ಕೃಷ್ಣ ಎಂಬ ಹೆಸರು ಕೇಳಿದೊಡನೆ ಮೊದಲು ಮನದಲ್ಲಿ ಮೂಡುವುದುಮುದ್ದು ಬಾಲಕೃಷ್ಣನ ಸುಂದರ ಚಿತ್ರ.
ನೀಲವರ್ಣ, ಅರಳಿದ ಕಂಗಳ,ಬೆಣ್ಣೆ ಮೆತ್ತಿದ ಬಾಯಿಯ,ನವಿಲುಗರಿ,ಮುತ್ತಿನಸರದ,ಸರುಳಿಗೂದಲ ತುಂಟಾಟವಾಡುವ ಮನೋಹರ ಮೂರ್ತಿಯ ಸುಂದರ ಚಿತ್ರ.ಮನೆಯಲ್ಲಿ ಮಕ್ಕಳಿಗೆ ಮುದ್ದು ಕೃಷ್ಣನ ವೇಷಹಾಕಿ ನಲಿಯುತ್ತೇವೆ.ಮಕ್ಕಳ ತುಂಟಾಟ ಮಾತುಗಳಲ್ಲಿ ಕೃಷ್ಣನನ್ನೇ ಕಾಣುತ್ತೇವೆ.
ಕೃಷ್ಣ ನರನಂತೆ ದೇವಕೀ ವಸುದೇವರ ಮಗನಾಗಿ ಜನಿಸಿ,ಜಗದೋದ್ಧಾರ ಮಾಡಿದವ.ಮಾವ ಕಂಸನ ದೌರ್ಜನ್ಯಕೆ ತಕ್ಕ ಉತ್ತರ ನೀಡಿದ ನ್ಯಾಯವಾದಿ.
ಬಾಲ್ಯವನು ನಂದಗೋಪ ಯಶೋಧೆಯರ ನಂದಗೋಕುಲದಲ್ಲಿ ಕಳೆದು,ದುರುಳ ರಕ್ಕಸರ ಸದೆಬಡಿದು ಗೊಲ್ಲರ ಸಮುದಾಯಕ್ಕೆ ನೆಮ್ಮದಿ ತಂದವ.ರಾಧೆಯೊಡನೆ ನಿರ್ಮಲ ಪ್ರೇಮದಲಿ ಬೆರೆತವ.ಮುರಳೀಗಾನದಿಂದ ರಸಮಯ ಮಾತುಗಳಿಂದ,ಸ್ನೇಹ ಬಳಗವನ್ನು ಕಟ್ಟಿದವ.ಕೃಷ್ಣ ಆಪದ್ಭಾಂಧವ ಕಷ್ಟದಲ್ಲಿ ಕೈಬಿಡದೆ ತನ್ನ ನೆಚ್ಚಿದವರನ್ನು ಸಲಹಿದವ.ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಿಸಿದ ಮಹಾ ನಾಯಕ.
ಚಾಣಾಕ್ಷತನದಿಂದ,ಜಾಣತನದಿಂದ ಮೋಡಿಮಾಡಿ ಸಮಸ್ಯೆಗಳನ್ನು ಪರಿಹರಿಸಿದ ಲೀಲಾವಿನೋದ ಗಾರುಡಿಗ. ಕೃಷ್ಣನ ಕಥೆಗಳನ್ನು ಕೇಳಿದವರ ಮನದಲ್ಲಿ ಕೃಷ್ಣನ ಬಗ್ಗೆ ಅವನನ್ನು ದೇವರಾಗಿಯೂ,ಆಪ್ತಗೆಳೆಯನಂತೆಯೂ,ಅಬಲೆಯ ಕಾಪಾಡುವ ಆಪ್ತಬಂಧುವಂತೆಯೂ,ಅನ್ಯಾಯಕ್ಕೆ ತಕ್ಕ ಶಾಸ್ತಿಮಾಡುವ ನ್ಯಾಯಾಧೀಶನಂತೆಯೂ ಬಿಂಬಿಸಿವೆ. ಸಭೆಯಲಿ ದ್ರೌಪದಿಯ ಮಾನರಕ್ಷಿಸಿದ ಕೃಷ್ಣ ಸೋದರನಂತೆ ತೋರುವ.
ಕೃಷ್ಣ ರೂಪಗುಣ ಸಂಪನ್ನ.ಸ್ತ್ರೀಯರು ಹಾಗಾಗಿಯೇ ಅವನಿಗೆ ಮಾರು ಹೋಗುತ್ತಿದ್ದರು.ಅಷ್ಟಮ ಸ್ತ್ರೀಯರನ್ನು ವರಿಸಿದ್ದರೂ ಎಲ್ಲರಲ್ಲೂ ಅಮಿತ ಪ್ರೇಮವ ಹಂಚುವ ಜಾಣ ಪತಿಯವನು. ಮಿತ್ರನಾಗಿ ಬಡ ಸುಧಾಮನನು ಉಪಚರಿಸಿದ ಕೃಷ್ಣ ಇಡೀ ಜಗತ್ತಿಗೇ ಮಾದರಿ.ಸ್ನೇಹವೆಂದರೆ ಕೃಷ್ಣ ಸುಧಾಮರದು ಎಂಬ ಮಾತಿದೆ.
ಪಾಂಡವ ಪಕ್ಷಪಾತಿ ಎಂದು ಕೃಷ್ಣನನು ಕರೆಯುವರು. ಕೌರವರ ದಬ್ಬಾಳಿಕೆ,ದುರ್ಯೋಧನನ ಗರ್ವ ಅಡಗಿಸಲು,ಧರ್ಮಸ್ಥಾಪನೆ ಮಾಡಲು ಪಾಂಡವರ ಪಕ್ಷವಹಿಸಿ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನಗೆ ಸಾರಥಿಯಾಗಿ,ಸ್ವಜನರಲಿ ಯುದ್ಧ ಮಾಡಲು ಒಲ್ಲೆನೆಂದ ಅರ್ಜುನಗೆ ಗೀತೋಪದೇಶ ಮಾಡಿದ.ಪ್ರತಿ ಹೆಜ್ಜೆಗೂ ನ್ಯಾಯವನ್ನು ಬಿಡದಲೆ ಸತ್ಯಕ್ಕೆ ಜಯಸಿಗುವಂತೆ ಮಾರ್ಗದರ್ಶನ ನೀಡಿದ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಮೋಸಕ್ಕೆ ಹೇಗೆ ಉತ್ತರ ಕೊಡಬೇಕು ಎಂಬುದನ್ನು ಕಲಿಸಿದ ಲೀಲಾ ನಾಟಕ ಸೂತ್ರಧಾರ.
ಮಹಾವಿಷ್ಣುವೇ ನರನಂತೆ ಧರಣಿಯಲಿ ಅವತಾರವೆತ್ತಿ,ಲೋಕಕ್ಕೆ ಭಗವದ್ಗೀತೆಯ ಅನುಪಮ ಉಪದೇಶಕೊಟ್ಟು, ವಿಶ್ವರೂಪ ದರ್ಶನದ ಮಹಾ ಸ್ವರೂಪ ಪರಿಚಯಿಸಿದ ಜನಾರ್ಧನ ಜಗನ್ನಾಥ. ಸುದರ್ಶನ ಚಕ್ರದಿಂದ ಅನ್ಯಾಯವನ್ನು ತರಿದ ಶ್ರೀಹರಿ.ಶ್ರೀಕೃಷ್ಣನ ಮಹಿಮೆ ಕೊಂಡಾಡಲು ಆದಿಶೇಷನ ನಾಲಿಗೆಯೇ ಸಾಲದು,ಹಾಗಿರುವಲ್ಲಿ ನಮ್ಮಂತಹ ಹುಲು ಮಾನವರಿಗೆ ಸಾಧ್ಯವೇ.ಸದಾ ಅವನ ನಾಮಸ್ಮರಣೆಯ ಭಾಗ್ಯ ಸಿಗಲಿ,ಎಂದು ಶ್ರೀ ಕೃಷ್ಣನಲಿ ಬೇಡಬೇಕಷ್ಟೆ.
ಗೀತೆಯ ಸಾರ
“ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ. ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ.ಆಗಲಿರುವುದೂ ಸಹ ಒಳ್ಳೆಯದೇ ಆಗಲಿದೆ .ರೋಧಿಸಲು ನೀನೇನು ಕಳೆದುಕೊಂಡಿರುವೆ. ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು. ನಾಶವಾಗಲು ನೀನು ಮಾಡಿರುವುದಾದರೂ ಏನು. ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ಅರ್ಪಿಸಿದರು ಇಲ್ಲಿಗೇ ಅರ್ಪಿಸುವೆ. ನಿನ್ನೆ ಬೇರಾರದ್ದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ ಬದಲಾವಣೆ ಜಗದ ನಿಯಮ.
ಭಗವಾನ್ ಶ್ರೀಕೃಷ್ಣ
ಈ ಮೇಲಿನ ಗೀತೆಯ ಸಾರ ಎಲ್ಲರಿಗೂ ಪ್ರೇರಣೆ.

ಅಪರ್ಣಾದೇವಿ