- ಹಮಾಸ್ ನಾಯಕನ ಪುತ್ರ ಸೇರಿ 6 ಮಂದಿ ಬಲಿ, ಟಾಪ್ ಲೀಡರ್ ಪಾರು
ಕತಾರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ಹಮಾಸ್ ಪ್ರಮುಖ ನಾಯಕ ಬದುಕುಳಿದರೂ, ಅವರ ಪುತ್ರ ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಗುಂಪು ಅಧಿಕೃತವಾಗಿ ಈ ಮಾಹಿತಿಯನ್ನು ದೃಢಪಡಿಸಿದೆ.
ದಾಳಿಯ ಹಿನ್ನೆಲೆ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾ ಯುದ್ಧ ನಿಲ್ಲಿಸಬೇಕು, ಸೈನ್ಯ ಹಿಂಪಡೆಯಬೇಕು ಹಾಗೂ ಗಾಜಾವನ್ನು ನೋಡಿಕೊಳ್ಳಲು ಹೊಸ ಸಮಿತಿ ರಚಿಸಬೇಕು ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಈ ದಾಳಿ ನಡೆಸಿದೆ.
ಕದನ ವಿರಾಮ ಮತ್ತು ಯುದ್ಧ ಕೈದಿಗಳ ಕುರಿತು ಮಾತುಕತೆ ನಡೆಯುತ್ತಿದ್ದ ಸಮಯದಲ್ಲೇ ದಾಳಿ ನಡೆದಿರುವುದರಿಂದ, ಹಮಾಸ್ ಗುಂಪು ಇದನ್ನು “ಆಕ್ರಮಣಕಾರಿ ಅಪರಾಧ ಕೃತ್ಯ” ಎಂದು ಖಂಡಿಸಿದೆ. ಇದು ಶಾಂತಿ ಒಪ್ಪಂದದ ಸಾಧ್ಯತೆಗಳನ್ನು ಹಾಳುಮಾಡುವ ಕಾರ್ಯವಾಗಿದ್ದು, ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಪ್ಯಾಲೆಸ್ತೀನ್ ಬಂಡುಕೋರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದಾಳಿಯಲ್ಲಿ ಹಮಾಸ್ ಹಿರಿಯ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಒಬ್ಬ ಭದ್ರತಾ ಅಧಿಕಾರಿ, ಒಬ್ಬ ಸಹಾಯಕ ಸೇರಿದಂತೆ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ ರಾತ್ರಿ ಇಸ್ರೇಲ್ ರಕ್ಷಣಾ ಪಡೆ (IDF) ಮತ್ತು ಭದ್ರತಾ ಸಂಸ್ಥೆ (ISA) ಜಂಟಿಯಾಗಿ ದೋಹಾದಲ್ಲಿ ಹಮಾಸ್ ಹಿರಿಯ ನಾಯಕರ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತ್ತು. ದಾಳಿಯ ಸಮಯದಲ್ಲಿ ಹಮಾಸ್ ನಿಯೋಗವು ಕದನ ವಿರಾಮದ ಕುರಿತು ಚರ್ಚಿಸುತ್ತಿದ್ದರೆಂದು ವರದಿಯಾಗಿದೆ.ಇದನ್ನು ಓದಿ –ಸಿ.ಪಿ. ರಾಧಾಕೃಷ್ಣನ್ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆ
ಇಸ್ರೇಲ್ ಸೇನೆಯ ಪ್ರತಿಕ್ರಿಯೆ
ಇಸ್ರೇಲ್ ಸೇನೆಯು ಎಕ್ಸ್‌ನಲ್ಲಿ (Twitter) ಪ್ರಕಟಣೆ ನೀಡಿ, “ನಿಖರವಾದ ಶಸ್ತ್ರಾಸ್ತ್ರಗಳನ್ನು ಬಳಸಿ ದೋಹಾದ ನಾಗರಿಕರಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಾಗಿದೆ. ಹಮಾಸ್ ನಾಯಕರ ವಿರುದ್ಧದ ದಾಳಿಗಳು ಮುಂದುವರಿಯುತ್ತವೆ” ಎಂದು ಹೇಳಿದೆ.