ಕೋಲ್ಕತಾ: ಹಾಲಿ ಚಾಂಪಿಯನ್ ಕೆಕೆಆರ್‌ಗೆ 7 ವಿಕೆಟ್ ಸೋಲುಣಿಸಿದ ಆರ್‌ಸಿಬಿ 18ನೇ IPL ಪಂದ್ಯಾವಳಿಯನ್ನು ಅಧಿಕಾರಯುತವಾಗಿ ಆರಂಭಿಸಿದೆ. ರಜತ್ ಪಾಟಿದಾರ್ ನಾಯಕತ್ವಕ್ಕೂ ಗೆಲುವಿನ ಆರಂಭ ಲಭಿಸಿತು.
ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್ 8 ವಿಕೆಟಿಗೆ 174 ರನ್ ಗಳಿಸಿದರೆ, ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಆರ್‌ಸಿಬಿಗೆ ಸಾಲ್ಟ್-ಕೊಹ್ಲಿ ಪ್ರಚಂಡ ಆರಂಭ ಒದಗಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಸಾಲ್ಟ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಸಿಡಿತಕ್ಕೆ ನಾಂದಿ ಹಾಡಿದರು.
ಪವರ್ ಪ್ಲೇಯಲ್ಲಿ ಬರೋಬ್ಬರಿ 80 ರನ್ ಹರಿದು ಬಂತು. ಇದು ಮೊದಲ 6 ಓವರ್‌ಗಳಲ್ಲಿ ಆರ್‌ಸಿಬಿ ದಾಖಲಿಸಿದ 2ನೇ ಅತ್ಯಧಿಕ ಗಳಿಕೆ. ಸಾಲ್ಟ್ ಆರ್‌ಸಿಬಿ ಪರ ಆಡಿದ ಪದಾರ್ಪಣ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 95 ರನ್ ಒಟ್ಟುಗೂಡಿತು. ಇದರಲ್ಲಿ ಸಾಲ್ಟ್ ಕೊಡುಗೆ 31 ಎಸೆತಗಳಿಂದ 56 ರನ್ (9 ಬೌಂಡರಿ, 2 ಸಿಕ್ಸರ್). 10 ಓವರ್‌ಗಳಲ್ಲಿ ತಂಡದ ಸ್ಕೋರ್ 104ಕ್ಕೆ ಏರಿತು.
ಈ ನಡುವೆ ಕೊಹ್ಲಿ ಕೆಕೆಆರ್ ವಿರುದ್ಧ ಸಾವಿರ ರನ್ ಪೂರ್ತಿಗೊಳಿಸಿದರು. ಕೊಹ್ಲಿ ಕೊಡುಗೆ ಅಜೇಯ 59 ರನ್ (36 ಎಸೆತ, 4 ಬೌಂಡರಿ, 3 ಸಿಕ್ಸರ್). ನಾಯಕ ರಜತ್ ಪಾಟಿದಾರ್ ರಭಸದ ಬ್ಯಾಟಿಂಗ್ ಮೂಲಕ 34 ರನ್ ಬಾರಿಸಿದರು (16 ಎಸೆತ, 5 ಬೌಂಡರಿ, 1 ಸಿಕ್ಸರ್).
ರಹಾನೆ ವೇಗದ ಅರ್ಧ ಶತಕ
ಕೆಕೆಆರ್‌ಗೆ ವೇಗಿ ಜೋಶ್ ಹೇಝಲ್‌ವುಡ್ ಆರಂಭಿಕ ಓವರ್‌ನಲ್ಲೇ ಆಘಾತವಿಕ್ಕಿದರು. ಅಪಾಯಕಾರಿ ಆರಂಭಕಾರ ಕ್ವಿಂಟನ್ ಡಿ ಕಾಕ್ (4) ಅವರನ್ನು 5ನೇ ಎಸೆತದಲ್ಲೇ ಪೆವಿಲಿಯನ್‌ಗೆ ರವಾನಿಸಿದರು. ಇದಕ್ಕೂ ಮುನ್ನ ಅವರು ಈ ಐಪಿಎಲ್‌ನ ಬೌಂಡರಿ ಖಾತೆ ತೆರೆದಿದ್ದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ಸುನೀಲ್ ನಾರಾಯಣ್ ಮತ್ತು ಇದೇ ಮೊದಲ ಸಲ ಕೆಕೆಆರ್ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ ಸೇರಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ಪವರ್ ಪ್ಲೇಯಲ್ಲಿ 65 ರನ್ ಬಂತು. ಈ ಜೋಡಿಯಿಂದ ಕೇವಲ 55 ಎಸೆತಗಳಿಂದ 103 ರನ್ ಒಟ್ಟುಗೂಡಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 174 ರನ್‌ಗಳಿಸಿತು.
ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ 29ಕ್ಕೆ 3 ವಿಕೆಟ್ ಕೆಡವಿ ಹೆಚ್ಚಿನ ಯಶಸ್ಸು ಕಂಡರು. ಹೇಝಲ್‌ವುಡ್ ಪಂದ್ಯದ ಮೊದಲ ಹಾಗೂ ಅಂತಿಮ ಓವರ್‌ಗಳಲ್ಲಿ ವಿಕೆಟ್ ಕೆಡವಿದರು.
ipl