- ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಲಾರಿ ಮಾಲೀಕರ ಸಂಘ
- ಇಂಧನ , ಟೋಲ್ ಶುಲ್ಕ ಏರಿಕೆ ವಿರೋಧಿಸಿ ಲಾರಿ ಮುಷ್ಕರ
ಬೆಂಗಳೂರು : ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳಿಂದ ಕಿರುಕುಳದ ಆರೋಪದ ವಿರುದ್ಧ ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ಕೊಟ್ಟಿದೆ.
ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರು ಏ.14ರವರೆಗೆ ಗಡುವು ನೀಡಿದ್ದರು. ಆದರೆ, ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರಕ್ಕೆ ಮುಂದಾಗಿರುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘ ಹೇಳಿದೆ.
ರಾಜ್ಯದಲ್ಲಿರುವ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆಯನ್ನು ಸ್ಥಗಿತಗೊಳಿಸಲಿದ್ದು, ಹಲವು ಸೇವೆಗಳಿಗೆ ಬಂದ್ ಬಿಸಿ ತಟ್ಟಲಿದೆ.
ಬಂದ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ, ”ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ದರಗಳ ಪರಿಷ್ಕರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಲಾರಿ ಮಾಲೀಕರು, ಪೆಟ್ರೋಲ್ ಬಂಕ್‌ಗಳ ಮಾಲೀಕರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ವಾಣಿಜ್ಯ ಸೇರಿದಂತೆ ಎಲ್ಲ ಸೇವೆಗಳು ಸ್ತಬ್ಧವಾಗಲಿದೆ” ಎಂದಿದ್ದಾರೆ.
ನಮ್ಮ ಬೆಂಬಲವಿಲ್ಲ : ಚನ್ನಾರೆಡ್ಡಿ
ಫೆಡರೇಶನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಚನ್ನಾರೆಡ್ಡಿ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ”ಮುಷ್ಕರದ ಭಯ ಸಾರ್ವಜನಿಕರಿಗೆ ಬೇಡ. ಲಾರಿಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ನಾವು ಈ ಮುಷ್ಕರವನ್ನು ಬೆಂಬಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಮುಷ್ಕರಕ್ಕೆ ಕೈಜೋಡಿಸಲಿರುವ ಸಂಘಗಳು:
ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಸಂಘ, ಪೆಟ್ರೋಲ್ ಬಂಕ್ ಸಂಘಟನೆಗಳು ಬೆಂಬಲ ಸೂಚಿಸಿವೆ. ಏ.15ರಂದು ಏರ್ಪೋರ್ಟ್ ಟ್ಯಾಕ್ಸಿ, ಜಲ್ಲಿಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ 6 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ . ಅಲ್ಲದೇ, ಅಕ್ಕಿ ಲೋಡ್, ಗೂಡ್ಸ್, ಪೆಟ್ರೋಲ್, ಡಿಸೇಲ್ ಸಾಗಾಟ ಲಾರಿಗಳ ಚಾಲಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಬಗ್ಗೆಯ ವಾಣಿಜ್ಯ ವಾಹನಗಳು ಸೇರಿ ಸುಮಾರು 9 ಲಕ್ಷ ವಾಹನಗಳ ಸಂಚಾರ ಸ್ತಬ್ಧಗೊಳ್ಳಲಿವೆ.
- ಪಹಲ್ಗಾಮ್ ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ಪರಾರಿ?
- ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
- ಯೂನಿಯನ್ ಬ್ಯಾಂಕ್‌ನಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗೋವಾ ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
- ಮೈಸೂರು ನಗರದ ವಿವಿಧೆಡೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಬೆದರಿಕೆ