ಬಳ್ಳಾರಿ, ಏಪ್ರಿಲ್ 8: ಗಣಿನಾಡು ಬಳ್ಳಾರಿಯಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಠಿಣ ಕ್ರಮ ಮುಂದುವರಿದಿದೆ. ಏಪ್ರಿಲ್ 7ರಂದು ಬೆಳಗ್ಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಶಿವಣ್ಣ ಅವರು ಕಳೆದ ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಹತ್ತಕ್ಕೂ ಹೆಚ್ಚು ಭ್ರಷ್ಟಾಚಾರದ ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆ ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ನಿವಾಸ, ಕಚೇರಿ ಹಾಗೂ ಅವರು ಬಳಸುತ್ತಿದ್ದ ಸರ್ಕಾರಿ ಬೊಲೆರೋ ವಾಹನವನ್ನು ಸಹ ಅಧಿಕಾರಿಗಳು ಪರಿಶೀಲಿಸಿದರು. ಸುಮಾರು 12 ಗಂಟೆಗಳ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಪತ್ತೆಯಾದ ಆಸ್ತಿಗಳ ವಿವರ ಹೀಗಿದೆ:
- ಜಮೀನು: ವಿವಿಧ ಪ್ರದೇಶಗಳಲ್ಲಿ ಒಟ್ಟು 44 ಎಕರೆ ಕೃಷಿ ಭೂಮಿ
- ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್ಗಳು
- ಮನೆಗಳು: ನಗರದಲ್ಲೇ 3 ಸುಸಜ್ಜಿತ ಮನೆಗಳು
- ನಗದು: ಮನೆಯಲ್ಲಿ ₹8.5 ಲಕ್ಷ, ಬ್ಯಾಂಕ್ ಖಾತೆಯಲ್ಲಿ ₹20 ಲಕ್ಷ
- ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ
- ವಾಹನಗಳು: ಮೂರು ದ್ವಿಚಕ್ರ ವಾಹನಗಳು
ಇದನ್ನು ಓದಿ –ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಸಂಚು: ಡಿಕೆಶಿ
ಇದರ ಜೊತೆಗೆ ಇನ್ನೂ ಕೆಲವು ಬೇನಾಮಿ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.








