ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಧೋರಣೆಯನ್ನು ಗಮನಿಸಿದರೆ, ಜೆಡಿಎಸ್ ಪಕ್ಷವು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷದ ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ನೇರವಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸಬಹುದು ಮತ್ತುಈಗಿರುವಂತೆ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲವೂ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜು, ಅವರ ಪತ್ನಿ ಗೌರಮ್ಮ, ಚಂದ್ರಶೇಖರ್ ಹಾಗೂ ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡ ಬಳಿಕ ಅವರು ಮಾತನಾಡಿದರು.
ಗೋವಿಂದರಾಜು ಅವರು ಪಾಲಿಕೆ ಮಾಜಿ ಸದಸ್ಯರಾಗಿದ್ದು, ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಬಿಜೆಪಿ–ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ನಮ್ಮದು ಜಾತ್ಯತೀತ ಸಿದ್ಧಾಂತವಾಗಿದ್ದು, ಅದಕ್ಕಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಪಾರ ಆಸಕ್ತಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ ಅವರು, ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106 ಹಾಗೂ ಬೆಂಗಳೂರು ಪೂರ್ವದಲ್ಲಿ 78 ಸೇರಿ ಒಟ್ಟು 779 ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಅರ್ಜಿ ಪಡೆದವರು ಇದೇ 10ರೊಳಗೆ ಅರ್ಜಿ ಸಲ್ಲಿಸಿದರೆ, ಪಕ್ಷದಿಂದ ತಂಡವನ್ನು ಕಳುಹಿಸಿ ವರದಿ ಪಡೆಯಲಾಗುತ್ತದೆ. ವಾರ್ಡ್ ಮಟ್ಟದಲ್ಲಿ ಯಾರು ಕೆಲಸ ಮಾಡಿದ್ದಾರೆ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂಬುದನ್ನು ಪರಿಶೀಲಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಪಕ್ಷದ ನಾಯಕರಿಗೆ ಸೂಚಿಸಿದರು.
ಬೆಂಗಳೂರು ನಗರದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದ್ದು, ರಸ್ತೆ ನಿರ್ಮಾಣ ನಡೆಯುತ್ತಿದೆ. ಖಾತಾ ಪರಿವರ್ತನೆ ಹಾಗೂ ಆಸ್ತಿ ದಾಖಲೆಗಳ ಸರಿಪಡಿಸುವ ಕೆಲಸಗಳನ್ನು ನೋಡಿದರೆ, ನಮಗೆ ಭವಿಷ್ಯವಿಲ್ಲ ಎಂದು ಬಿಜೆಪಿ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಇದನ್ನು ಓದಿ –KSRTC ಪ್ರತಿಷ್ಠಿತ ಬಸ್‌ಗಳ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿ
ಚಾಮರಾಜಪೇಟೆ ಇತಿಹಾಸವಿರುವ ಕ್ಷೇತ್ರವಾಗಿದ್ದು, ಎಲ್ಲರನ್ನು ಸಮಾನವಾಗಿ ಜೊತೆಗೂಡಿ ಮುಂದೆ ಕರೆದೊಯ್ಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಬಯಸುವವರು ನಮ್ಮ ಸಂಪರ್ಕದಲ್ಲಿದ್ದಾರೆ. ಪಾಲಿಕೆ ಚುನಾವಣೆಗೂ ಮುನ್ನ ಅವರೆಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು.








