ನವದೆಹಲಿ: ದೇಶಾದ್ಯಂತ ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚುತ್ತಿರುವ ಕಲಬೆರಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ಪರವಾನಗಿ ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಹೊಸ ನಿಯಮದ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಧಿಕೃತ ನೋಂದಣಿ ಅಥವಾ ಪರವಾನಗಿ ಇಲ್ಲದೆ ಹಾಲಿನ ವ್ಯಾಪಾರ ನಡೆಸಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್ಎಸ್ಎಸ್ಎಐ ಎಚ್ಚರಿಕೆ ನೀಡಿದೆ.
ಇನ್ಮುಂದೆ ಹಾಲಿನ ವ್ಯಾಪಾರ ಮಾಡುವ ಪ್ರತಿಯೊಬ್ಬರೂ ಎಫ್ಎಸ್ಎಸ್ಎಐಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ.
ಆದರೆ ನೋಂದಾಯಿತ ಡೈರಿ ಸಹಕಾರಿ ಸಂಘಗಳಿಗೆ ಹಾಲು ಪೂರೈಸುವ ರೈತರು ಅಥವಾ ಪಶುಪಾಲಕರು ಪ್ರತ್ಯೇಕವಾಗಿ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ. ಅವರು ಈಗಾಗಲೇ ಸಹಕಾರಿ ಸಂಘಗಳ ವ್ಯಾಪ್ತಿಗೆ ಬರುವುದರಿಂದ ಈ ವಿನಾಯಿತಿ ನೀಡಲಾಗಿದೆ.
ಹಾಲಿನ ಗುಣಮಟ್ಟ ಕಾಪಾಡಲು ಆಹಾರ ಸುರಕ್ಷತಾ ಅಧಿಕಾರಿಗಳು ಕಾಲಕಾಲಕ್ಕೆ ಡೈರಿಗಳು ಮತ್ತು ಶೈತ್ಯೀಕರಣ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಹಾಲನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿದೆ.
ಇದೇ ವೇಳೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿನ ವ್ಯಾಪಾರಿಗಳ ನೋಂದಣಿಗಾಗಿ ವಿಶೇಷ ಅಭಿಯಾನ ನಡೆಸುವಂತೆ ಎಫ್ಎಸ್ಎಸ್ಎಐ ಸೂಚಿಸಿದೆ.ಇದನ್ನು ಓದಿ –ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿಎಂ ಸಿದ್ದರಾಮಯ್ಯ
ಕೆಲವರು ಯಾವುದೇ ನೋಂದಣಿ ಇಲ್ಲದೆ ಹಾಲಿನ ವ್ಯಾಪಾರ ನಡೆಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ರಾಜ್ಯಗಳ ಆಹಾರ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ಲೈಸೆನ್ಸಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗೂ ಹಾಲಿನ ಕಲಬೆರಕೆಯನ್ನು ತಡೆಯಲು ಕಠಿಣ ನಿಗಾವಹಿಸಬೇಕು ಎಂದು ಎಫ್ಎಸ್ಎಸ್ಎಐ ಸೂಚನೆ ನೀಡಿದೆ.








