಪಕ್ಷಗಳು ಹಾಗೂ ಬಲಪಂಥೀಯ ಚಿಂತಕರು ಜಾತ್ಯತೀತ ಮತ್ತು ಸಮಾಜವಾದದ ಪದಗಳನ್ನು ಕೈಬಿಡುವ ಬಗ್ಗೆ ಒತ್ತಾಯಿಸಿದರೆ, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳು ಅವುಗಳನ್ನು ಉಳಿಸಿಕೊಳ್ಳಲು ಪ್ರತಿಪಾದಿಸುತ್ತಲೇ ಪರಸ್ಪರ ಕೆಸರೆರೆಚಿಕೊಳ್ಳುತ್ತಿವೆ. ಇಲ್ಲಿ ವಸ್ತುನಿಷ್ಠ ಚರ್ಚೆಗಿಂತ ರಾಜಕೀಯವೇ ಮೇಲುಗೈ ಸಾಧಿಸಿದೆ.
ಈ ಪರ- ವಿರುದ್ಧದ ಹೋರಾಟ ಕೇವಲ ಎರಡು ಪದಗಳಿಗೆ ಸಂಬಂಧಿಸಿದ್ದು ಎಂದು ಯಾರಾದರೂ ಭಾವಿಸಿದರೆ ಅದು ಪೂರ್ತಿ ತಪ್ಪು. ಬದಲಿಗೆ ಇದು ಎರಡು ವಿರುದ್ಧ ಸಿದ್ದಾಂತಗಳ ನಡುವಿನ ಎಂದೂ ಮುಗಿಯದ ಪಾರಂಪರಿಕ ಸಂಘರ್ಷ. ! ಡಾ. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಆಶಯಗಳನ್ನು ಹೆಚ್ಚು ಕಡಿಮೆ ಇಡಿಯಾಗಿ ವಿರೋಧಿಸುವ ಮನಃಸ್ಥಿತಿಯುಳ್ಳ ಒಂದು ವರ್ಗ, ಸರಿಸುಮಾರು ಮುಕ್ಕಾಲು ಶತಮಾನದಿಂದಲೂ ಅವುಗಳ ಮೂಲ ಆಶಯಗಳನ್ನು ವಿರೋಧಿಸುವ ಕೆಲಸವನ್ನು ಅವ್ಯಾಹತವಾಗಿ ಸಂಧರ್ಭ ಸಿಕ್ಕಾಗಲೆಲ್ಲಾ ಮಾಡಿಕೊಂಡೇ ಬರುತ್ತಿದೆ. ಅಷ್ಟೇ ಅಲ್ಲದೇ ತಮಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೂರ್ತಿ ಬಹುಮತ ಸಿಕ್ಕರೆ ಪ್ರಸ್ತುತ ಇರುವ ಸಂವಿಧಾನವನ್ನು ಬದಲಿಸುತ್ತೇವೆಂಬ ಹೇಳಿಕೆಗಳನ್ನು ಕೆಲವು ಫ಼ೈರ್ ಬ್ರಾಂಡ್ ರಾಜಕಾರಣಿಗಳ ಮೂಲಕ ಕೊಡಿಸಿ ತಮ್ಮ ಮನದಿಂಗಿತವನ್ನು ಸಾಬೀತುಪಡಿಸುತ್ತಲೇ ಬಂದಿವೆ. ಅದರ ಫಲಶ್ರುತಿಯೇ ಈ ಪದಗಳಿಗೆ ಈ ರೀತಿಯ ವಿರೋಧಗಳು, ಚರ್ಚೆಗಳು ಹಾಗೂ ಬೀಸು ಹೇಳಿಕೆಗಳು.
ಈ ಸೈದ್ಧಾಂತಿಕ ಸಂಘರ್ಷಗಳಿಗೆ ಪ್ರಸ್ತುತ ವಿಷಯ ವಸ್ತುವಾಗಿರುವ ಜಾತ್ಯತೀತ ಅಥವಾ ಧರ್ಮನಿರಪೇಕ್ಷ ಮತ್ತು ಸಮಾಜವಾದ ಪದಗಳು ಸಂವಿಧಾನದ ಭಾಗವಾಗಿರಬೇಕೇ ಬೇಡವೇ ಎಂಬ ಬಗ್ಗೆ ಒಬ್ಬ ಜನಸಾಮಾನ್ಯನಾಗಿ ಮೊದಲು ಈ ಪದಗಳ ಅರ್ಥವನ್ನು ಸಂಕ್ಷಿಪ್ತವಾಗಿ ತಿಳಿಯುವುದು ಒಳ್ಳೆಯದು.
ಜಾತ್ಯತೀತವೆಂದರೆ ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುವುದು. ಇಲ್ಲಿ ಸರ್ಕಾರವು ಯಾವುದೇ ಒಂದು ನಿರ್ದಿಷ್ಟವಾದ ಧರ್ಮವನ್ನು ಬೆಂಬಲಿಸುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧರ್ಮ ಸಹಿಷ್ಣುತೆ ಇದರ ಪ್ರಮುಖ ಲಕ್ಷಣಗಳು. ಜಾತ್ಯತೀತ ಸಮಾಜವು ಎಲ್ಲ ನಾಗರಿಕರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನು ಸಮಾಜವಾದವು ಆದಾಯ ಮತ್ತು ಸಂಪತ್ತಿನ ಸಮಾನ ಹಂಚಿಕೆಯನ್ನು ಉತ್ತೇಜಿಸುವುದಲ್ಲದೇ ಬಡತನವನ್ನು ಕಡಿಮೆ ಮಾಡುವ ಉದ್ದೇಶವನ್ನೂ ಹೊಂದಿದೆ. ಸಮಾಜವಾದದಲ್ಲಿ ವ್ಯಕ್ತಿಗಳ ಬದಲು ಸರ್ಕಾರಿ ಒಡೆತನವಿದ್ದು ಉಚಿತ ಶಿಕ್ಷಣ, ಆರೋಗ್ಯ, ಆಹಾರ, ವಸತಿ ಮುಂತಾದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳು ಸರ್ಕಾರಿ ಒಡೆತನದಲ್ಲಿರುತ್ತವೆ.
ಸದ್ಯಕ್ಕೆ ಇಷ್ಟು ವಿವರಣೆ ಸಾಕು !
ಸುಮಾರು ನೂರಾ ನಲವತ್ತೇಳು ಕೋಟಿ ಜನಸಂಖ್ಯೆಯುಳ್ಳ , ಕೃಷಿ ಪ್ರಧಾನವಾಗುಳ್ಳ, ಹಾಗೂ ಅನೇಕ ಜಾತಿ ಧರ್ಮ ವರ್ಗಗಳ ವೈವಿಧ್ಯತೆಗಳಿರುವ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಜಾತ್ಯತೀತ ಮತ್ತು ಸಮಾಜವಾದ ವ್ಯವಸ್ಥೆಗಳು ಒಟ್ಟಾರೆಯಾಗಿ ಪೂರಕವಾಗಿವೆಯೇ ಹೊರತು ಎಂದೂ ಮಾರಕವೆನಿಸಿಲ್ಲ. ಅದರಲ್ಲೂ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಅನುಷ್ಠಾನವಾಗಿರುವುದ ರಿಂದಲೇ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಈಗ ಶೇ. ಐದರೊಳಗಿರಲು ಸಾಧ್ಯವಾಗಿದೆ. ಹೀಗಿರುವಾಗ ಜನಸಾಮಾನ್ಯರ ದೃಷ್ಟಿಯಿಂದ ಈ ಎರಡು ಪದಗಳಲ್ಲಿ ಯಾವ ರೀತಿಯ ದೋಷವಿದೆಯೆಂಬುದಾಗಲೀ ಅದಕ್ಕೆ ಯಾಕಿಷ್ಟು ಅಸಹನೆಯೆಂಬುದಾಗಲೀ ತಿಳಿಯುತ್ತಿಲ್ಲ.
ಆಯ್ತು… ಯಾವುದನ್ನಾದರೂ ನೀವು ವಿರೋಧಿಸುತ್ತೀರಿ ಎಂದರೆ ಅದರ ವಿರುದ್ಧವಾಗಿರುವ ಇನ್ನಾವುದನ್ನೋ ಬೆಂಬಲಿಸುತ್ತೀರಿ ಎಂದರ್ಥವಲ್ಲವೇ. ? ಹಾಗಾದರೆ ಜಾತ್ಯತೀತ ಮತ್ತು ಸಮಾಜವಾದ ಪದ್ದತಿ ಬೇಡವೆನ್ನುವವರು ಅದರ ವಿರುದ್ಧ ವ್ಯವಸ್ಥೆಗಳಾದ ಕೋಮುವಾದ ಮತ್ತು ಬಂಡವಾಳಶಾಹಿತನವನ್ನು ಬೆಂಬಲಿಸುವವರೆಂದು ಅರ್ಥವೇ…?
ಈ ವ್ಯವಸ್ಥೆಗಳಿಂದ ಜನಸಾಮಾನ್ಯರ ಮೇಲಾಗುತ್ತಿರುವ ಪರಿಣಾಮಗಳೇನು ಎಂಬದನ್ನು ಅರಿಯದೇ ಕೇವಲ ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ಆಗಾಗ್ಗೆ ದನಿಯೆತ್ತುವ ಕೆಲವರ ಈ ಎಡಬಿಡಂಗಿ ಧೋರಣೆಗಳಿಂದಲೇ ಭಾರತದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಈ ಪದಗಳನ್ನು ಸಂವಿಧಾನ ಪೀಠಿಕೆಯಿಂದ ಕೈಬಿಡಬೇಕೆಂಬ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿ ತೀರ್ಪು ಕೊಟ್ಟಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ರವರ ಮೂಲ ಸಂವಿಧಾನದಲ್ಲಿ ಈ ಎರಡೂ ಪದಗಳಿರಲಿಲ್ಲ ಎಂಬ ವಾದ ಮಂಡಿಸುವವರು ಸಂವಿಧಾನ ರಚನೆಯಾದ ಮೇಲೆ ಅದು 106 ಬಾರಿ ತಿದ್ದುಪಡಿಗೆ ಒಳಗಾಗಿರುವ ಅಂಶವನ್ನು ಗಮನಿಸಬೇಕು. ಆಯಾ ಕಾಲಘಟ್ಟಕ್ಕೆ ಅನುಸಾರವಾಗಿ ಸಂವಿಧಾನದ ಮೂಲ ತತ್ವಗಳಿಗೆ ರಾಜಿಯಾಗದೇ, ಆದರ ಆಶಯಗಳಿಗೆ ಧಕ್ಕೆಯಾಗದೇ ತಿದ್ದುಪಡಿ ಮಾಡುವ ಅಧಿಕಾರವನ್ನು ಸಂವಿಧಾನದ 368 ನೇ ವಿಧಿಯ ಮೂಲಕ ಬಾಬಾಸಾಹೇಬರೇ ಪಾರ್ಲಿಮೆಂಟ್ ಗೆ ಅನುವು ಮಾಡಿದ್ದಾರೆ. ಹೀಗಿರುವಾಗ ಅಲ್ಲಿಯವರೆಗೂ ಇದ್ದ ಸಂವಿಧಾನದ ಅಸ್ಮಿತೆಗಳಾದ ಸಾರ್ವಭೌಮತ್ವ , ಪ್ರಜಾಸತ್ತಾತ್ಮಕ ಹಾಗೂ ಗಣರಾಜ್ಯದ ಜೊತೆಗೆ ಜಾತ್ಯತೀತ ಹಾಗೂ ಸಮಾಜವಾದ ಪದಗಳನ್ನು ಸೇರಿಸಿದ್ದು ಅದರೊಂದಿಗೆ ದೇಶದ ಐಕ್ಯತೆ ಜೊತೆಗೆ ಸಮಗ್ರತೆಯೆಂಬ ಪದವನ್ನೂ ಆ ಸಮಯದಲ್ಲಿ ಸೇರಿಸಿದ್ದಾಗಿದೆ.
ಎಮರ್ಜೆನ್ಸಿ ಸಂಧರ್ಭದಲ್ಲಿ ಪೀಠಿಕೆಗೆ ಸೇರಿಸಲ್ಪಟ್ಟ ಧರ್ಮನಿರಪೇಕ್ಷತೆ , ಸಮಾಜವಾದ ಹಾಗೂ ಸಮಗ್ರತೆ ಪದಗಳ ಹಿಂದೆ ಒಂದುವೇಳೆ ದುರುದ್ದೇಶ ಅಥವಾ ಜನವಿರೋಧಿ ಧೋರಣೆ ಇದ್ದಿದ್ದಲ್ಲಿ ಬಹುಶಃ ಅವು ಕಳೆದ ಐವತ್ತು ವರ್ಷಗಳಿಂದಲೂ ಸಂವಿಧಾನ ಪೀಠಿಕೆಯಲ್ಲಿ ಉಳಿಯುತ್ತಿರಲಿಲ್ಲವೇನೋ..! ಏಕೆಂದರೆ ಈ ಸಮಯದಲ್ಲಿ ಕೇಂದ್ರದಲ್ಲಿ ಎಡ ಮತ್ತು ಬಲಪಂಥೀಯ ಚಿಂತನೆಗಳುಳ್ಳ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿದ್ದರೂ ಇವುಗಳನ್ನು ಕೈಬಿಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.
ಬಹುಶಃ ಬಹುತ್ವದ ಭಾರತಕ್ಕೆ ಧರ್ಮನಿರಪೇಕ್ಷತೆ ಮತ್ತು ಸಮಾಜವಾದ ಎಂಬುವು ಬೈ ಡೀಫ಼ಾಲ್ಟ್ ಸಂವಿಧಾನದ ತಳಹದಿಯೆಂಬ ಪರಿಕಲ್ಪನೆಯಡಿಯಲ್ಲಿ ಅಂಬೇಡ್ಕರ್ ರವರು ಅವುಗಳನ್ನು ಆರಂಭದಲ್ಲಿ ಪೀಠಿಕೆಯಲ್ಲಿ ವಿಶೇಷವಾಗಿ ಸೇರಿಸಿರುವುದನ್ನು ಬಿಟ್ಟಿರಬಹುದೇ ವಿನಃ ಅವುಗಳಿಂದ ಸಂವಿಧಾನದ ಮೂಲ ಆಶಯಗಳು ವಿರೂಪಗೊಳ್ಳುತ್ತವೆ ಎಂಬ ಕಾರಣದಿಂದಂತೂ ಅಲ್ಲ. ಹೀಗಾಗಿ ಸಂವಿಧಾನಕ್ಕೆ ನಲವತ್ತೆರಡನೇ ತಿದ್ದುಪಡಿಯ ಮೂಲಕ 1976 ರ ತುರ್ತುಪರಿಸ್ಥಿತಿಯ ಸಮಯದಲ್ಲಿ ಇವುಗಳನ್ನು ಸೇರಿಸಿದ್ದು ಎಂಬ ಏಕೈಕ ಕಾರಣಕ್ಕಾಗಿ ವಿರೋಧ ಮಾಡುವುದು ಸಮಂಜಸವೂ ಅಲ್ಲ , ಸಕಾರಣವೂ ಅಲ್ಲ. ಬಂಡವಾಳ ಶಾಹಿಗಳ ಏಕಸಾಮ್ಯವನ್ನು ತಪ್ಪಿಸಿ ಸಮಸಮಾಜ ನಿರ್ಮಾಣದತ್ತ ಪ್ರಯತ್ನಿಸುವ ಹಾಗೂ ಎಲ್ಲಾ ಜಾತಿ- ಧರ್ಮದವರನ್ನು ಸಮಾನವಾಗಿ ಕಾಣುವ ಪ್ರಯತ್ನಗಳನ್ನು ವಿರೋಧಿಸುವ ಪ್ರಕ್ರಿಯೆಯೇ ಮೂಲ ಸಂವಿಧಾನ ವಿರೋಧಿಯಾಗಿ ಕಾಣುತ್ತಿದೆ.
ಜನರಿಗೆ ತೊಂದರೆಯಾಗದ, ಆದರೆ ಅನುಕೂಲವಾಗಿರುವ ಈ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ಕೈ ಬಿಡುವುದು ಎಂದರೆ ಅದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಮೂಲ ಆಶಯಗಳನ್ನೇ ಪ್ರಶ್ನಿಸಿದಂತೆ ಎಂಬುದು ರಾಜಕೀಯದಿಂದ ಹೊರತಾದ ಶ್ರೀಸಾಮಾನ್ಯನ ಮುಕ್ತ ಅನಿಸಿಕೆ.
- ಮರೆಯುವ ಮುನ್ನ
ತುರ್ತು ಪರಿಸ್ಥಿತಿಯ ದುರ್ಲಾಭ ಪಡೆದು ಈ ಪದಗಳನ್ನು ದೇಶದ ಮೇಲೆ ಹೇರಿದ್ದಾಗಿ ಆರೋಪಿಸುವವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜವಾದದಿಂದಾಗಿ ನಾಡಿನ ಕಡುಬಡವರಿಗೆ ಶ್ರೀಸಾಮಾನ್ಯರಿಗೆ ಪ್ರಯೋಜನವಾಗಿದೆಯೇ ವಿನಃ ಅನ್ಯಾಯವಂತೂ ಆಗಿಲ್ಲ. ಆದರೆ ಒಂದೊಮ್ಮೆ ಈ ಪದಗಳು ಬೇಡವೆಂದಲ್ಲಿ ಅವುಗಳ ವಿರುದ್ಧ ವ್ಯವಸ್ಥೆಯನ್ನು ಭಾರತ ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆ ಎದುರಾಗುತ್ತದೆ.
ಅಂದರೆ ಈಗ ಭಾರತಕ್ಕೆ ಜಾತ್ಯತೀತತೆಯ ಬದಲು ಕೋಮುವಾದ ಹಾಗೂ ಸಮಾಜವಾದದ ಬದಲು ಬಂಡವಾಳಶಾಹಿತನವನ್ನು ಹಾಗೂ ಸರ್ಕಾರಿ ಸ್ವಾಮ್ಯದ ಬದಲು ಖಾಸಗಿಸ್ವಾಮ್ಯವನ್ನು ಪ್ರತಿಪಾದಿಸುವುದು ಸಮಂಜಸವೇ….ಎಂಬ ಪ್ರಶ್ನೆಗೆ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಸಂವಿಧಾನದ ಆಧಾರದಲ್ಲಿ ಸರ್ಕಾರ ನಡೆಸುತ್ತಿರುವವರು ಉತ್ತರಿಸಬೇಕಿದೆ.

ಹಿರಿಯೂರು ಪ್ರಕಾಶ್.