ಬೆಂಗಳೂರು: ಜಿಬಿಎ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಯಾಗಿ ಸ್ಪರ್ಧಿಸುವ ಆಸೆ ಜೆಡಿಎಸ್‌ಗೆ ಇದೆ. ಆದರೆ ಈ ಕುರಿತು ಬಿಜೆಪಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಎನ್‌ಡಿಎ ಮೈತ್ರಿ ಕೂಟದ ಭಾಗವಾಗಿದ್ದೇವೆ. ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಬೇಕು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅಂತಿಮ ನಿರ್ಧಾರ ಕೈಗೊಳ್ಳಬೇಕು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಜೆಡಿಎಸ್ ಪ್ರಾದೇಶಿಕ ಪಕ್ಷ. ಹೀಗಾಗಿ ಬಿಜೆಪಿ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ ಬಳಿಕ ನಾವು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.
ಸಂಸತ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿಯಾಗಿ ಸ್ಪರ್ಧಿಸುತ್ತಿವೆ. ಆದರೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೀಟುಗಳ ಸಂಖ್ಯೆ ಕಡಿಮೆ ಇರುವುದರಿಂದ ಹಂಚಿಕೆ ಪ್ರಕ್ರಿಯೆ ಸವಾಲಾಗಬಹುದು. ಆದರೂ ಮೈತ್ರಿಯಾಗಿ ಸ್ಪರ್ಧಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.ಇದನ್ನು ಓದಿ –ತ್ರಿಬಲ್ ರೈಡಿಂಗ್ ದುರಂತ – ಇಬ್ಬರ ದುರ್ಮರಣ
ಕುಮಾರಸ್ವಾಮಿ ಅವರು ದೆಹಲಿಯಿಂದ ವಾಪಸ್ಸಾದ ಬಳಿಕ ಅಂತಿಮ ರೂಪುರೇಷೆ ನಿರ್ಧಾರವಾಗುತ್ತದೆ. ಅವರು ಕೇಂದ್ರದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿ ಬರುತ್ತಾರೆ. ಅವರ ಚರ್ಚೆಯ ಬಳಿಕ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.








