ಅದೊಂದು ದಿನ ರವಿಯ (ಹೆಸರು ಬದಲಿಸಲಾಗಿದೆ) ತಾಯಿ ತೀರಿಕೊಂಡರು ಎಂಬ ಸುದ್ದಿ ಕಿವಿಗೆ ಬಿತ್ತು. ರವಿ ನಮ್ಮ ಸಹೋದ್ಯೋಗಿ. ನನ್ನ ಜೊತೆ ಕ್ನಮ್ಮ ಶಾಖೆಯಲ್ಲಿ ಕೆಲಸ ಮಾಡುತ್ತಿಲ್ಲ. ಹತ್ತಿರದ ಶಾಖೆ ಒಂದರಲ್ಲಿ ಅವನ ಕೆಲಸ. ಆ ಹುಡುಗನ ಸ್ನೇಹಿತ ನನ್ನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆಗಾಗ ಬರುತ್ತಲೇ ಇದ್ದ. ಹಾಗಾಗಿ ನನಗೂ ಪರಿಚಿತನೇ. ಹಾಗೆಂದು ಅವನ ವೈಯಕ್ತಿಕ ವಿಚಾರಗಳೆಲ್ಲ ನನಗೆ ಗೊತ್ತಿಲ್ಲ.
ನಾನು ಬಹುತೇಕ ಆ ಮೂರೂ ಹುಡುಗರ ತಾಯಿಯ ವಯಸ್ಸು. ಪುಟ್ಟ ಹುಡುಗರಲ್ಲವಾ? ಹಾಗಾಗಿ ರವಿ ತುಂಬಾ ತಮಾಷೆಯಾಗಿ ಕಂಡಾಗಲೆಲ್ಲ ಇಡೀ ಮೈಬಗ್ಗಿಸಿ ಕೈಕಟ್ಟಿ ನಮಸ್ಕಾರ ಎಂದು ಹೇಳುವುದುಂಟು.
ನಾನು ಮುಂಬೈಗೆ ಹೋಗುವಾಗ ಆ ಹುಡುಗ ’ಅಲ್ಲಿಗೆ ಹೋದರೆ ನನಗೆ ಒಂದು ಶೂ ಬೇಕು. ತಂದು ಕೊಡಿ ಇಲ್ಲೆಲ್ಲೂ ಸಿಗುವುದಿಲ್ಲ. ದುಡ್ಡು ನಾನು ಕೊಡುತ್ತೇನೆ’ ಎಂದು ಹೇಳಿದ. ಇಲ್ಲಿ ಸಿಗದ್ದು ಅಲ್ಲೇನು ಸಿಗುತ್ತದೆ ಎಂಬ ಅಚ್ಚರಿಯಲ್ಲಿ ಅದನ್ನೇ ಕೇಳಿದ್ದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ ಆಗಲಿ, ಬ್ರಾಂಡೆಡ್ ಐಟಂಗಳ ಬಗೆಗೆಲ್ಲಾ ನಾ ಹೆಚ್ಚು ತಿಳಿದುಕೊಂಡಿಲ್ಲ. ಹಾಗಾಗಿ ಆ ಹುಡುಗ ಹೇಳಿದಾಗ ’ಆಯ್ತು ಬಿಡು ಸಿಕ್ಕರೆ ತಂದು ಕೊಡುತ್ತೇನ” ಎಂದೆ. ಅವನು ಹೇಳಿದ ’ಸಿಕ್ಕರೆ ನಾನು ಇಮ್ಮಿಡಿಯೇಟ್ ಆಗಿ ಫೋನ್ ಪೇ ಮಾಡುತ್ತೇನೆ” ಎಂದು. ನಾ ಹೇಳಿದೆ ’ಒಂದು ಸಾವಿರ ಎರಡು ಸಾವಿರಕ್ಕೆಲ್ಲ ಫೋನ್ ಪೇ ಏನು? ಬಂದ ಮೇಲೆ ಕೊಟ್ಟರಾಗದೇ?’ ಎಂದು. ಅವನು ಹೇಳಿದ್ದ ಶೂ ಮುವ್ವತ್ತು ಸಾವಿರದಿಂದ 40,000 ಆಗುತ್ತದೆ ಎಂದು. ಈಗ ಶಾಕ್ ಆಗುವ ಸರದಿ ನನ್ನದು. ಅಷ್ಟೊಂದು ಬೆಲೆಯ ಶೂ ಗಳಿವೆ ಎಂದು ನನಗೆ ಗೊತ್ತೇ ಇರಲಿಲ್ಲ. ”ಅಷ್ಟೋಂದು ದುಡ್ಡಿನ ಶೂ ಹಾಕುತ್ತೀಯಾ?’ ಎಂಬ ಪ್ರಶ್ನೆಗೆ ’ಮತ್ತಿನ್ನೇನು ? ನನ್ನ ಬಳಿ ಇಂಥವು ಎಷ್ಟೋ ಇವೆ’ ಎಂದ.
’ಮತ್ತೆ ಬಂದ ಸಂಬಳವೆಲ್ಲ ಶೂಗೇ ಹಾಕುವುದಾ?’ ಎಂದು ಕೇಳಿದೆ. ಅವನ ಸ್ನೇಹಿತ ನಗುತ್ತಾ ’ಒಂದು ರಾಕ್ ತುಂಬಾ ಇಂಥವುಗಳೇ ಇವೆ. ಇವನಿಗೆ ಇಂತಹ ಶೂಗಳನ್ನು ಕಲೆಕ್ಟ್ ಮಾಡುವ ಹಾಬಿ ಇದೆ’ ಎಂದ. ನಾ ಹೇಳಿದೆ ’ಕಾಲಿನಲ್ಲಿ ಹಾಕಿಕೊಂಡು ಮನೆಗೆ ಒಳಗೂ ಬಿಡದಂತಹ ಆ ವಸ್ತುವಿಗೆ ಅಷ್ಟೊಂದು ಬೆಲೆ ಏನಕ್ಕೆ ಕೊಡಬೇಕು? ಪಾದವನ್ನು ರಕ್ಷೆ ಮಾಡುವಷ್ಟು ಆದರೆ ಸಾಲದೇ?’ ಎಂದು ಕೇಳಿದೆ. ’ನೀವು ಲಕ್ಷಗಟ್ಟಲೆ ಬಾಳುವ ಚಿನ ವಜ್ರವನ್ನು ಕುತ್ತಿಗೆಯಲ್ಲಿ ಕಿವಿಯಲ್ಲಿ ಕೈಯಲ್ಲಿ ಹಾಕಿಕೊಂಡು ಓಡಾಡುವುದಿಲ್ಲವೇ? ಹಾಗೆಯೇ ಇದು’ ಎಂದ. ’ಅದೆಲ್ಲ ಸರಿಯಪ್ಪಾ ನೀನು ಎಷ್ಟು ಕೊಟ್ಟರೂ ಅದನ್ನು ರೂಮಿನಲ್ಲಿ ತಂದು ವಾರ್ಡ್ರೋಬಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ? ಎಂದು ತಮಾಷೆ ಮಾಡಿದೆ. ನನಗೆ ಯೋಚನೆ ಹತ್ತಿತು. ಈ ಹುಡುಗರು ಮುಂದೆ ಹೇಗೆ ಜೀವನ ನಡೆಸುತ್ತಾರೆ? ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ? ಸೇವ್ ಮಾಡುವ ಆಲೋಚನೆಯೇ ಇಲ್ಲದ ಈ ಹುಡುಗರು ಮುಂದೊಂದು ದಿನ ಕಷ್ಟಕ್ಕೆ ಸಿಲುಕುತ್ತಾರೆನೋ ಎಂದು ಕೂಡ ಅನಿಸಿತು. ಅಪ್ಪ ಅಮ್ಮ ಆದವರು ಸ್ವಲ್ಪ ಬುದ್ಧಿ ಹೇಳಿ ಉಳಿತಾಯ ಮಾಡಿಸಿದ್ದರೆ ಚೆನ್ನಿತ್ತೇನೋ ಎಂದು ಕೂಡಾ ಅನಿಸಿತ್ತು. ಇದು ಅಷ್ಟಕ್ಕೇ ಮುಗಿಯಿತು.
ಈಗ ಅವನ ತಾಯಿ ತೀರಿಕೊಂಡ ಸುದ್ದಿ ಕೇಳಿ ಫೋನ್ ಮಾಡಲೋ ಬೇಡವೋ ಎಂಬ ಯೋಚನೆ. ಕಾರ್ಯಗಳೆಲ್ಲಾ ಮುಗಿಸಿ ಬರಲಿ ಆಮೇಲೆ ಮಾಡುವುದೇ ಸರಿ. ಅವನ ಮನಸ್ಸೂ ಸ್ವಲ್ಪ ತಿಳಿಯಾಗಲಿ ಎಂದು ಸುಮ್ಮನಾದೆ. ಎಲ್ಲ ಕೆಲಸ ಮುಗಿಸಿ ಅವನು ವಾಪಸ್ ಬ್ಯಾಂಕಿಗೆ ಬಂದಿರುವುದು ತಿಳಿದ ದಿನವೇ ಕರೆ ಮಾಡಿದೆ. ’ಸಾರಿ ಕಣಪ್ಪ’ ಎಂದಷ್ಟೇ ಹೇಳಿದೆ. ’ಇರಲಿ ಬಿಡಿ ಮೇಡಂ, ಏನು ಮಾಡಲು ಆಗುತ್ತದೆ’ ಎಂದು ಹೇಳಿದ.
’ಎಷ್ಟು ವಯಸ್ಸಾಗಿತ್ತು’ ಎಂದು ಕೇಳಿದೆ. ’58’ ಎಂದ. ’ಅಯ್ಯೋ ಇಷ್ಟು ಚಿಕ್ಕ ವಯಸ್ಸಿಗೆ ಹೀಗಾಯಿತಾ? ಮುಂಚೆ ಏನಾದರೂ ಪ್ರಾಬ್ಲಮ್ ಇತ್ತಾ?’ ಎಂದು ಕೇಳಿದೆ. ಅದಕ್ಕವನು ’ಇಲ್ಲ ಮೇಡಂ, ಸಡನ್ ಆಗಿ ಲೋ ಬಿಪಿ ಆಗಿದೆ’ ಅಂದ. ನನಗೂ ಪಾಪ ಎನಿಸಿತು ’ಎಂಥ ಕೆಲಸ ಆಯಿತು’ ಅಂದೆ. ’ಮೇಡಂ ಎಂಟು ವರ್ಷದಿಂದ ಮನೆಗೆ ಹೋಗಿರಲಿಲ್ಲ. ಈ ರೀತಿ ಅಮ್ಮನನ್ನು ನೋಡಲು ಹೋದಂತಾಯಿತಲ್ಲ’ ಎಂದ.
’ಎಂಟು ವರ್ಷದಿಂದ ಮನೆಗೆ ಹೋಗಿರಲಿಲ್ಲವಾ? ಯಾತಕ್ಕೆ?’ ಎಂದು ಕೇಳಿದೆ ’ಮನೆಯಲ್ಲಿ ಏನೋ ಗಲಾಟೆ ಮೇಡಂ. ಕೋಪ ಮಾಡಿಕೊಂಡು ಬಂದಿದ್ದೆ. ನಾ ಬ್ಯಾಂಕಿನ ಕೆಲಸಕ್ಕೆ ಸೇರಿದ್ದೂ ಅಮ್ಮನಿಗೆ ಗೊತ್ತಾಗಿದ್ದು ಒಂದು ವರ್ಷದ ನಂತರವೇ. ಅಲ್ಲಿಯ ತನಕ ಬೇರೆ ಎಲ್ಲೆಲ್ಲೋ ಕೆಲಸ ಮಾಡುತ್ತಿದ್ದೆ’ ಎಂದ.
’ಅಮ್ಮನ ಜೊತೆ ಕಾಂಟಾಕ್ಟ್ ಇರಲಿಲ್ವಾ?’ ಎಂದು ಕೇಳಿದೆ. ’ಫೋನ್ ಮಾಡುತ್ತಿದ್ದೆ. ಯಾವಾಗಲಾದರೂ ವಿಡಿಯೋ ಕಾಲ್ ಮಾಡುತ್ತಿದ್ದೆ.’ ಎಂದ. ’ಮತ್ತೆ ಮನೆಗೆ ಯಾಕೆ ಹೋಗುತ್ತಿರಲಿಲ್ಲ? ಎಂಬ ನನ್ನ ಪ್ರಶ್ನೆಗೆ ’ಅಪ್ಪನ ಜೊತೆ ಜಗಳ ಆಡಿದ್ದೆ ಎಂಬ ಉತ್ತರ ಬಂದಿತು.
’ಅಪ್ಪನ ಜೊತೆ ಗಲಾಟೆ ಏನೋ ಸರಿ. ಅಮ್ಮ ಏನು ಮಾಡಿದ್ದರು.? ಅವರಿಗಾಗಿಯಾದರೂ ನೀನು ಹೋಗಬಾರದಿತ್ತಾ?’ ಎನ್ನುವಾಗ ನನ್ನ ಧ್ವನಿ ತುಸು ಗಡುಸಾಯಿತೇನೋ ಅನಿಸಿತು. ’ಮೇಡಂ ಅಮ್ಮ ನಮ್ಮನ್ ಅಷ್ಟೊಂದು ಹಚ್ಚಿಕೊಂಡಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ನಾವು ಮೂರು ಜನ ಗಂಡು ಮಕ್ಕಳು. ನಾನೇ ಮೊದಲು ಹೋಗಿದ್ದು. ಒಬ್ಬರು ಅಹಮದಾಬಾದಲ್ಲಿ ಡಾಕ್ಟರ್ರು. ಇನ್ನೊಬ್ಬರು ಕಲ್ಕತ್ತಾದಲ್ಲಿ ಲೆಕ್ಚರರ್ರು’ ಎಂದೋ ಏನೋ ಹೇಳಿದ.
’ವಿಷಯ ಗೊತ್ತಾದ ಕೂಡಲೇ ನಾನು ಫ್ಲೈಟ್ ಹಿಡಿದು ಹೋದೆ, ಅಲ್ಲಿಯತನಕ ಅಪ್ಪ ಒಂದು ಹನಿ ಕಣ್ಣೀರು ಹಾಕಿರಲಿಲ್ಲ. ನಾನು ಹೋದ ಕೂಡಲೇ ನನ್ನನ್ನು ತಬ್ಬಿಕೊಂಡು ಜೋರಾಗಿ ಅಳಲು ಶುರು ಮಾಡಿದರು.’ ಎನ್ನುವಾಗ ಅವನ ಧ್ವನಿ ತೀರಾ ಮೆತ್ತಗಾಗಿತ್ತು.
’ನೋಡು ಅಪ್ಪನೊಂದಿಗೆ ಗಲಾಟೆ ಮಾಡಿಕೊಂಡು ಮನೆಗೆ ಹೋಗಬಾರದು ಎಂದರೂ ಅಪ್ಪ ನಿನ್ನನ್ನೇ ಅಪ್ಪಿ ತಮ್ಮ ಸಂಕಟವನ್ನು ಹೊರಗೆ ಹಾಕಿಕೊಂಡರಲ್ಲ. ಅಂದ ಮೇಲೆ ಅವರಿಗೂ ನಿನ್ನ ಮೇಲೆ ಪ್ರೀತಿ ಇತ್ತು ತಾನೇ?’ ಎಂದೆ.
’ಹೌದು ಮೇಡಂ. ಅಮ್ಮ ದೇವರ ಫೋಟೋ ಪಕ್ಕ ನನ್ನದು ನಮ್ಮ ಅಣ್ಣಂದಿರದು ಫೋಟೋಗಳನ್ನು ಇಟ್ಟು ದಿನವೂ ಎದ್ದ ಕೂಡಲೇ ನೋಡುತ್ತಿದ್ದರಂತೆ. ಅಮ್ಮನಿಗೆ ನಮ್ಮನ್ನು ನೋಡಬೇಕೆಂದು ಆಸೆ ಇದೆ ಎಂದು ತಿಳಿದಿದ್ದರೆ ಅಥವಾ ಒಂದು ಸರಿ ಮನೆಗೆ ಬಾರೋ ನೋಡಬೇಕು ಎಂದು ಹೇಳಿದ್ದಿದ್ದರೆ ನಾನು ಬಿಟ್ಟ ಕೆಲಸ ಬಿಟ್ಟು ಓಡಿಹೋಗುತ್ತಿದ್ದೆ. ಅಲ್ಲಿಗೆ ಹೋದಮೇಲೆಯೇ ನನಗೆ ಗೊತ್ತಾಗಿದ್ದು ಅಮ್ಮನಿಗೆ ನಮ್ಮನ್ನು ನೋಡುವ ಆಸೆ ಇತ್ತು ಎಂದು’ ಎಂದು ಕಟ್ಟಿದ ದನಿಯಲ್ಲಿ ಹೇಳಿದ.
ನನಗೆ ತಡೆಯಲಾರದಷ್ಟು ದುಃಖವಾಯಿತು. ಅವನನ್ನು ಬಯ್ಯಲು ಶುರು ಮಾಡಿದೆ. ’ ಅಮ್ಮ ಅಮ್ಮನೇ ಕಣೋ. ನಿಮ್ಮನ್ನು ನೋಡಬೇಕೆಂದು ಎಷ್ಟು ಆಸೆ ಪಡುತ್ತಿದ್ದಳೋ ಕಾಣೆ. ಯಾರ ಮೇಲಿನ ಕೋಪಕ್ಕೆ ಅಮ್ಮನನ್ನು ನೋಯಿಸಿದೆಯಲ್ಲಾ ’ಅಮ್ಮನ ಬೆಲೆ ನಿಮಗೇನೋ ಗೊತ್ತು?’ ಎಂದು ನಾನೇ ಅಳಲು ಶುರು ಮಾಡಿದೆ. ಅವನು ಬೇರೆ ರಾಜ್ಯದ ಹುಡುಗ. ಆದ್ದರಿಂದ ಅವನಿಗೆ ವ್ಯಾಕರಣ ಅಷ್ಟು ಗೊತ್ತಿಲ್ಲ. ಮೇಡಂ ಎನ್ನುವಾಗ ಬಹುವಚನ ಬಳಸಬೇಕೆಂದು ಕೂಡಾ ಗೊತ್ತಿಲ್ಲ ’ಪ್ಲೀಸ್ ಅಳಬೇಡ ಮೇಡಂ ಪ್ಲೀಸ್ ಅಳಬೇಡ. ನಾನೇ ಸಂಜೆ ಬರುತ್ತೇನೆ’ ಎಂ.
ಅಷ್ಟರದಲ್ಲಿ ಆಗಲೇ ನನ್ನ ಕಣ್ಣೀರು ಕೆನ್ನೆ ತೋಯಿಸಿ ಮೈಮೇಲೆ ಬೀಳುತ್ತಿತ್ತು. ಬೇರೆ ಕಡೆ ತಿರುಗಿಕೊಂಡಿದ್ದರೂ ನನ್ನ ಸಹೋದ್ಯೋಗಿಗಳಿಗೆ ನಾನು ಅಳುತ್ತಿದ್ದುದು ಕೇಳಿಸುತ್ತಿತ್ತು. ಏನಾಯಿತು ಎಂದು ಇಬ್ಬರು ಕೇಳಿದರು. ಕಣ್ಣೊರೆಸಿಕೊಂಡು ಹೀಗೆ ಹೀಗೆ ಎಂದು ಹೇಳಿದೆ.
ಮತ್ತೆ ಬೇರೆ ಗ್ರಾಹಕರು ಬಂದದ್ದರಿಂದ ನಾನು ಎಲ್ಲವನ್ನು ಮರೆತು ಕೆಲಸದಲ್ಲಿ ಮುಳುಗಿ ಹೋದೆ.
ಸಂಜೆ ರವಿ ಬಂದಾಗ ಅವನನ್ನು ಕಂಡು ಸಿಟ್ಟು ಬಂತು. ಸಾಮಾನ್ಯವಾಗಿ ನನಗೆ ಸಿಟ್ಟು ಬರುವುದಿಲ್ಲ. ಇದೂ ಕೂಡ ಸಾತ್ವಿಕ ಸಿಟ್ಟಷ್ಟೇ ನಿಜವಾಗಿಯೂ ಆಗ ಬಾಂದಿದ್ದು ಒಂದು ರೀತಿಯ ಅಸಹಾಯಕ ಸಿಟ್ಟು ಎನ್ನಬಹುದು.
’ಹೇಳು ಯಾಕೆ 8 ವರ್ಷ ಹೋಗಲಿಲ್ಲ?’ ಅವನು ಸುಮ್ಮನೆ ಕೈಕಟ್ಟಿಕೊಂಡು ನಿಂತಿದ್ದ. ’ನಿನಗೆ ಮಕ್ಕಳಾಗಿ ಅವರು ನಿನಗೆ ಹೀಗೆ ಮಾಡಿದಾಗಲೇ ನಿನಗೆ ಬುದ್ಧಿ ಬರುವುದು. ಬಿಸಿರಕ್ತ ಈಗ ಏನು ಗೊತ್ತಾಗುವುದಿಲ್ಲ. ನಿಮ್ಮ ಮಕ್ಕಳು ಹೀಗೆ ಮಾಡಿದರೆ ಆಗ ಗೊತ್ತಾಗುತ್ತೆ’ ಎಂದು ತುಸು ಏನಿದೆ ಧ್ವನಿಯಲ್ಲಿ ಹೇಳಿದೆ.
’ನೋಡು ಈಗ ಬೇಕೆಂದರೂ ಸಿಗುತ್ತಾರಾ ನಿಮ್ಮಮ್ಮ? ಮುಂದೆ ಪಶ್ಚಾತ್ತಾಪ ಪಡ್ತೀ’ ಎಂದೆ. ಅದಕ್ಕೆ ಅವನು ’ಈಗಾಗಲೇ ಪಶ್ಚಾತಾಪ ಆಗುತ್ತಿದೆ. ಇಡೀ ಜನ್ಮದಲ್ಲಿ ನನ್ನ ಉಸಿರಿರುವವರೆಗೂ ಈ ಪಶ್ಚಾತಾಪ ಮುಗಿಯುವುದಿಲ್ಲ, ಸದಾ ಕೊರೆಯುವ, ಚಿಂತೆ ಮಾಡುವ ವಿಷಯ ಆಗಿ ಬಿಡ್ತು’ ಎಂದ. ನಮ್ಮಲ್ಲಿ ಫ್ಯಾನ್ ಹಾಕಲು ಸ್ವಿಚ್ ತುಂಬಾ ದೂರ ಇದೆ. ಅದರ ಮುಂದೆ ರಾಕ್ ಇರುವುದರಿಂದ ಸ್ವಿಚ್ ನನ್ನಂಥವರ ಕೈಗೆಟಕುವುದಿಲ್ಲ. ಸ್ವಿಚ್ ಹಾಕಲು ಒಂದು ಕೋಲನ್ನು ಇಟ್ಟಿರುತ್ತೇವೆ. ಅದನ್ನು ನೋಡಿ ’ ಆ ಕೋಲನ್ನು ಕೊಡು’ ಎಂದು ಕೇಳಿದೆ. ’ಯಾಕೆ ಹೊಡೆಯಬೇಕಾ? ಹೊಡಿ ಮೇಡಂ. ನೀವು ಹೊಡೆದರೂ ನಾನು ಮಾಡಿದ ಪಾಪಕ್ಕೆ ಶಿಕ್ಷೆ ಕಡಿಮೆ’ ಎಂದ. ನನಗೇನೂ ಹೊಡೆಯಬೇಕೆಂಬ ಉದ್ದೇಶ ಇರಲಿಲ್ಲ. ಅವನಿಗೆ ಸೀರಿಯಸ್ ನೆಸ್ ತಿಳಿಯಲಿ ಎಂದಷ್ಟೇ ಹಾಗೆ ಹೇಳಿದ್ದು.
’ತಾಯಿಯಾಗುವ ಸುಖ, ತಾಯಿಯಾಗುವ ಕಷ್ಟ ತಾಯಿಗೆ ಮಾತ್ರ ಗೊತ್ತು, ನಿನಗೇನು ಗೊತ್ತು’ ಎಂದು ಸಿಟ್ಟಿನೊಂದಿಗೆ ಮತ್ತೆ ಕಣ್ಣೀರಾದೆ. ಯಾಕೆ ನನಗೆ ಈ ವಿಷಯಕ್ಕೆ ಅಷ್ಟು ಬಾರಿ ದುಃಖ ಆಯಿತೋ ಗೊತ್ತಿಲ್ಲ. (ಇದನ್ನು ಬರೆಯುವಾಗ ಕೂಡ ಗಂಟಲು ಕಟ್ಟಿ ಕಣ್ಣು ತೇವವಾಗಿದೆ).
’ಮೇಡಂ ನೋ್ಡಿ ಎಂದು ಒಂದು ಫೋಟೋ ತೋರಿಸಿದ. ಯಾರೋ ಗಂಡಸು ಮುದುರಿ ಮಲಗಿದ್ದು ಕಂಡಿತು. ಯಾರಿದು ಎಂದೆ. ನಮ್ಮಪ್ಪ ಅಂದ. ನಾನು ಹುಬ್ಬೇರಿಸಿದೆ. ’ಅಪ್ಪ ನಮ್ಮ ತಾಯಿಯ ಸೀರೆಯನ್ನು ನೆಲದ ಮೇಲೆ ಹಾಕಿಕೊಂಡು ಮಲಗುತ್ತಿದ್ದಾರೆ. ಅಮ್ಮ ಹೋದ ದಿನದಿಂದಲೂ ಅಪ್ಪ ಹೀಗೆ ಅಮ್ಮನ ಸೀರೆಯ ಮೇಲೆ ಮುದುರಿ ಮಲಗುತ್ತಿದ್ದಾರೆ’ ಎಂದ. ಏಕೋ ಮನಸು ತೀರಾ ಆರ್ದ್ರವಾಯಿತು.
’ನಾನು ಈಗ ಗೆಳೆಯರ ಜೊತೆ ಮನೆ ಶೇರ್ ಮಾಡಿದ್ದೇನಲ್ವಾ. ಈಗ ಒಂದು ರೂಮಿನ ಮನೆಯೊಂದನ್ನು ನೋಡಿ ಅಪ್ಪನನ್ನು ಕರೆತಂದು ನನ್ನ ಜೊತೆ ಇಟ್ಟುಕೊಳ್ಳುತ್ತೇನೆ’ ಎಂದ. ಅಪ್ಪನ ಮೇಲಿನ ಕೋಪಕ್ಕೆ ಅಮ್ಮನನ್ನು ಭೇಟಿ ಮಾಡಲು ಹೋಗದ ಹುಡುಗ ಅಮ್ಮ ಸತ್ತ ಮೇಲೆ ಅಪ್ಪನನ್ನು ಕರೆದು ತಂದು ತನ್ನ ಬಳಿಗೆ ಇಟ್ಟುಕೊಳ್ಳುವ ನಿರ್ಧಾರ ಮಾಡಿದ್ದು ಆಶ್ಚರ್ಯವಲ್ಲದಿದ್ದರೂ ಬದುಕು ಕಲಿಸುವ ಪಾಠ ಎನಿಸಿತು.
ಒಂದನ್ನು ಕಳೆದುಕೊಂಡು ಮೇಲೆ ಅದರ ಬೆಲೆ ಗೊತ್ತಾಯಿತಲ್ಲಾ.. ಇನ್ನೊಂದನ್ನು ಕಳೆದುಕೊಳ್ಳಬಾರದು ಎಂಬ ಎಚ್ಚರಿಕೆಯೂ ಬಂದಿದೆಯಲ್ಲಾ ಎಂದು ತುಸು ಸಮಾಧಾನವಾದರೂ ಕಳೆದುಕೊಂಡಿದ್ದು ಮತ್ತೆ ಬಾರದಲ್ಲ ಎನ್ನುವ ದುಃಖ ಬಾಧಿಸದೆ ಇರುತ್ತದೆಯೇ?
ನನ್ನ ಕಣ್ಣೀರನ್ನು ನೋಡಿ ’ಮೇಡಂ ಅಳಬೇಡ. ನನ್ನ ತಪ್ಪು ತಿದ್ದು ಕೊಳ್ಳುತ್ತೇನೆ. ಅಪ್ಪ ಅಮ್ಮ ಎಂದರೆ ಏನು ಎಂದು ನನಗೆ ಗೊತ್ತಾಗಿದೆ. ಆದರೆ ತುಂಬಾ ಮುಂದೆ ಬಂದಿದ್ದೇನೆ. ಬದುಕನ್ನು ರಿವೈಂಡ್ ಮಾಡಲು ಆಗುವುದಿ.ಲ್ಲ ಮುಂದೆ ಸರಿಯಾಗಿ ಇರುತ್ತೇನೆ’ ಎಂದ. ತುಂಬಾ ಹುಡುಗಾಟಕೆಯ ಹುಡುಗ ಕೇವಲ 15 ದಿನಗಳಲ್ಲಿ ಎಷ್ಟೊಂದು ಪ್ರಬುದ್ಧನಾಗಿದ್ದಾನೆ ಎಂದು ಆಶ್ಚರ್ಯವಾಯಿತು/
ಬದುಕೆಂದರೆ ಹಾಗೇನೇ. ಅದೊಂದು ದೊಡ್ಡ ಗುರು. ಯಾರಿಗೂ ಪಾಠ ಕಲಿಸದೇ ಬಿಡದು.
ಇದೇ ಸಂದರ್ಭದಲ್ಲಿ ಮತ್ತೊಬ್ಬ ಗ್ರಾಹಕನ ನೆನಪಾಯಿತು. ರಾಮರಾಜು (ಹೆಸರು ಬದಲಿಸಲಾಗಿದೆ) ಪದೇ ಪದೇ ಚಿನ್ನದ ಸಾಲಕ್ಕೆ ಬರುತ್ತಿದ್ದರು. ಏಕೆಂದರೆ ಕೇಳಿದಾಗ ಹುಟ್ಟಿದ ಮಗುವಿಗೆ ಶ್ವಾಸಕೋಶ ಸರಿಯಾಗಿ ಬೆಳೆದಿಲ್ಲ.
ಹಾಗಾಗಿ ಆಸ್ಪತ್ರೆಯಲ್ಲಿ ಇದೆ. ತುಂಬಾ ಚೂಟಿಯಾಗಿದ್ದಾಳೆ ಮೇಡಂ. ಕಣ್ಣು ಬಿಟ್ಟು ನನ್ನನ್ನು ಗುರುತಿಸುತ್ತಾಳೆ, ಕೈ ಕಾಲು ಆಡಿಸುತ್ತಾಳೆ, ಆದರೆ ಶ್ವಾಸಕೋಶ ಬೆಳೆದಿಲ್ಲ ಎಂದು ಡಾಕ್ಟರ್ ಅಲ್ಲೇ ಇರಿಸಿಕೊಂಡಿದ್ದಾರೆ’ ಎಂದಿದ್ದರು.
ಮೈಸೂರಿನ ದೊಡ್ಡ ಆಸ್ಪತ್ರೆ ಅದು. ’ನಿಮ್ಮಾಕೆ ಕೂಡ ಆಸ್ಪತ್ರೆಯಲ್ಲಿಯೇ ಇದ್ದಾರಾ?’ ಎಂದು ಕೇಳಿದೆ.
’ಇಲ್ಲ ಮೇಡಂ, ದಿನಕ್ಕೆ ಮೂರು ನಾಲ್ಕು ಬಾರಿ ಹೋಗಿ ಫೀಡ್ ಮಾಡಿ ಬರುತ್ತಾರೆ. ಹೆಂಡತಿ ಬಾಣಂತಿಯದರಿಂದ ಬಾಣಂತಿ ಊಟಕ್ಕೆಂದು ಹತ್ತಿರದಲ್ಲೇ ಏಳು ಸ್ಕ್ವೇರ್ನ ಒಂದು ಪುಟ್ಟ ಮನೆ ಬಾಡಿಗೆಗೆ ತೆಗೆದುಕೊಂಡಿದ್ದೇನೆ. ಅದಕ್ಕೇನೇ ರೂ.33,000 ತಿಂಗಳಿಗೆ. ಆಸ್ಪತ್ರೆ ಹತ್ತಿರ ಎಂದು ತೀರ ಹೆಚ್ಚಿನ ಮೊತ್ತವನ್ನು ಚಾರ್ಜ್ ಮಾಡುತ್ತಾರೆ. ಎಲ್ಲವೂ ದಂಧೆ’ ಎಂದರು.
’ಆ ಮಗುವಿನ ಟ್ರೀಟ್ಮೆಂಟ್ ಗೆ ಎಂದು ಈ ನಾಲ್ಕು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ನನ್ನ ಮಗಳು ಉಳಿದರೆ ಸಾಕು ನಮಗೆ’ ಎಂದಿದ್ದರು. ಅಯ್ಯಪ್ಪಾ ಹುಟ್ಟಿದ ನಾಲ್ಕು ತಿಂಗಳಿಗೆ 50 ಲಕ್ಷ ಖರ್ಚಾಗಿದೆ. ಮಗು ಸಾಮಾನ್ಯವಾಗಿದ್ದಿದ್ದರೆ ಅದರ ವಿದ್ಯಾಭ್ಯಾಸಕ್ಕೋ, ಮದುವೆಗೋ ಆಗುತ್ತಿತ್ತು ಎಂದುಕೊಂಡೆ ಮನಸ್ಸಿನಲ್ಲಿ.
ರವಿಯ ಘಟನೆ ನಡೆದು ಎರಡು ದಿನಕ್ಕೆ ರಾಮರಾಜುವಿನ ಮಗು ತೀರಿಕೊಂಡ ವಿಷಯ ತಿಳಿಯಿತು. ನಾಲ್ಕುವರೆ ತಿಂಗಳ ಒಟ್ಟು ಆಸ್ಪತ್ರೆ ಖರ್ಚು 72 ಲಕ್ಷವಾಗಿತ್ತು. ತಮ್ಮ ಇಡೀ ಆಸ್ತಿ ಮಾರಿಯಾದರೂ ಮಗುವನ್ನು ಉಳಿಸಿಕೊಳ್ಳಬೇಕು ಎನ್ನುವ ತಾಯಿ ತಂದೆಯರ ಬಯಕೆ ಕೈಗೂಡದೇ ಹೋಯಿತು.
ಅದಕ್ಕೇ ಹೇಳುವುದು ತಂದೆ ತಾಯಿಯರ ಪ್ರೀತಿ ಎಂದು. ತಾವು ಹೊಟ್ಟೆ ಬಟ್ಟೆ ಕಟ್ಟಿಯಾದರೂ ತಮ್ಮ ಎಲ್ಲ ಮಕ್ಕಳನ್ನು ಸಾಕುತ್ತಾರೆ. ಆದರೆ 10 ಮಕ್ಕಳಿದ್ದರೂ ಒಂದು ಜೊತೆ ತಂದೆ ತಾಯಿಯನ್ನು ಸಾಕುವುದು ಮಕ್ಕಳಿಗೆ ಭಾರವಾಗಿ ಬಿಡುತ್ತದೆ.
ಇಂತಹ ಘಟನೆಗಳಿಂದಲಾದರೂ ನಾವು ಮನುಷ್ಯರು ಕಣ್ ತೆರೆಯುವಂತಾದರೆ ಸಾರ್ಥಕ.

ಡಾ. ಶುಭಶ್ರೀ ಪ್ರಸಾದ್