ಮೈಸೂರು: ಚಾಮುಂಡಿ ದೇವಾಲಯದ ಅರ್ಚಕ ವಿ. ರಾಜು ನಿಧನರಾಗಿದ್ದು, ಇದರ ಪರಿಣಾಮವಾಗಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ರಾಜು ಅವರು ಹಲವು ವರ್ಷಗಳಿಂದ ದೇವಾಲಯದಲ್ಲಿ ಶಿವಾರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಸಂಜೆ ಅವರು ವಿಧಿವಶರಾಗಿದ್ದು, ಅಂತ್ಯಕ್ರಿಯೆ ನಂತರ ಮಧ್ಯಾಹ್ನದಿಂದ ಭಕ್ತರಿಗೆ ಪುನಃ ದೇವಿ ದರ್ಶನ ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಇದರಿಂದ ದಸರಾ ಹಬ್ಬದ ಸಂದರ್ಭದಲ್ಲಿ ಸಾವಿರಾರು ಜನರ ಆಗಮನವಾಗಿರುವ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ತೊಂದರೆ ಉಂಟಾಗಿದೆ.
ಇದಕ್ಕೆ ಸಮಾನಾಂತರವಾಗಿ ಮೈಸೂರು ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯಿತು. ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ದಸರಾ ಹಿನ್ನಲೆಯಲ್ಲಿ ಇಂದು ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.
- ಅರಮನೆ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆ ಆರಂಭವಾಗಿದೆ.
- ಬೆಳಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಂಚಕಾವ್ಯದ ಕವಿಗೋಷ್ಠಿ ಆಯೋಜಿಸಲಾಗಿದೆ.
- ಬೆಳಿಗ್ಗೆ 11ಕ್ಕೆ ಜೆಕೆ ಮೈದಾನದಲ್ಲಿ ಮಹಿಳಾ ದಸರಾ ಉದ್ಘಾಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ನಡೆಯಲಿದೆ.
- ಮಧ್ಯಾಹ್ನ 1ಕ್ಕೆ ಕಲಾಮಂದಿರದಲ್ಲಿ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಇದರಲ್ಲಿ ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ.
- ಸಂಜೆ 6ಕ್ಕೆ ಉತ್ತನಹಳ್ಳಿ ಮೈದಾನದಲ್ಲಿ ಯುವ ದಸರಾ ಉದ್ಘಾಟನೆಯಾಗಲಿದೆ. ಸಂಜೆ 7ಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಲೈವ್ ಕಾನ್ಸರ್ಟ್ ಹಾಗೂ ಸ್ಯಾಂಡಲ್‌ವುಡ್ ನೈಟ್ ನಡೆಯಲಿದೆ.
ಇದನ್ನು ಓದಿ –GST ಇಳಿಕೆಯಿಂದ ಕಾರುಗಳ ಭರ್ಜರಿ ಮಾರಾಟ
ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಖಾಸಗಿ ದರ್ಬಾರೂ ಸಾಂಪ್ರದಾಯಿಕವಾಗಿ ಮುಂದುವರಿಯಲಿದೆ.








