ಮೈಸೂರು, ಅ.7 – ನಗರದ ವಸ್ತು ಪ್ರದರ್ಶನ ಮೈದಾನದ ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಘಟನೆಯಲ್ಲಿ ಕ್ಯಾತಮಾರನಹಳ್ಳಿ ನಿವಾಸಿ ಮತ್ತು ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ ಅಲಿಯಾಸ್ ಗಿಲಿಗಿಲಿ ಅವರನ್ನು ಯುವಕರ ಗುಂಪೊಂದು ನಡು ರಸ್ತೆಯಲ್ಲೇ ಕೊಲೆ ಮಾಡಿದೆ.
ಮಧ್ಯಾಹ್ನ ವೆಂಕಟೇಶ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಯುವಕರ ಗುಂಪೊಂದು ಅವರ ಕಾರನ್ನು ತಡೆದು ಆತನನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತು. ತಲೆ, ಕೈ, ಕಾಲು ಮತ್ತು ದೇಹದ ವಿವಿಧ ಭಾಗಗಳ ಮೇಲೆ ನಿರ್ದಯವಾಗಿ ಹಲ್ಲೆ ಮಾಡಿದ ಹಂತಕರು ನಂತರ ಸ್ಥಳದಿಂದ ಪರಾರಿಯಾದರು. ತೀವ್ರ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ನಜರ್‌ಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳು ಬಿಂದುಮಣಿ ಮತ್ತು ಸುಂದರರಾಜ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಕಾರ್ತಿಕ್ ಕೊಲೆ ಪ್ರಕರಣ ನಡೆದಿತ್ತು. ಆ ಘಟನೆಯ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಇದನ್ನು ಓದಿ –ಮಂಡ್ಯ : ಡೈರಿಯಲ್ಲಿ ಭ್ರಷ್ಟಾಚಾರ ಆರೋಪ
ಈ ಕುರಿತು ನಜರ್‌ಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ. ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.








